ಬೆಳಗಾವಿ: ‘ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಯಾರು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೂ, ಸರ್ಕಾರದ ನಿರ್ಧಾರಕ್ಕೆ ಗೆಲುವಾಗಲಿದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಕ್ಕಲಿಗರು ಹಾಗೂ ಲಿಂಗಾಯತ ಸಮಾಜಕ್ಕೆ ನೀಡಿದ ಮೀಸಲಾತು, ಪರಿಶಿಷ್ಟರಿಗೆ ಮೀಸಲಾತಿ ಪ್ರಮಾಣದಲ್ಲಿ ಮಾಡಿದ ಹೆಚ್ಚಳ ಹಾಗೂ ಈಗ ತೆಗೆದುಕೊಂಡ ಒಳ ಮೀಸಲಾತಿ ನಿರ್ಣಯಗಳು ಐತಿಹಾಸಿಕವಾದವು. ಭಾರತ ಸ್ವಾತಂತ್ರ್ಯ ಆದಾಗಿನಿಂದ ದೇಶದ ಯಾವುದೇ ಮುಖ್ಯಮಂತ್ರಿ ಇಷ್ಟ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.
‘ಶೋಷಿತ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂಬುದು ಡಾ.ಅಂಬೇಡ್ಕರ್ ಅವರ ಚಿಂತನೆ ಆಗಿತ್ತು. ಒಳಮೀಸಲಾತಿ ಮೂಲಕ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತಂದಿದೆ. ಯಾವುದೇ ಸಮಾಜಕ್ಕೆ ಅನ್ಯಾಯ ಆಗದಂತೆ ಎಚ್ಚರಿಕೆಯಿಂದ, ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡಿದ್ದು ಇದರ ವಿಶೇಷ’ ಎಂದೂ ಅವರು ಹೇಳಿದರು.
‘ಮೀಸಲಾತಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಪ್ರಬುದ್ಧರಂತೆ ಮಾತನಾಡುತ್ತಿದ್ದಾರೆ. ಹೀಗೇ ಮಾತನಾಡುತ್ತ ಹೋದರೆ ಅವರು ಹಾಗೂ ಅವರ ಪಕ್ಷ ದಿವಾಳಿಯಾಗುತ್ತದೆ. ನಾವು ಯಾರದೋ ಮೀಸಲಾತಿ ಕಿತ್ತುಕೊಂಡು ಇನ್ಯಾರಿಗೋ ಕೊಟ್ಟಿಲ್ಲ. ಬದಲಾಗಿ, ಎಲ್ಲ ಸಮಾಜಗಳಿಗೂ ಅವರ ಪಾಲಿನ ಹಕ್ಕು ನೀಡಿದ್ದೇವೆ’ ಎಂದರು.
‘ಲಿಂಗಾಯತ ಸಮಾಜದ ಸ್ವಾಮೀಜಿಗಳು, ಒಕ್ಕಲಿಗ ಸಮುದಾಯ, ಪರಿಶಿಷ್ಟರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಇದು ಅತ್ಯಂತ ಸೂಕ್ಷ್ಮ ವಿಷಯವಾದ್ದರಿಂದ ಯಾರೊಬ್ಬರೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಆಗಿರಲಿಲ್ಲ. ನಮ್ಮ ಮುಖ್ಯಮಂತ್ರಿ ಅವರು ಪರಿಶಿಷ್ಟರಿಗೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದರು, ಹೋರಾಟ ಮಾಡಿದ ಸಮಾಜಗಳಿಗೂ ನ್ಯಾಯ ಕೊಟ್ಟರು’ ಎಂದೂ ಅವರು ಹೇಳಿದರು.
‘ಮೀಸಲಾತಿ ನಿರ್ಣಯಗಳನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಯಾರು ಬೇಕಾದರೂ ನ್ಯಾಯಾಲಯದಲ್ಲಿ ಮೀಸಲಾತಿ ಪ್ರಶ್ನೆ ಮಾಡಬಹುದು. ಆದರೆ, ಕೊನೆಗೆ ಸರ್ಕಾರದ ನಿರ್ಧಾರಕ್ಕೇ ಜಯ ಸಿಗುತ್ತದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡ, ಕಂಚಿ, ಮಾದಮ್ಮನವರ, ಪೂಜಾರಿ ಇತರ ಮುಖಂಡರು ಇದ್ದರು.
*
ಪ್ರತಿಮೆಗಳ ಲೋಕಾರ್ಪಣೆ ಇಂದು
ಇಲ್ಲಿನ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಮಾರ್ಚ್ 28ರಂದು ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣ ಮಾಡಲಿದ್ದಾರೆ.
ಈ ಭಾಗದ ಜನರ ಬೇಡಿಕೆಯಂತೆ ಬೊಮ್ಮಾಯಿ ಅವರು ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
‘ಬೊಮ್ಮಾಯಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.
‘ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿರುವರು’ ಎಂದರು.
*
ಪ್ರತಿಮೆಗಳ ಸಂಕ್ಷಿಪ್ತ ಮಾಹಿತಿ
‘₹ 1.08 ಕೋಟಿ ವೆಚ್ಚದಲ್ಲಿ ರಾಣಿ ಚನ್ನಮ್ಮನ ಪ್ರತಿಮೆ ಹಾಗೂ ₹3.08 ಕೋಟಿ ವೆಚ್ಚದಲ್ಲಿ ಇದರ ಸುತ್ತಲಿನ ಉದ್ಯಾನ, ರಸ್ತೆ, ಪೀಠ ಕಾಮಗಾರಿ ಮಾಡಲಾಗಿದೆ’ ಎಂದು ಸುವರ್ಣ ವಿಧಾನಸೌಧದ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಚಿದಾನಂದ ಯಡಗುಡೆ ಮಾಹಿತಿ ನೀಡಿದರು.
‘₹72 ಲಕ್ಷ ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸಿದ್ಧಗೊಂಡಿದೆ. ₹ 1.10 ಕೋಟಿ ವೆಚ್ಚದಲ್ಲಿ ಇದರ ಪೀಠ ನಿರ್ಮಿಸಲಾಗಿದೆ. ಅದೇ ರೀತಿ ₹ 72 ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಹಾಗೂ ₹1 ಕೋಟಿ ವೆಚ್ಚದಲ್ಲಿ ಪೀಠ ನಿರ್ಮಾಣ ಮಾಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.