ಸೋಮವಾರ, ಸೆಪ್ಟೆಂಬರ್ 27, 2021
21 °C
ಆರ್‌ಪಿಡಿ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್

ನಾಮಫಲಕ ಅಳವಡಿಕೆ, ತೆರವು: ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಆರ್‌‌ಪಿಡಿ ವೃತ್ತದಲ್ಲಿ ಕೆಲವು ಯುವಕರು ಮಂಗಳವಾರ ನಸುಕಿನಜಾವ ಏಕಾಏಕಿ ಅಳವಡಿಸಿದ್ದ ‘ರಾಜವೀರ ಮದಕರಿ ನಾಯಕ ವೃತ್ತ’ ಎಂದು ಫಲಕವನ್ನು ಪೊಲೀಸರು ತೆರವುಗೊಳಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವಾಲ್ಮೀಕಿ ನಾಯಕ ಸಮುದಾಯದ ಯುವಕರು ಕನ್ನಡ, ಮರಾಠಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಬರೆದಿರುವ ಫಲಕವನ್ನು ಹಾಕಿ, ವೃತ್ತಕ್ಕೆ ನಾಮಕರಣ ಮಾಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಫಲಕವನ್ನು ತೆರವುಗೊಳಿಸಿದರು. ‘ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದು ಫಲಕ ಅಳವಡಿಸಬೇಕು; ಹೀಗೆ ಅನಧಿಕೃತವಾಗಿ ಅಳವಡಿಸುವುದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು.‌

ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ಪ್ರಕರಣ ದಾಖಲು: ‘ಅನಧಿಕೃತವಾಗಿ ಫಲಕ ಅಳವಡಿಸಿ ಗೊಂದಲ ಉಂಟು ಮಾಡಿದ 34 ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಮಹಾನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆಳಗಿನ ಜಾವ ಕೆಲವರು ಪಲಕ ಅಳವಡಿಸಲು ಪ್ರಯತ್ನ ಮಾಡಿದ್ದರು. ಪೊಲೀಸರು ಹೋಗಿ ಫಲಕವನ್ನು ಜಪ್ತಿ  ಮಾಡಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ‌. ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ, ಸಾರ್ವಜನಿಕರು ಅನುಮತಿ ಇಲ್ಲದೆ ನಾಮಪಲಕ ಹಾಕಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅನುಮತಿಗೆ ಆಗ್ರಹಿಸಿ ಪ್ರತಿಭಟನೆ: ನಾಮಫಲಕ ತೆರವುಗೊಳಿಸಿದ್ದಕ್ಕೆ ಕರವೇ ಹಾಗೂ ವೀರಮದಕರಿ ನಾಯಕ ಅಭಿಮಾನಿಗಳ ಸಂಘದವರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಚನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಸಿ ಪೊಲೀಸ್ ಇಲಾಖೆ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ‘ಆ ವೃತ್ತದಲ್ಲಿ ವೀರಮದಕರಿ ನಾಯಕ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಆದರೆ, ಈವರೆಗೂ ಸ್ಪಂದನೆ ದೊರೆತಿಲ್ಲ. ಹೀಗಾಗಿ, ಕನ್ನಡಪರ ಹೋರಾಟಗಾರರು ಹಾಗೂ ವೀರ ಮದಕರಿ ಅಭಿಮಾನಿಗಳು ನಾಮಫಲಕ ಹಾಕಲು ಹೋದಾಗ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಯವಕರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಪೊಲೀಸರು 30 ಮಂದಿಯನ್ನು ಬಂಧಿಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ನಾಮಫಲಕ ಹಾಕಲು‌ ಜಿಲ್ಲಾಡಳಿತ ಅನುಮತಿ ಕೊಡಬೇಕು. ವೀರ ಮದಕರಿ ನಾಯಕ ಪುತ್ಥಳಿ ಸ್ಥಾಪನೆ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.