ಮಂಗಳವಾರ, ಜೂನ್ 28, 2022
27 °C
ತೈಲ ಬೆಲೆ ಏರಿಕೆ ಖಂಡಿಸಿ ‍ಪ್ರತಿಭಟನೆ

ಜನರಿಗೆ ಬರೆ ಎಳೆದ ಬಿಜೆಪಿ ಸರ್ಕಾರ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಜನರ ಗಾಯದ ಮೇಲೆ ಬರೆ ಎಳೆಯುತ್ತಿದೆ. ದುರಾಡಳಿತದಿಂದಾಗಿ ಬಡವರು, ಮಧ್ಯಮ ವರ್ಗದವರ ಜೀವನ ಅಲ್ಲೋಲ–ಕಲ್ಲೋಲವಾಗಿದೆ’ ಎಂದು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕಿಡಿಕಾರಿದರು.

ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ತಾಲ್ಲೂಕಿನ ಹಿಂಡಲಗಾ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರುತ್ತಿರುವುದರಿಂದ ಇತರ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚುತ್ತಿದೆ. ಪರಿಣಾಮ, ಜನರು ಜೀವನ ನಡೆಸುವುದಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರು ಈ ಸರ್ಕಾರಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ದೂರಿದರು.

‘ಇದು ಕಾಂಗ್ರೆಸ್ ಪ್ರತಿಭಟನೆ ಅಲ್ಲ. ಜನಸಾಮಾನ್ಯರ ಪ್ರತಿಭಟನೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌, ವಿದ್ಯುತ್ ಹೀಗೆ... ಎಲ್ಲದರ ಬೆಲೆಯೂ ಗಗನಕ್ಕೇರಿದೆ. ಒಳ್ಳೆಯ ದಿನಗಳು ಬರುತ್ತವೆ ಎನ್ನುವುದು ಕನಸಾಗಿಯೇ ಉಳಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷವು ಜನಸಾಮಾನ್ಯರ ಸಂಕಷ್ಟದಲ್ಲಿ ಮೊದಲಿನಿಂದಲೂ ನಿಲ್ಲುತ್ತಾ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.50ರಷ್ಟು ತೆರಿಗೆ ಕಡಿಮೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ಲೀಟರ್ ಪೆಟ್ರೋಲ್ ಬೆಲೆ ₹ 58, ಡೀಸೆಲ್‌ ಬೆಲೆ ₹ 45 ಇತ್ತು. ಆದರೆ, ಈಗ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಬೆಲೆ ಹೆಚ್ಚಾಗುತ್ತಲೇ ಇದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಮತ್ತು ಬಡವರಿಗೆ ತೊಂದರೆ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಿಜೆಪಿಯು ಕೆಟ್ಟ ದಿನಗಳನ್ನು ಜನಸಾಮಾನ್ಯರ ಎದುರು ತಂದಿದೆ. ಜನರನ್ನು ಇನ್ನು ಮುಂದೆಯೂ ಮೂರ್ಖರನ್ನಾಗಿಸಲು ಆಗುವುದಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಬಡವರ ಕಷ್ಟಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸವಾರರೊಬ್ಬರ ದ್ವಿಚಕ್ರವಾಹನಕ್ಕೆ ಶಾಸಕಿ ಸ್ವತಃ ಪೆಟ್ರೋಲ್‌ ತುಂಬಿದರು. ಕಾರ್ಯಕರ್ತರು ತಮ್ಮ ದ್ವಿಚಕ್ರವಾಹನಗಳನ್ನು ಬಂಕ್ ಎದುರು ಮಲಗಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಪೆಟ್ರೋಲ್ ₹ 100 ನಾಟ್ ಔಟ್ ಇನ್ನೂ ಆಟ ನಡೆಯುತ್ತಿದೆ’, ‘ತೊಲಗಲಿ ತೊಲಗಲಿ ಮೋದಿ ವೈರಸ್ ತೊಲಗಲಿ’ ಎಂಬಿತ್ಯಾದಿ ಘೋಷಣೆಗಳ  ಫಲಕಗಳನ್ನು ಅವರು ಹಿಡಿದಿದ್ದರು.

ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು