ಬೆಳಗಾವಿ ರಿಂಗ್‌ ರೋಡ್‌: ಜಮೀನು ಸ್ವಾಧೀನಕ್ಕೆ ಅಧಿಸೂಚನೆ

7
₹ 3,000 ಕೋಟಿ ವೆಚ್ಚದಲ್ಲಿ ನಿರ್ಮಾಣ

ಬೆಳಗಾವಿ ರಿಂಗ್‌ ರೋಡ್‌: ಜಮೀನು ಸ್ವಾಧೀನಕ್ಕೆ ಅಧಿಸೂಚನೆ

Published:
Updated:

ಬೆಳಗಾವಿ: ನಗರ ನಿವಾಸಿಗಳ ಬಹುದಿನಗಳ ಕನಸಾಗಿದ್ದ ವರ್ತುಲ ರಸ್ತೆ (ರಿಂಗ್‌ ರೋಡ್‌) ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು ರಸ್ತೆ ನಿರ್ಮಿಸಲು ಭೂ ಸ್ವಾಧೀನಕ್ಕೆ ಮುಂದಾಗಿದೆ. ಅಂದಾಜು 68.3 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ 427 ಹೆಕ್ಟೇರ್‌ ಜಮೀನು ಸ್ವಾಧೀನಪಡಿಸಲು ಜ.3ರಂದು ಅಧಿಸೂಚನೆ ಹೊರಡಿಸಿದೆ. ಜಮೀನು ಮಾಲೀಕರಾಗಲಿ ಅಥವಾ ಸಾರ್ವಜನಿಕರಾಗಲಿ ಏನಾದರೂ ಆಕ್ಷೇಪಣೆಗಳಿದ್ದರೆ 21 ದಿನಗಳೊಳಗೆ ಸಲ್ಲಿಸುವಂತೆ ಅದು ಸೂಚಿಸಿದೆ.

ಬೆಳಗಾವಿ ನಗರದಲ್ಲಿ ದಿನಂಪ್ರತಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇವುಗಳ ಜೊತೆಗೆ ಗೋವಾ– ಬೆಂಗಳೂರು ಹಾಗೂ ಗೋವಾ– ಮುಂಬೈ ನಡುವೆ ಸಂಚರಿಸುವ ವಾಣಿಜ್ಯ ಉದ್ದೇಶದ ಭಾರಿ ವಾಹನಗಳು ಕೂಡ ನಗರ ಮೂಲಕವೇ ಸಂಚರಿಸುತ್ತಿದ್ದವು. ಇದರಿಂದಾಗಿ ನಗರದೊಳಗಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿತ್ತು. ಸ್ಥಳೀಯ ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿತ್ತು.

ಇದನ್ನು ತಪ್ಪಿಸುವ ಉದ್ದೇಶದಿಂದ ವರ್ತುಲ ರಸ್ತೆ ನಿರ್ಮಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಜನರ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬೆಂಗಳೂರು– ಹುಬ್ಬಳ್ಳಿಯಿಂದ ಬರುವ ವಾಹನಗಳು ಬೆಳಗಾವಿ ಸಮೀಪದ ಹಲಗಾದಿಂದ ಎಡಕ್ಕೆ ತಿರುಗಿ ಮಚ್ಚೆ ಮಾರ್ಗವಾಗಿ ಗೋವಾ ಕಡೆ ಪ್ರಯಾಣ ಬೆಳೆಸಲು ಹಾಗೂ ಗೋವಾದಿಂದ ಪುಣೆ– ಮುಂಬೈ ಕಡೆ ಹೋಗುವ ವಾಹನಗಳಿಗಾಗಿ ಬೆಳಗಾವಿ ಪ್ರವೇಶದ ದ್ವಾರದಲ್ಲಿರುವ ಮಚ್ಚೆಯಿಂದ ಕಾಕತಿಯವರೆಗೆ ರಸ್ತೆ ನಿರ್ಮಿಸಲಿದೆ. ಬೆಂಗಳೂರು ಹಾಗೂ ಪುಣೆ (ಮುಂಬೈ) ನಡುವೆ ಸಂಚರಿಸುವ ವಾಹನಗಳು ಈಗಿನಂತೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರ ಮೂಲಕ ಸಂಚರಿಸಬಹುದಾಗಿದೆ.

ಬೆಳಗಾವಿ ತಾಲ್ಲೂಕಿನ ಸುಮಾರು 29 ಹಳ್ಳಿಗಳ ಮೂಲಕ ವರ್ತುಲ ರಸ್ತೆ ಹಾದುಹೋಗಲಿದೆ. ಸುಮಾರು 427 ಹೆಕ್ಟೇರ್‌ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ ಸರ್ಕಾರಿ ಪ್ರದೇಶಗಳ ಜೊತೆ ಖಾಸಗಿಯವರ ಜಮೀನುಗಳೂ ಸೇರಿವೆ. ವರ್ತುಲ ರಸ್ತೆಯು 4 ಹಾಗೂ 6 ಪಥಗಳ ಅಗಲವನ್ನು ಹೊಂದಿರುತ್ತದೆ.

ರಾಷ್ಟ್ರೀಯ ಹೆದ್ದಾರಿ ಕಾಯ್ದೆ– 1956 ಅಡಿ ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಜಮೀನು ಮಾಲೀಕರಿಗೆ ಅಥವಾ ಸಾರ್ವಜನಿಕರಿಗೆ ಆಕ್ಷೇಪಣೆಗಳಿದ್ದರೆ ಬೆಳಗಾವಿಯ ಉಪವಿಭಾಗಾಧಿಕಾರಿ ಕಚೇರಿ ಅಥವಾ ಸಕ್ಷಮ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ಎ, ಪ್ರಸಾದ ಪ್ಲಾಜಾ, ಎಸ್‌ಬಿಐ ಎದುರು, ಶಿವಬಸವ ನಗರ, ಬೆಳಗಾವಿ ಇಲ್ಲಿಗೆ ಸಲ್ಲಿಸಬಹುದು ಎಂದು ಅಧಿಸೂಚನೆ ತಿಳಿಸಿದೆ.

‘ಬೆಳಗಾವಿ ವರ್ತುಲ ರಸ್ತೆ ನಿರ್ಮಿಸಲು ಭೂಮಿಯನ್ನು ಗುರುತಿಸಲಾಗಿದೆ. ನಿಯಮಾನುಸಾರ ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆಗಳಿದ್ದರೆ 21 ದಿನಗಳೊಳಗೆ ಸಲ್ಲಿಸಬಹುದು’ ಎಂದು ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಹೇಳಿದರು.

₹ 3,000 ಕೋಟಿ ವೆಚ್ಚ: ರಸ್ತೆ ನಿರ್ಮಿಸಲು ಅಂದಾಜು ₹ 3,000 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಈ ಮಾಹಿತಿಯನ್ನು ನೀಡಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !