ಗುರುವಾರ , ಜನವರಿ 27, 2022
20 °C
ಕೊರೊನಾ ಯೋಧರಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ

ಜಿಲ್ಲೆಯಲ್ಲಿ ‘ಬೂಸ್ಟರ್‌ ಡೋಸ್‌’ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಆರೋಗ್ಯ ಕಾರ್ಯಕರ್ತರು, ಕೊರೊನಾ ಮುಂಚೂಣಿ ಯೋಧರಿಗೆ ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್‌ ಡೋಸ್) ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ಕೊಡಲಾಯಿತು.

ಇಲ್ಲಿನ ಪೊಲೀಸ್ ಕೇಂದ್ರ ಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಉದ್ಘಾಟಿಸಿದರು.

ಸಾಂಕೇತಿಕವಾಗಿ ಐವರು ಪೋಲೀಸ್ ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ನಂತರ ಕೊರೊನಾ ಯೋಧರು ಉತ್ಸಾಹದಿಂದ ಸರದಿ ಸಾಲಿನಲ್ಲಿ ಬಂದು ಡೋಸ್‍ ತೆಗೆದುಕೊಂಡರು.

‘ಕೋವಿಡ್ ಲಸಿಕೆಯ 2ನೇ ಡೋಸ್‌ ಪಡೆದು 39 ವಾರ ಪೂರ್ಣಗೊಂಡವರು ಅಥವಾ 9 ತಿಂಗಳು ಮುಗಿದವರಿಗೆ ಮಾತ್ರ ಲಸಿಕೆ ನೀಡುವ ಕಾರ್ಯಕ್ರಮ ಇದಾಗಿದೆ. ಕೋವಿಡ್ ಪ್ರಕರಣಗಳು ಹರಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಶೇ 93ರಷ್ಟು ಸಾಧನೆ:

‘ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಿಕೆಯಲ್ಲಿ ಶೇ.93ರಷ್ಟು ಸಾಧನೆಯಾಗಿದೆ. 15ರಿಂದ 18 ವ‌ರ್ಷದವರು 2.47 ಲಕ್ಷ ಇದ್ದಾರೆ. ಅವರಲ್ಲಿ 1.54 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಶೇ 65ರಷ್ಟು ಸಾಧನೆಯಾಗಿದೆ. ಇನ್ನೊಂದು ವಾರದಲ್ಲಿ ಉಳಿದವರಿಗೆ ಕೊಡಲಾಗುವುದು. ಮೊದಲಿಗೆ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮುನ್ನೆಚರಿಕೆ ಡೋಸ್ ಅಭಿಯಾನಕ್ಕೆ ಚಾಲನೆ ಕೊಡಲಾಗಿದೆ. ಲಸಿಕೆ ಕೊರತೆ ಇಲ್ಲ’ ಎಂದು ತಿಳಿಸಿದರು.

‘ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಕಾಗವಾಡ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಪರೀಕ್ಷೆ ನಡೆಸಿದಾಗ, 12 ಮಂದಿಗೆ ಕೋವಿಡ್ ಪಾಸಿಟಿವ್ ಬಂತು. ಅವರನ್ನು ವಾಪಸ್ ಕಳುಹಿಸಲಾಯಿತು. ಹೊರ ರಾಜ್ಯದಿಂದ ಬರುವವರಿಗೆ ಆರ್‌ಟಿ–ಪಿಸಿಆರ್‌ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದಲ್ಲಿ ಕಡ್ಡಾಯವಾಗಿ ವಾಪಸ್‌ ಕಳುಹಿಸುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

₹ 10 ಕೋಟಿ ಜಮಾ:

‘ಎಬಿಆರ್‌ಕೆ ಯೋಜನೆಯಲ್ಲಿ ನೋಂದಾಯಿಸಿದ ಖಾಸಗಿ ಆಸ್ಪತ್ರೆಗಳವರು ಕೋವಿಡ್ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಸರ್ಕಾರದಿಂದ ಆಸ್ಪತ್ರೆಗಳಿಗೆ ನೇರವಾಗಿ ಹಣ ದೊರೆಯುತ್ತದೆ. ಈವರೆಗೆ ಜಿಲ್ಲೆಯಲ್ಲಿ ₹ 10 ಕೋಟಿಯನ್ನು ಆಸ್ಪತ್ರೆಗಳಿಗೆ ಜಮಾ ಮಾಡಲಾಗಿದೆ. 1 ಹಾಗೂ 2ನೇ ಅಲೆಯಲ್ಲಿ 942 ‍ಪ್ರಕರಣಗಳಲ್ಲಿ ಎಬಿಆರ್‌ಕೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಜಿಲ್ಲೆಯ 48 ಖಾಸಗಿ ಆಸ್ಪತ್ರೆಗಳು ಈ ಸೌಲಭ್ಯ ಪಡೆಯಲು ಅವಕಾಶವಿದೆ’ ಎಂದು ತಿಳಿಸಿದರು.

ಉತ್ತರ ಮತ ಕ್ಷೇತ್ರ ಬಿಜೆಪಿ ಶಾಸಕ ಅನಿಲ ಬೆನಕೆ, ‘ಕೊರೊನಾ ಯೋಧರು ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಬೇಕು. ಬೆಂಗಳೂರು ನಂತರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕಾಕರಣ ನಡೆದಿದೆ. ವಿದ್ಯಾರ್ಥಿಗಳೂ ಉತ್ಸಾಹದಿಂದ ತೆಗೆದುಕೊಳ್ಳುತ್ತಿದ್ದಾರೆ. ಶೀಘ್ರವೇ ಶೇ.100ರಷ್ಟು ಸಾಧನೆ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

36ಸಾವಿರ ಮಂದಿಗೆ

‘ಜಿಲ್ಲೆಯಲ್ಲಿ ಬೂಸ್ಟರ್‌ ಡೋಸ್ ನೀಡಲು ಸದ್ಯಕ್ಕೆ 36ಸಾವಿರ ಮಂದಿಯನ್ನು ಗುರುತಿಸಲಾಗಿದೆ. ಇವರಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ–ಅಸ್ವಸ್ಥತೆ ಹೊಂದಿರುವ 60 ವರ್ಷ ಮೀರಿದವರು ಇದ್ದಾರೆ’ ಎಂದು ಲಸಿಕಾ ಅಧಿಕಾರಿ ಡಾ.ಈಶ್ವರ ಗಡಾದ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಎಎಸ್‍ಪಿ ಮಹಾನಿಂಗ ನಂದಗಾವಿ, ಡಿಸಿಪಿ ರವೀಂದ್ರ ಗಡಾದ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಟಿಎಚ್‌ಒ ಡಾ.ಶಿವಾನಂದ ಮಾಸ್ತಿಹೊಳಿ,  ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗದೀಶ ಪಾಟ್ನೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಾಳಗೆನ್ನವರ, ಬಸವರಾಜ ಯಲಿಗಾರ ಉಪಸ್ಥಿತರಿದ್ದರು.

ರಾಮನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ಲಸಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.