ಚಿಕ್ಕೋಡಿ: ತಾಲ್ಲೂಕಿನ ಕೇರೂರು ಗ್ರಾಮದಲ್ಲಿ 15-20 ಜನ ಯುವಕ-ಯುವತಿಯರ ಗುಂಪು ಸೇರಿ ಸ್ಥಾಪಿಸಿದ ಉಚಿತ ಗ್ರಂಥಾಲಯ ಹಲವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಗೊಳ್ಳಲು ಸಹಕಾರಿಯಾಗಿದೆ.
ಕಳೆದ 6 ವರ್ಷಗಳ ಹಿಂದೆ ಸ್ಥಾಪಿಸಿದ ಉಚಿತ ಗ್ರಂಥಾಲಯ ಸೇವೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗುತ್ತಿದೆ. ಪ್ರತಿ ದಿನವೂ ಗ್ರಂಥಾಲಯದಲ್ಲಿ ಓದಬಹುದು. ಮನೆಗೆ ಪುಸ್ತಕಗಳನ್ನು ಎರವಲು ಪಡೆದು ಓದಬಹುದಾಗಿದೆ. ಆದರೆ ಎಲ್ಲವೂ ಇಲ್ಲಿ ಉಚಿತ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಬೇಕೆಂಬ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲವಾಗುವ ದೃಷ್ಠಿಯಿಂದ ‘ನಿರ್ಮಾಣ’ ಎಂಬ ಹೆಸರಿನಲ್ಲಿ 2019ರಲ್ಲಿ ಯುವಕ ರವಿ ಪಾಟೀಲ ಎಂಬುವವರ ನೇತೃತ್ವದಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ.
ಸಿದ್ದು ನಾವಿ, ವಿಠ್ಠಲ ಕೇಸ್ತಿ, ಡಿ.ಎ.ನದಾಫ್, ರಾಜು ಮಾಳಿ, ಜಯಶ್ರೀ ಶೆಟ್ಟಿ, ರೇಖಾ ಆಲಗೂರೆ, ಮಾಧುರಿ ಸಿಂಧೆ, ತಮ್ಮಣ್ಣ ಗಡದೆ, ಜನಾರ್ಧನ ಸಾಳುಂಕೆ ಎಂಬ ಯುವಕ-ಯುವತಿಯರೆಲ್ಲರೂ ‘ನಿರ್ಮಾಣ‘ ಗ್ರಂಥಾಲಯ ಪ್ರಾರಂಭಕ್ಕೆ ಕಾರಣರಾದವರು.
ಎಲ್ಲರ ಹಾಗೆಯೇ ಇವರೂ ಸ್ಪರ್ಧಾತ್ಮಕ ಪರೀಕ್ಷೆ ಬರೆದವರು. ಇವರಲ್ಲಿ ಪರೀಕ್ಷೆ ಬರೆದು ಕೆಲವರು ನೌಕರಿ ಹಿಡಿದರೆ, ಇನ್ನು ಕೆಲವರು ಸ್ವಂತ ಉದ್ಯೋಗ ಪ್ರಾರಂಭಿಸಿದ್ದಾರೆ. ಇವರೆಲ್ಲ ಪರೀಕ್ಷೆಗಾಗಿ ಓದಿದ 2-3 ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ಗ್ರಾಮದ ಮನೆಯೊಂದನ್ನು ಬಾಡಿಗೆ ಹಿಡಿದು ಗ್ರಂಥಾಲಯವನ್ನು ಪ್ರಾರಂಭಿಸಿದ್ದಾರೆ. ಅದಕ್ಕೊಬ್ಬ ಗ್ರಂಥಪಾಲಕರನ್ನು ನೇಮಿಸಿದ್ದು, ಪ್ರತಿ ದಿನವೂ ದಿನಪತ್ರಿಕೆ, ವಾರಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗಿರುವ ನಿಯತಕಾಲಿಕೆಗಳನ್ನು ಕೂಡ ತರಿಸಲಾಗುತ್ತಿದೆ. .
6 ವರ್ಷಗಳಲ್ಲಿ ‘ನಿರ್ಮಾಣ‘ ಗ್ರಂಥಾಲಯದ ಅನುಕೂಲತೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದು 30ಕ್ಕೂ ಹೆಚ್ಚು ಯುವಕ-ಯುವತಿಯರು ಸರ್ಕಾರಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಎಫ್ ಡಿ ಎ, ಎಸ್ ಡಿ ಎ, ಪೊಲೀಸ್ ಪೇದೆ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಂಥಾಲಯದಲ್ಲಿ ಇದೀಗ 20 ಸಾವಿರಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯ ಇರುವ ಪುಸ್ತಕಗಳ ಸಂಗ್ರಹವಿದೆ. ಆದರೆ ಯಾವುದನ್ನೂ ಕೂಡ ಇವರು ಹಣ ಕೊಟ್ಟು ಖರೀದಿ ಮಾಡಿಲ್ಲ. ಯಾರಿಂದಲೂ ಹಣ ಪಡೆದುಕೊಂಡಿಲ್ಲ. ಕೇರೂರು ಗ್ರಾಮ ಸೇರಿದಂತೆ ಸಾಕಷ್ಟು ಜನರು ತಮ್ಮ ಜನ್ಮದಿನ, ಪುಣ್ಯ ಸ್ಮರಣೆ, ನಾಮಕರಣ ಮುಂತಾದ ಸಂದರ್ಭಗಳಲ್ಲಿ ಖರ್ಚು ಮಾಡುವ ಹಣವನ್ನೇ ಉಳಿಸಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡಿಸಿದ್ದಾರೆ.
ದಾನಿಗಳ ಸಹಕಾರದಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಆಗಾಗ ಉಪನ್ಯಾಸ ಕಾರ್ಯಕ್ರಮಗಳನ್ನು ಕೂಡ ಗ್ರಂಥಾಲಯದ ವತಿಯಿಂದ ಆಯೋಜಿಲಾಗುತ್ತಿದೆ.
ಸುಸಜ್ಜಿತ ಬಾಡಿಗೆ ಕಟ್ಟಡದಲ್ಲಿ ಆಸನ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ದಿನ ಬೆಳಿಗ್ಗೆ 8 ರಿಂದ 11, ಸಂಜೆ 4 ರಿಂದ ರಾತ್ರಿ 8 ರವರೆಗೆ ಗ್ರಂಥಾಲಯ ತೆರೆದಿರುತ್ತದೆ. ಶುಲ್ಕ ರಹಿತ ಸದಸ್ಯರಾಗಿ ಬೇಕಾಗಿರುವ ಪುಸ್ತಕಗಳನ್ನು ಓದಲು ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.
ಬೇರೆ ಕಡೆಗೆ ಹೋಗಿ ಕೋಚಿಂಗ್ ಕೇಂದ್ರಗಳಲ್ಲಿ ಹಣ ಖರ್ಚು ಮಾಡಿ ತರಬೇತಿ ಪಡೆದುಕೊಳ್ಳುವಷ್ಟು ನಮ್ಮ ಮನೆ ಪರಿಸ್ಥಿತಿ ಚೆನ್ನಾಗಿಲಿಲ್ಲ. ಇಲ್ಲಿನ ಗ್ರಂಥಾಲಯದಲ್ಲಿ ಓದಿ ಪರೀಕ್ಷೆ ಬರೆದು ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ.
–ಕೃಷ್ಣ ಪಾಟೀಲ ಫೈರಮೆನ್ ಬೆಳಗಾವಿ
ನಗರ ಪ್ರದೇಶಗಳಲ್ಲಿ ಸಿಗುವು ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ ದೊರೆತರೆ ಎಷ್ಟೊಂದು ಅನುಕೂಲವಾಗುತ್ತದೆ. ಪ್ರತಿಯೊಂದು ಊರಲ್ಲಿಯೂ ಇಂತಹ ಗ್ರಂಥಾಲಯ ಇರಬೇಕು.
–ರವಿ ಪಾಟೀಲ ಅಧ್ಯಕ್ಷರು ನಿರ್ಮಾಣ ಸಂಸ್ಥೆ ಕೇರೂರ.
ತಮ್ಮೂರಿನ ಯುವಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲವಾಗುವ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದೇನೆ
–ಶ್ರೀಧರ ಮುಚ್ಚಂಡಿಹಿರೇಮಠ ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.