ಬಂದ್‌ಗೆ ಬೆಳಗಾವಿ ಜಿಲ್ಲೆಯಲ್ಲಿ ಮಿಶ್ರ ‍ಪ್ರತಿಕ್ರಿಯೆ, ಬಸ್‌, ಆಟೊ ಸಂಚಾರವಿಲ್ಲ

7
ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು

ಬಂದ್‌ಗೆ ಬೆಳಗಾವಿ ಜಿಲ್ಲೆಯಲ್ಲಿ ಮಿಶ್ರ ‍ಪ್ರತಿಕ್ರಿಯೆ, ಬಸ್‌, ಆಟೊ ಸಂಚಾರವಿಲ್ಲ

Published:
Updated:
Deccan Herald

ಬೆಳಗಾವಿ: ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಸೋಮವಾರ ನಡೆಸಿದ ‘ಭಾರತ ಬಂದ್‌’ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆಯಿಂದ ಸಂಜೆವರೆಗೂ ಸಾರಿಗೆ ಬಸ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳ ಓಡಾಟ ಸ್ತಬ್ಧಗೊಂಡಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಕೆಲವೇ ಆಟೊರಿಕ್ಷಾಗಳಷ್ಟೇ ರಸ್ತೆಗಿಳಿದಿದ್ದವು. ನಗರ ಹಾಗೂ ಕೇಂದ್ರ ಬಸ್‌ ನಿಲ್ದಾಣಗಳು ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿದ್ದವು. ಮುಂಜಾಗ್ರತಾ ಕ್ರಮವಾಗಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಕೊಲ್ಲಾಪುರ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ರಸ್ತೆ ಹೊರತುಪಡಿಸಿದರೆ ನಗರದಾದ್ಯಂತ ಅಂಗಡಿ–ಮುಂಗಟ್ಟುಗಳು ತೆರೆದಿದ್ದವು. ಬ್ಯಾಂಕ್‌ಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದವು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಸಂಜೆ ನಂತರ ಜನಜೀವನ ಸಹಜಸ್ಥಿತಿಗೆ ಮರಳಿತು. 

ಸರಣಿ ಪ್ರತಿಭಟನೆ

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಂಧನ ಬೆಲೆಯನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಫಿರೋಜ್‌ ಸೇಠ್‌ ಮಾತನಾಡಿ, ‘ಕೇಂದ್ರ ಬಿಜೆಪಿ ಸರ್ಕಾರವು ಜನ ವಿರೋಧಿಯಾಗಿದೆ. ಆ ಸರ್ಕಾರವು ವಿಧಿಸಿರುವ ತೆರಿಗೆಗಳ ಪರಿಣಾಮ, ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ. ಇದರಿಂದ, ಜನಸಾಮಾನ್ಯರು, ರೈತರು, ಸಣ್ಣ ವ್ಯಾಪಾರಿಗಳು ತೀವ್ರ ತೊಂದರೆಯಾಗಿದೆ. ಚುನಾವಣಾ ಪೂರ್ವದಲ್ಲಿ ಜನರಿಗೆ ಹಲವು ಭರವಸೆಗಳನ್ನು ನೀಡಿದ್ದ ನರೇಂದ್ರ ಮೋದಿ, ಅವುಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ’ ಎಂದು ದೂರಿದರು.

ನಂತರ ಕಾರ್ಯಕರ್ತರು ಮಾನವ ಸರ‍ಪಳಿ ರಚಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್‌, ಯುವ ಘಟಕದ ಅಧ್ಯಕ್ಷ ಫೈಜಾನ್‌ ಸೇಠ್‌, ನಗರಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ ನೇತೃತ್ವ ವಹಿಸಿದ್ದರು.

ಜೆಡಿಎಸ್

ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಮುಖಂಡರಾದ ಜಿ.ಎಸ್. ಗೋಕಾಕ, ಈರಣ್ಣ ರೇವಡಿ, ಗುರುರಾಜ ಹುಳ್ಳೇರ, ತಾಹೀರ್‌ಖಾನ್ ಪಠಾಣ, ಅಖಿಲಾ ಪಠಾಣ ಭಾಗವಹಿಸಿದ್ದರು.

ಆಟೊರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಧ್ಯಕ್ಷ ಮನಸೂರ ಹೊನಗೇಕರ, ಉಪಾಧ್ಯಕ್ಷ ಗೌತಮ ಕಾಂಬಳೆ ಹಾಗೂ ಮೆಹಬೂಬಲಿ ನದಾಫ ಪಾಲ್ಗೊಂಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಅಹ್ಮದ್ ಹಿರೇಕುಡಿ ನೇತೃತ್ವದಲ್ಲಿ, ಚಕ್ಕಡಿ ಮೆರವಣಿಗೆ ನಡೆಸಿ ಗಮನಸೆಳೆದರು. ‘ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಹೋದರೆ ಮುಂದಿನ ದಿನಗಳಲ್ಲಿ ಚಕ್ಕಡಿಗಳನ್ನೇ ಅವಲಂಬಿಸಬೇಕಾಗುತ್ತದೆ’ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಅಣಕಿಸಿದರು.

‘ಇಂಧನ ಬೆಲೆ ಏರಿಕೆಗೆ ನಮ್ಮ ವಿರೋಧವಿದೆ. ಆದರೆ, ಬಂದ್‌ಗೆ ಬೆಂಬಲವಿಲ್ಲ’ ಎಂದು ತಿಳಿಸಿದರು.

ಮುಖಂಡರಾದ ಪ್ರಭು ಕಾಕತೇಕರ, ಆನಂದ ಬಡಿಗೇರ, ರವಿ ಹಿರೇಮಠ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !