ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕೆ ಮಹತ್ವ: ಮಹೇಶ ಜೋಶಿ ಅಭಿಮತ

ಡಾ.ಗಿರಿಧರ ಕಜೆ ವಿರಚಿತ ಕೃತಿ ಅನಾವರಕರಣ
Last Updated 11 ಸೆಪ್ಟೆಂಬರ್ 2022, 16:12 IST
ಅಕ್ಷರ ಗಾತ್ರ

ಬೆಳಗಾವಿ: ‘ಭಾರತೀಯ ಸಂಸ್ಕೃತಿ ಯೋಗ ಮತ್ತು ಭೋಗದ ನಡುವೆ ಸಮತೋಲನ ಸಾಧಿಸುವ ಮೂಲಕ ಆರೋಗ್ಯಕ್ಕೆ ಮಹತ್ವ ನೀಡುತ್ತಾಬಂದಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಅಭಿಪ್ರಾಯಪಟ್ಟರು.

ನಗರದ ಶಹಾಪುರದಲ್ಲಿರುವ ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಭಾನುವಾರ, ಡಾ.ಗಿರಿಧರ ಕಜೆ ಅವರ ಆಯುರ್ವೇದ ಜ್ಞಾನ ಯಾನ ಸರಣಿಯ ಏಳನೇ ಕೃತಿಯಾದ ‘ಸಂಸ್ಕಾರ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಿರಿಧರ ನಮ್ಮ ಆಯುರ್ವೇದವನ್ನು ಕಾರ್ಪೊರೇಟ್ ಜಗತ್ತಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪುಸ್ತಕದಲ್ಲಿರುವ ಅಂಶಗಳನ್ನು ಪಾಲಿಸಿ, ಸದೃಢ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಸುರೇಶಕುಮಾರ್ ಮಾತನಾಡಿ, ‘ವೈದ್ಯರು ತಮ್ಮ ಬಳಿ ಚಿಕಿತ್ಸೆಗೆ ಬರುವವರಿಗೆ ಧೈರ್ಯ ತುಂಬಬೇಕು. ಪ್ರಸ್ತುತ ದಿನಗಳಲ್ಲಿ ಹೆದರಿಸುವ ವೈದ್ಯರೇ ಹೆಚ್ಚಿರುವಾಗ, ಕಜೆ ರೋಗಿಗಳಲ್ಲಿ ಧೈರ್ಯ ತುಂಬುವ ವೈದ್ಯರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಬಳಿ ಸ್ವತಃ ನಾನೂ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ’ ಎಂದರು.

ಲೇಖಕ ಗಿರಿಧರ ಕಜೆ, ‘ವಿಶ್ವ ಆರೋಗ್ಯ ಸಂಸ್ಥೆ ವಿಶ್ವದೆಲ್ಲೆಡೆ ಔಷಧ ತಲುಪಿಸಿದರೆ ಎಲ್ಲರಿಗೂ ಆರೋಗ್ಯ ಲಭಿಸುತ್ತದೆ ಎಂಬ ತಪ್ಪು ಕಲ್ಪನೆ. ಎಲ್ಲರಿಗೂ ಔಷಧ ತಲುಪಿಸಿದರೆ ಆರೋಗ್ಯ ಸಿಗುವುದಿಲ್ಲ. ಆಯುರ್ವೇದ ಸಿದ್ಧಾಂತದ ಜೀವನಶೈಲಿ ರೂಪಿಸಿಕೊಳ್ಳುವುದರಿಂದ ಪ್ರತಿಯೊಬ್ಬರೂ ಆರೋಗ್ಯವಂತರಾಗಬಹುದು. ನಮ್ಮ ಉದ್ದೇಶವೂ ಮನೆ–ಮನೆಗೆ ಆಯುರ್ವೇದ ಔಷಧ ತಲುಪಿಸುವುದಲ್ಲ. ಪ್ರತಿ ಮನಸ್ಸಿಗೆ ಆಯುರ್ವೇದ ಸಿದ್ಧಾಂತ ತಲುಪಿಸುವುದಾಗಿದೆ’ ಎಂದರು.

ಸೆಲ್ಕೋ ಸೋಲಾರ್‌ನ ಸಿಇಒ ಮೋಹನ ಭಾಸ್ಕರ ಹೆಗಡೆ, ಬಿಜೆಪಿ ಮುಖಂಡ ಅರವಿಂದ ಪಾಟೀಲ ಮಾತನಾಡಿದರು. ಕಾಹೇರ್‌ ಕುಲಸಚಿವ ಡಾ. ವಿ.ಎ. ಕೋಠಿವಾಲೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಡಿವೇಶ ಅರಕೇರಿ, ಡಾ. ರವಿ ಪಾಟೀಲ, ಡಾ. ಕಿರಣ ಖೋತ್ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು. ವಿನಾಯಕ ಹೆಗಡೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಬಿ. ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಸುಹಾಸ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT