ಶನಿವಾರ, ಆಗಸ್ಟ್ 20, 2022
21 °C
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ

ಅಥಣಿಗೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರು ಅಥಣಿಗೆ ಹಲವು ಯೋಜನೆಗಳನ್ನು ನೀಡಿದ್ದರು. ಆದರೆ, ಈಗಿನ ಬಿಜೆಪಿ ಸರ್ಕಾರ ಈ ಭಾಗಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಗೋ ಹತ್ಯೆ ನಿಷೇಧಿಸಲು ಮುಂದಾಗಿರುವ ಸರ್ಕಾರ, ರೈತ ವಿರೋಧಿ ಕಾನೂನು ರೂಪಿಸುತ್ತಿದೆ. ಇದರಿಂದಾಗಿ ರೈತರಿಗೆ ಮುಂದಿನ ದಿನಗಳಲ್ಲಿ ಜಾನುವಾರು ಮಾರಾಟ ಮಾಡುವಾಗ ತೊಂದರೆ ಉಂಟಾಗುತ್ತದೆ. ವಿದೇಶಕ್ಕೆ ಮಾಂಸ ರಫ್ತು ವಹಿವಾಟು ನಿಲ್ಲಿಸಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಹಾಗೂ ಅವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಸಂತ್ರಸ್ತರಿಗೆ ಈವರೆಗೂ ಸರ್ಕಾರದಿಂದ ಸಮರ್ಪಕ ಪರಿಹಾರ ಸಿಕ್ಕಿಲ್ಲ’ ಎಂದು ದೂರಿದರು.

ಶಾಸಕ ಎಂ.ಬಿ. ಪಾಟೀಲ, ‘ನಾನು ಗೋ ಹತ್ಯೆ ನಿಷೇಧಿಸುವುದನ್ನು ಸ್ವಾಗತಿಸುತ್ತೇನೆ. ಆದರೆ ದೇಶದಿಂದ ಗೋ ಮಾಂಸ ರಫ್ತು ಮಾಡುವುದನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ. ಜಾನುವಾರಿಗೆ ವಯಸ್ಸಾದರೆ ಸರ್ಕಾರವೇ ರೈತರಿಂದ ನೇರವಾಗಿ ಖರೀದಿಸಿ ಸಾಕಲಿ’ ಎಂದರು.

ಮುಖಂಡರಾದ ಗಜಾನನ ಮಂಗಸೂಳಿ, ಸಿದ್ದಾರ್ಥ ಸಿಂಗೆ, ಸುನೀಲ ಸಂಕ, ಬಸವರಾಜ ಬುಟಾಳಿ, ಸುನೀತಾ ಐಹೋಳೆ, ಧರೆಪ್ಪ ಠಕ್ಕಣ್ಣವರ, ಸದಾಶಿವ ಬುಟಾಳಿ, ಶ್ರೀಕಾಂತ ಪೂಜಾರಿ, ನಿಶಾಂತ ದಳವಾಯಿ, ರಾವಸಾಬ ಐಹೊಳೆ, ಸುರೇಶಗೌಡ ಪಾಟೀಲ, ಅಸ್ಲಮ್ ನಾಲಬಂದ, ಅನಿಲ ಸುಣಧೋಳಿ, ಶಿವಾನಂದ ಗುಡ್ಡಾಪೂರ, ತೌಸಿಫ ಸಾಂಗಲೀಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.