ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮನಗುಡ್ಡಕ್ಕೆ ಹರಿದುಬರುತ್ತಿದೆ ಭಕ್ತರ ದಂಡು

ಮೂರೇ ತಿಂಗಳಲ್ಲಿ ₹ 2.15 ಕೋಟಿ ಮೌಲ್ಯದ ದೇಣಿಗೆ ಸಂಗ್ರಹ
Last Updated 5 ಜುಲೈ 2022, 8:14 IST
ಅಕ್ಷರ ಗಾತ್ರ

ಉಗರಗೋಳ: ಸವದತ್ತಿ ತಾಲ್ಲೂಕಿನ ಉಗರಗೋಳದ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಮೂರು ತಿಂಗಳಲ್ಲಿ ₹ 2.15 ಕೋಟಿ ದೇಣಿಗೆ ಸಂಗ್ರಹವಾಗಿದೆ.

ಯಲ್ಲಮ್ಮನ ಗುಡ್ಡದಲ್ಲಿ ಸೋಮವಾರ ಎರಡನೇ ಹಂತದ ಹುಂಡಿ ಎಣಿಕೆ ನಡೆಯಿತು. ₹ 33.44 ಲಕ್ಷ ನಗದು, ₹ 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 62,390 ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ.

ಕೊರೂನಾ ನಂತರ ಆದಾಯ ಉತ್ತಮ:
ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಯಲ್ಲಮ್ಮನಗುಡ್ಡದಲ್ಲಿ ಕೊರೊನಾ ನಂತರ ಭಕ್ತರ ಸಂಖ್ಯೆ ಹೆಚ್ಚಿದೆ. ತಮ್ಮ ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ದೇವಿಗೆ ಹಣ, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವುದು ರೂಢಿ.

ಇತ್ತೀಚೆಗೆ ನಡೆದ ಮೊದಲ ಹಂತದ ಹುಂಡಿ ಎಣಿಕೆಯಲ್ಲಿ ಬೇರೆಬೇರೆ ದೇಶಗಳ ಕರೆನ್ಸಿ ನೋಟುಗಳು ಕೂಡ ಇದ್ದವು. ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದ್ದು ಇದಕ್ಕೆ ಕಾರಣ.

ಈ ಬಾರಿ ಏ‌ಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ ದೇವಸ್ಥಾನ ಹುಂಡಿಗಳು ತುಂಬಿ ತುಳುಕಿವೆ.

ಈ ಹಿಂದೆ ಬನದ ಹುಣ್ಣಿಮೆ ಹಾಗೂ ಭಾರತ ಹುಣ್ಣುಮೆ ಅವಧಿಯಲ್ಲಿ ಗುಡ್ಡಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಬರುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ವರ್ಷವಿಡೀ ಏಳುಕೊಳ್ಳದ ಯಲ್ಲಮ್ಮನ ಸನ್ನಿಧಿಗೆ ಭಕ್ತರ ಹರಿವು ಇದೆ. ಗುಡ್ಡಕ್ಕೆ ಕಾಣಿಕೆ ರೂಪದಲ್ಲಿ ಬರುವ ಆದಾಯವೂ ಕ್ರಮೇಣವಾಗಿ ಹೆಚ್ಚುತ್ತಿದೆ.

ಮೂಲಸೌಕರ್ಯ ವೃದ್ಧಿಗೆ ಕ್ರಮ:
'ಗುಡ್ಡಕ್ಕೆ ಬರುವ ಆದಾಯ ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. 246 ಕೊಠಡಿಗಳ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿ ಹಂತಕ್ಕೆ ತಲುಪಿದ್ದು, ಅಲ್ಲಿ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು. ಕುಡಿಯುವ ನೀರಿನ ಟ್ಯಾಂಕುಗಳ ನಿರ್ಮಾಣ ಮೂಲಕ ಜಲದಾಹ ನೀಗಿಸಲಾಗುವುದು. ಜಿಲ್ಲಾಧಕಾರಿ ಹಾಗೂ ಶಾಸಕರ ಮಾರ್ಗದರ್ಶನದಲ್ಲಿ ರಸ್ತೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು' ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ದೊಡಗೌಡರ ತಿಳಿಸಿದರು.

ಗುಡ್ಡಕ್ಕೆ ಬರುವ ಆದಾಯ ಹೆಚ್ಚುತ್ತಿರುವುದು ಸಂತಸದ ಸಂಗತಿ. ಭಕ್ತರು ಕಾಣಿಕೆ ನೀಡುವ ಜೊತೆಗೆ ತಂಗುದಾಣ ನಿರ್ಮಾಣದಂತಹ ಕೆಲಸಕ್ಕೆ ನೆರವಾಗುತ್ತಿದ್ದಾರೆ. ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ ಎಂದು ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT