ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಖಾತ್ರಿ’ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೇವೆ

ಜಿಲ್ಲಾ ಪಂಚಾಯಿತಿಯಿಂದ ಅಭಿಯಾನ
Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆಗೆ ಇಲ್ಲಿನ ಜಿಲ್ಲಾ ಪಂಚಾಯಿತಿಯಿಂದ ವಿಶೇಷ ಅಭಿಯಾನ ರೂಪಿಸಲಾಗಿದೆ.

ಜಿಲ್ಲೆಯ ಎಲ್ಲ 506 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ, ವಿಶೇಷವಾಗಿ ಕೆಲಸದ ಸ್ಥಳಕ್ಕೇ ಹೋಗಿ ತಪಾಸಣೆ ನಡೆಸುವುದಕ್ಕೆ ಯೋಜಿಸಲಾಗಿದೆ. ಇಲ್ಲಿ ಈವರೆಗೆ 6.5 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. ಪ್ರಸ್ತುತ ದಿನನಿತ್ಯ 86 ಸಾವಿರದಿಂದ 1 ಲಕ್ಷ ಮಂದಿ ಕೆಲಸ ಮಾಡುತ್ತಿರುತ್ತಾರೆ. ಅವರನ್ನು ತಪಾಸಣೆಗೆ ಒಳಪಡಿಸಿ, ಆರೋಗ್ಯದ ಸಮಸ್ಯೆಗಳಿದ್ದಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜೊತೆಗೆ, ಸಮೀಕ್ಷೆಯೊಂದಿಗೆ ಆರೋಗ್ಯ ಜಾಗೃತಿ ಮೂಡಿಸುವ ಆಶಯವನ್ನೂ ಹೊಂದಲಾಗಿದೆ.

ಪ್ರತಿ ತಾಲ್ಲೂಕಿನಲ್ಲೂ ಇಬ್ಬಿಬ್ಬರು ವೈದ್ಯರನ್ನೊಳಗೊಂಡ 6ರಿಂದ 7 ತಂಡಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ. 15 ದಿನಗಳಲ್ಲಿ ಅಭಿಯಾನ ಮುಗಿಸಲು ಯೋಜಿಸಲಾಗಿದೆ. ಗಂಭೀರ ಕಾಯಿಲೆಗಳಿದ್ದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಇದರೊಂದಿಗೆ, ಕೂಲಿಕಾರ್ಮಿಕರ ಆರೋಗ್ಯದ ಸ್ಥಿತಿಗತಿಯನ್ನು ಅರಿಯುವ ಉದ್ದೇಶವನ್ನೂ ಹೊಂದಲಾಗಿದೆ.

ಚಿಕಿತ್ಸೆ ಕೊಡಿಸಲಾಗುವುದು

‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (ಆರ್‌ಬಿಎಸ್‌ಕೆ) ಮೂಲಕ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ನಿಯಮಿತವಾಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಯೋಜನೆ ಇದೆ. ಪ್ರಸ್ತುತ ಕೋವಿಡ್–19 ಸೋಂಕು ಹರಡದಂತೆ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಕೊಡಲಾಗಿದೆ. ಹೀಗಾಗಿ, ಆಯುಷ್‌ ವೈದ್ಯರನ್ನು ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಬಳಸಿಕೊಳ್ಳುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಯರು ಹಾಗೂ 50 ವರ್ಷ ದಾಟಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಧುಮೇಹ ನ್ಯೂನತೆ ಹಾಗೂ ಅಧಿಕ ರಕ್ತದೊತ್ತಡ ಕಂಡುಬಂದಲ್ಲಿ ಎನ್‌ಸಿಡಿ (ಸಾಂಕ್ರಾಮಿಕವಲ್ಲದ ರೋಗಗಳು) ಕ್ಲಿನಿಕ್‌ಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುವುದು. ಅಗತ್ಯ ಔಷಧಿಯನ್ನೂ ಒದಗಿಸಲಾಗುವುದು. ಜುಲೈ ಮೊದಲ ವಾರದಿಂದ ಅಭಿಯಾನ ಆರಂಭಿಸಲಾಗುವುದು. ಕೂಲಿಕಾರ್ಮಿಕರಲ್ಲಿ ಶೇ 50ಕ್ಕಿಂತಲೂ ಹೆಚ್ಚಿನವರು ಮಹಿಳೆಯರೇ ಇದ್ದಾರೆ. ಅವರಿಗೆ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಮೊದಲಾದ ಸಮಸ್ಯೆಗಳ ತಪಾಸಣೆಯನ್ನೂ ನಡೆಸಲಾಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT