ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಅವರಿಗೆ ಟೆನ್ಷನ್ ಕೊಡುತ್ತಲೇ ಇರ್ತೇವೆ: ಯತ್ನಾಳ ಎಚ್ಚರಿಕೆ

Last Updated 5 ಮೇ 2022, 14:02 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ನೀಡಲು ಒಪ್ಪಿದ್ದ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ಈಡೇರಿಸದೆ ಮನೆಗೆ ಹೋದರು. ಕೊಡದಿದ್ದರೆ ನೀವೂ ಹೋಗುತ್ತೀರಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಎಚ್ಚರಿಕೆ ನೀಡಿದರು.

ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಗುರುವಾರ ನಡೆದ ಬೃಹತ್‌ ಪ್ರತಿಭಟನಾ ಸಮಾವೇಶ– ‘ಶರಣು ಶರಣಾರ್ಥಿ ಮತ್ತು ಬೈಕ್‌ ರ‍್ಯಾಲಿ’ ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು (ಬೊಮ್ಮಾಯಿ) ಪ್ರತಿನಿಧಿಸುವ ಕ್ಷೇತ್ರದಲ್ಲಿ ನಮ್ಮ ಜಾತಿಯವರದ್ದು 55ಸಾವಿರ ಮತಗಳಿವೆ. ಅದು ಗಮನದಲ್ಲಿರಲಿ’ ಎಂದರು.

‘ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಒಪ್ಪಿದ್ದಾರೆ. 6 ತಿಂಗಳು ಸಮಯ ಕೇಳಿದ್ದಾರೆ. ಸಮಿತಿ ರಚಿಸಿದ್ದಾರೆ. ಯಡಿಯೂರಪ್ಪ ಹರಿಹರದವರ ಮಾತು ಕೇಳಿ ಹೋದರು; ನೀವು ಕಿವಿ ಕಚ್ಚುವವರ ಮಾತು ಕೇಳಿ ಹೋಗುವುದು ಬೇಡ’ ಎಂದು ಕಿವಿಮಾತು ಹೇಳಿದರು.

‘ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಬಂದಾಗ ಬದಲಾವಣೆಗಳು ಆಗಬಹುದೆಂದು ಮುಖ್ಯಮಂತ್ರಿ ಟೆನ್ಷನ್ ಮಾಡಿಕೊಂಡಿದ್ದರು. ಆದರೆ, ಅದು ಸುಳ್ಳಾಗಿದೆ. ಆದರೆ, ಪಂಚಮಸಾಲಿಗಳಿಗೆ ಮೀಸಲಾತಿ ನೀಡುವುದು ತಪ್ಪಿದರೆ ಮುಖ್ಯಮಂತ್ರಿಗೆ ಮತ್ತೊಂದು ಭಯ ಖಂಡಿತ ಎದುರಾಗುತ್ತದೆ. ನಾವು ಅವರಿಗೆ ಟೆನ್ಷನ್ ಕೊಡುತ್ತಲೇ ಇರುತ್ತೇವೆ’ ಎಂದು ಹೇಳಿದರು.

‘1994ರಿಂದಲೂ ಬೈಕೊಂತಲೇ ಬಂದಿದ್ದೇನೆ. ಬೈಯ್ಯುವುದು ಆರಿಸಿ ಬರುವುದೇ ಆಗಿದೆ. ಜನರಿಗೂ ನನ್ನ ಸ್ವಭಾವ ಗೊತ್ತಿದೆ. ತಲೆಕೆಟ್ಟು ಮತ ಹಾಕುತ್ತಿದ್ದಾರೆ. ನನ್ನ ಮೇಲೆ ಯಾವುದೇ ಅಕ್ರಮದ ಆರೋಪವಿಲ್ಲ. ಭ್ರಷ್ಟಾಚಾರ ಎಸಗಿಲ್ಲ. ದೇವರು ಸೀದಾಸೀದಾ ಕೊಡುತ್ತಿದ್ದಾನೆ; ಕಳವನ್ನೇಕೆ ಮಾಡಲಿ?’ ಎಂದು ಕೇಳಿದರು.

‘10 ಲಕ್ಷ ಮಂದಿ ಸೇರಿಸಬೇಕಾದರೆ ರಾಜಕಾರಣಿಗಳಿಗೆ ₹ 10 ಕೋಟಿ ಬೇಕಾಗುತ್ತದೆ. ಆದರೆ, ಸಮಾಜದ ಶ್ರೀಗಳ ಕರೆಗೆ ಓಗೊಟ್ಟು ಜನರು ಬೆಂಗಳೂರಿನಲ್ಲಿ ಸೇರಿದರು. ನಮ್ಮ ಹೋರಾಟದ ಕಾವು ದೆಹಲಿವರೆಗೂ ತಲು‍ಪಿದೆ. ‍ಪ್ರಧಾನಿ ಕಚೇರಿವರೆಗೂ ವಿಷಯ ಹೋಗಿದೆ’ ಎಂದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಮೀಸಲಾತಿಗಾಗಿ ‘ಮಾಡು ಇಲ್ಲವೇ ಮಡಿ’ ಹೋರಾಟ

ರಾಮದುರ್ಗ (ಬೆಳಗಾವಿ ಜಿಲ್ಲೆ): ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರಗಳು ಕೇವಲ ಮನವಿ ಸ್ವೀಕರಿಸಿ ಕೈಬಿಡುತ್ತಿವೆ. ಈಗ 14 ದಿನಗಳ ಕೂಡಲಸಂಗಮದ ಸತ್ಯಾಗ್ರಹದ ನಂತರ ‘ಮಾಡು ಇಲ್ಲವೆ ಮಡಿ’ ಮಾದರಿಯಲ್ಲಿ ಮೀಸಲಾತಿ ಹೋರಾಟ ತೀವ್ರಗೊಳಿಸಲಾಗಿದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರದ 2ಎ ಮತ್ತು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

‘ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ 27 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಈಗಾಗಲೇ ಪಾದಯಾತ್ರೆ, ಪ್ರತಿಜ್ಞಾ ಸಮಾವೇಶ ಮತ್ತು ಸತ್ಯಾಗ್ರಹ ನಡೆಸಲಾಗಿದೆ. ಆದರೂ, ಸರ್ಕಾರ ಸ್ಪಂದಿಸುತ್ತಿಲ್ಲ. ಹಿಂದಿನ ಮುಖ್ಯಮಂತ್ರಿಯಂತೆ ಈಗಿನ ಮುಖ್ಯಮಂತ್ರಿ ಕೈಕೊಡಬಾರದು ಎಂದು ಹೋರಾಟ ತೀವ್ರಗೊಳಿಸಲಾಗಿದೆ’ ಎಂದರು.

‘ರಾಜ್ಯದ ಪ್ರತಿ ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಕೊಡುವುದು, ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಗುವುದು. ಸರ್ಕಾರ ಇದಕ್ಕೂ ಮಣಿಯದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಕೀಲ ಪಿ.ಎಫ್. ಪಾಟೀಲ, ಮಾರುತಿ ಕೊಪ್ಪದ, ಸಿ.ಬಿ. ಪಾಟೀಲ, ಬಿ.ಎಫ್. ಬಸಿಡೋಣಿ, ಶ್ರೀದೇವಿ ಮಾದನ್ನವರ, ಪರೂತಗೌಡ ಪಾಟೀಲ, ಜಿ.ವಿ. ನಾಡಗೌಡ್ರ, ಶಾಸನಗೌಡ ಪಾಟೀಲ, ವೈ.ಎಚ್. ಪಾಟೀಲ ಇದ್ದರು.

ಇಲ್ಲಿನ ತೇರ್‌ ಬಜಾರ್‌ನಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ಗೆ ಸ್ವಾಮೀಜಿ ಮತ್ತು ಮುಖಂಡರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT