ಬುಧವಾರ, ಫೆಬ್ರವರಿ 26, 2020
19 °C

ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ: ಮುಚ್ಚಳಿಕೆ ನೀಡಲು ಸೂಚಿಸಿದ ಡಿಸಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕರ್ನಾಟಕ ರಾಜ್ಯೋತ್ಸವ ಬಹಿಷ್ಕರಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯವರು ನ. 1ರಂದು ನಗರದಲ್ಲಿ ನಡೆಸುವ ಕರಾಳ ದಿನಾಚರಣೆ ಅನುಮತಿ ನೀಡಬೇಕೋ, ಬೇಡವೋ ಎನ್ನುವುದನ್ನು ಬುಧವಾರ (ಅ.31)ರಂದು ನಿರ್ಧರಿಸಲಾಗುವುದು’ ಎಂದು ಡಿಸಿಪಿ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಸೀಮಾ ಲಾಟ್ಕರ್‌ ತಿಳಿಸಿದರು.

‘ಅತ್ಯಂತ ಸೂಕ್ಷ್ಮ ವಿಚಾರ ಇದಾಗಿರುವುದರಿಂದ ಮಾರ್ಕೆಟ್ ಠಾಣೆ ಇನ್‌ಸ್ಪೆಕ್ಟರ್‌ ವರದಿ ಅಧರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಂಇಎಸ್ ಪದಾಧಿಕಾರಿಗಳಾದ ದೀಪಕ ದಳವಿ, ಮನೋಹರ ಕಿಣೇಕರ, ಮಾಳೋಜಿ ಅಷ್ಟೇಕರ ಹಾಗೂ ನಿಂಗೋಜಿ ಉದ್ದಾರ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ನಗರದಲ್ಲಿ ಶಾಂತಿ ಕಾಪಾಡುವುದು ಹಾಗೂ ಒಳ್ಳೆಯ ನಡತೆ ಕುರಿತು ವರ್ಷದ ಅವಧಿಗೆ ಅವರಿಂದ ತಲಾ ₹5 ಲಕ್ಷಗಳ ಸ್ವಯಂ ಮುಚ್ಚಳಿಕೆ ನೀಡಬೇಕು. ಅಷ್ಟೇ ಮೊತ್ತದ ಮುಚ್ಚಳಿಕೆಯನ್ನು ಬೇರೆ ಇಬ್ಬರಿಂದ ಬರೆಸಿಕೊಂಡು ಅ.31ರ ಸಂಜೆ 4ಕ್ಕೆ ತಮ್ಮ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ಸಂಭಾಜಿ ಉದ್ಯಾನದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿ ಜನರನ್ನು ಪ್ರೇರೇಪಿಸಿ ನಗರ ಶಾಂತಿ ಕದಡುವ ಸಂಭವವಿದೆ. ಹೀಗಾಗಿ, ಶಾಂತ ರೀತಿಯಿಂದ ನಡೆದುಕೊಳ್ಳುತ್ತೇವೆ ಎಂದು ಮುಚ್ಚಳಿಕೆ ನೀಡುವಂತೆ ಮುಖಂಡರಿಗೆ ತಿಳಿಸಲಾಗಿದೆ. ಅವರು ಮುಚ್ಚಳಿಕೆ ಕೊಟ್ಟ ಬಳಿಕವಷ್ಟೇ ಅನುಮತಿ ಕೊಡುವ ಕುರಿತು ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು