ಬುಧವಾರ, ಅಕ್ಟೋಬರ್ 16, 2019
28 °C

ಬಾಲಕ ಸಾವು: ನಕಲಿ ವೈದ್ಯನ ಇಂಜೆಕ್ಷನ್ ಕಾರಣ?

Published:
Updated:

ಬೆಳಗಾವಿ: ಬಾಲಕನೊಬ್ಬ ಅನಾರೋಗ್ಯದಿಂದ ಮೃತಪಟ್ಟ ಘಟನೆ ಇಲ್ಲಿ ನಡೆದಿದೆ. ‘ಊರೂರು ತಿರುಗುತ್ತಾ ಚಿಕಿತ್ಸೆ ನೀಡುವ ವೈದ್ಯ ಕೊಟ್ಟ ಇಂಜೆಕ್ಷನ್‌ ರಿಯಾಕ್ಷನ್ ಆಗಿ ಮಗ ಮೃತಪಟ್ಟಿದ್ದಾನೆ’ ಎಂದು ಪೋಷಕರು ಆರೋಪಿಸಿದ್ದಾರೆ.

ಟಿಳಕವಾಡಿ 1ನೇ ರೈಲ್ವೆ ಗೇಟ್ ಬಳಿಯ ವಿಕಾಸ ಭೀಮರಾವ ಜಕ್ಕಾವಿ (14) ಮೃತ. ಆತ 8ನೇ ತರಗತಿ ಓದುತ್ತಿದ್ದ.

‘ಆತ ಅಜ್ಜಿಯ ಗ್ರಾಮವಾದ ಹುಕ್ಕೇರಿ ತಾಲ್ಲೂಕಿನ ಬಿದರೊಳ್ಳಿಗೆ ಬುಧವಾರ ಹೋದಾಗ ತೀವ್ರ ಜ್ವರ ಬಂದಿತ್ತು. ಅಂದು ಆ ಹಳ್ಳಿಗೆ ಬಂದಿದ್ದ ವೈದ್ಯರೊಬ್ಬರು 2 ಇಂಜೆಕ್ಷನ್‌ಗಳನ್ನು ಕೊಟ್ಟಿದ್ದರು. ಮರುದಿನ ಅಜ್ಜಿ ಜೊತೆ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಹೋಗಿದ್ದ. ಇಂಜೆಕ್ಷನ್‌ ಮಾಡಿದ್ದ ಸ್ಥಳದಲ್ಲಿ (ಚಪ್ಪೆ) ಕಪ್ಪಗಾಗಿ ಬಾತುಕೊಂಡಿತ್ತು. ನಂತರ ಕಾಲುಗಳೆರಡೂ ನಿತ್ರಾಣಗೊಂಡವು. ಕೂಡಲೇ ನಗರದ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿದ್ದೆವು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ತಂದೆ ಭೀಮರಾವ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‌ನಿಂದಾಗಿಯೇ ಹೀಗಾಗಿದೆ. ಆ ವೈದ್ಯನ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು’ ಎಂದು ಕೋರಿದರು.

ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

‘ಪ್ರಕರಣದ ಬಗ್ಗೆ ಮಾಹಿತಿ ಬಂದಿದ್ದು, ಪರಿಶೀಲಿಸುತ್ತಿದ್ದೇವೆ’ ಎಂದು ಯಮಕನಮರಡಿ ಠಾಣೆ ಇನ್‌ಸ್ಪೆಕ್ಟರ್‌ ಗಜಾನನ ನಾಯಕ ತಿಳಿಸಿದರು. ರಾತ್ರಿವರೆಗೂ ಪ್ರಕರಣ ದಾಖಲಾಗಿರಲಿಲ್ಲ.

Post Comments (+)