ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕವಿಲ್ಲದ ಮನೆ ಸ್ಮಶಾನದಂತೆ: ಕವಿ ಅಲ್ಲಾಗಿರಿರಾಜ್‌ ಕನಕಗಿರಿ

ಪ್ರತಿಪಾದನೆ
Last Updated 19 ಆಗಸ್ಟ್ 2021, 15:29 IST
ಅಕ್ಷರ ಗಾತ್ರ

ಗೋಕಾಕ: ‘ಕುಟುಂಬದಲ್ಲಿ ಸಾಹಿತ್ಯದ ಚರ್ಚೆಯಾಗದಿದ್ದರೆ ನಾವು ಒಳ್ಳೆಯ ಸಾಹಿತಿಯಾಗಲು ಸಾಧ್ಯವಿಲ್ಲ’ ಎಂದು ಕೊಪ್ಪಳದ ಕವಿ ಅಲ್ಲಾಗಿರಿರಾಜ್‌ ಕನಕಗಿರಿ ಹೇಳಿದರು.

ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಗೋಕಾಕ ಗೆಳೆಯರ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ ಅವರ ‘'ಹರದಾರಿ ಮಾತು’ ಮತ್ತು ‘ಮಕ್ಕಳ ಆಟಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಓದುಗರನ್ನು ಸೃಷ್ಟಿ ಮಾಡಲಾರದ ಕಥೆ, ಕವನ ಬರೆಯಬಾರದು. ಸಾಹಿತಿಗಳು ಸಹ ಸಮಾಜವನ್ನು ಕಟ್ಟಲು ಮುಂದಾಗಬೇಕಾಗಿದ್ದು, ಪುಸ್ತಕವನ್ನು ಓದುವ ಪರಿಸರ ನಿರ್ಮಿಸಬೇಕಾದ ಜವಾಬ್ದಾರಿಯೂ ಇದೆ’ ಎಂದು ತಿಳಿಸಿದರು.

‘ಮಕ್ಕಳನ್ನು ಸಾಹಿತಿಗಳನ್ನಾಗಿ ಮಾಡಲು ನಾವು ಹಿಂದೇಟು ಹಾಕುತ್ತಿದ್ದೇವೆ. ವಿಶ್ವವಿದ್ಯಾಲಯಗಳಿಗೆ ರೈತರನ್ನು ಕುಲಪತಿಗಳನ್ನಾಗಿ ಮಾಡಲು ನಮ್ಮ ಸರ್ಕಾರಗಳು ಮನಸ್ಸು ಮಾಡಬೇಕಾಗಿದೆ. ಅನ್ನ ಕೊಟ್ಟವರಿಗೆ ಅನ್ನ ಕೊಡುವ ಕಾರ್ಯ ಆಗಬೇಕಾಗಿದೆ. ರೈತ ಮತ್ತು ಸೈನಿಕರು ಈ ರಾಷ್ಟ್ರವನ್ನು ಶಕ್ತಗೊಳಿಸುತ್ತಿರುವ ಕುರಿತು ನಾವು ಬರೆಯಬೇಕಾಗಿದೆ’ ಎಂದರು.

‘ಯಾರ ಮನೆಯಲ್ಲಿ ಪುಸ್ತಕ ಇರುವುದಿಲ್ಲವೋ ಆ ಮನೆ ಸ್ಮಶಾನಕ್ಕೆ ಸಮಾನ. ಗೊಂಬೆಗಳು ಮಾತನಾಡುವುದಿಲ್ಲ. ಆದರೆ ಪುಸ್ತಕಗಳು ಮಾತನಾಡುತ್ತವೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಪುಸ್ತಕಗಳನ್ನು ಇಟ್ಟುಕೊಂಡು ಅವುಗಳನ್ನು ಓದುವ ಕಾರ್ಯ ಆಗಬೇಕು. ಮಕ್ಕಳಿಗೆ ಕೊಡುವ ಮೂಲಕ ಓದುವ ಅಭಿರುಚಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಸಾಹಿತಿ, ಸಂಗೀತಗಾರರು, ಕಲಾವಿದರನ್ನು ಗೌರವಿಸಲು ಸರ್ಕಾರ ಮುಂದಾಗಬೇಕು. ಪ್ರತಿ ಪಂಚಾಯ್ತಿ ಮಟ್ಟದಿಂದ ಒಬ್ಬ ಸಾಹಿತಿ, ಕವಿಯನ್ನು ಸನ್ಮಾನಿಸಲು ಸುತ್ತೋಲೆ ಹೊರಡಿಸಬೇಕು. ಮಕ್ಕಳಗಾಗಿ ಯಾವುದೇ ಸಾಹಿತ್ಯ ಕಮ್ಮಟಗಳು ನಡೆಯುತ್ತಿಲ್ಲ. ಅಕಾಡೆಮಿಗಳು ಈ ಕಾರ್ಯ ಮಾಡುವಲ್ಲಿ ಎಡವುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪುಷ್ಪಾ ಮುರಗೋಡ ಮಾತನಾಡಿದರು. ಪ್ರೊ.ಸುರೇಶ ವಾರೆಪ್ಪನವರ ಮತ್ತು ಡಾ.ದ್ರಾಕ್ಷಾಯಣಿ ಶಂಕರ ಪುಸ್ತಕಗಳ ಕುರಿತು ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ, ಶ್ರೀಶೈಲ ದರೂರು, ಮಹೇಶ ನಾಯಿಕ, ಬಸವರಾಜ ಹಿರೇಮಠ, ಪ್ರೊ.ಚಂದ್ರಶೇಖರ ಅಕ್ಕಿ, ವಸಂತರಾವ ಕುಲಕರ್ಣಿ, ಡಾ.ಸಿ.ಕೆ. ನಾವಲಗಿ, ಈಶ್ವರಚಂದ್ರ ಬೆಟಗೇರಿ, ವಿದ್ಯಾ ರೆಡ್ಡಿ, ಗೆಳೆಯರ ಬಳಗದ ಜಯಾನಂದ ಮಾದರ ಉಪಸ್ಥಿತರಿದ್ದರು.

ಶೈಲಾ ಕೊಕ್ಕರಿ ನಿರೂಪಿಸಿದರು. ಆನಂದ ಸೋರಗಾವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT