ಬೆಳಗಾವಿ: ‘ಬಹುತ್ವ ಪ್ರೀತಿಸುವ ಭಾವವೇ ಸಾಹಿತ್ಯದ ಉದ್ದೇಶವಾಗಿರಬೇಕು. ಬದುಕು, ಬರಹದ ಮಧ್ಯೆ ಸಾಮ್ಯತೆ ಇರಬೇಕು’ ಎಂದು ಕವಿ ಸತ್ಯಾನಂದ ಪಾತ್ರೋಟ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಪ್ರಾಧ್ಯಾಪಕಿ ಇಂದಿರಾ ಪಿ.ಎಚ್. ರಚಿಸಿದ ‘ಮಿಂಚು ಮಿಂಚೈತಿ’ ಕವನ ಸಂಕಲನವನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಕವಿಯತ್ರಿ ಇಂದಿರಾ ಅವರ ಕವನಗಳು ಮನುಷ್ಯ ಪ್ರೀತಿ ಬಿಂಬಿಸುತ್ತವೆ. ಹೆಣ್ಣಿನ ಅಸ್ತಿತ್ವದ ಬಗ್ಗೆ ಪ್ರಶ್ನಿಸುತ್ತವೆ. ಸತ್ಯದ ಪರವಾಗಿರುವ ಸಂವೇದನೆಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿದರು.
ಸಾಹಿತಿ ಎಲ್.ಎಸ್.ಶಾಸ್ತ್ರಿ, ‘ಕವಿಗೆ ಪ್ರತಿಭೆಯೇ ಮೂಲವಸ್ತು. ಹೊಸ ತಲೆಮಾರಿನ ಬರಹಗಾರರಿಗೆ ಪ್ರೋತ್ಸಾಹ, ಮಾರ್ಗದರ್ಶನ ಸಿಗಬೇಕಿದೆ’ ಎಂದರು.
ಡಾ.ಎಚ್.ಬಿ.ಕೋಲಕಾರ, ಸಾಹಿತಿ ಕೆ.ಎನ್.ದೊಡ್ಡಮನಿ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಹಮೀದಾಬೇಗಂ ದೇಸಾಯಿ, ಆರ್.ಬಿ.ಕಟ್ಟಿ, ಇಂದಿರಾ ಪಿ.ಎಚ್. ಉಪಸ್ಥಿತಿತರಿದ್ದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.