ಗುರುವಾರ , ಮೇ 26, 2022
27 °C
ಪಶು ವೈದ್ಯಕೀಯ ಕಾಲೇಜು: ಈ ಶೈಕ್ಷಣಿಕ ವರ್ಷದಿಂದಲೂ ಆರಂಭ ಅನುಮಾನ

ಬೆಳಗಾವಿ ಪಶು ವೈದ್ಯಕೀಯ ಕಾಲೇಜು: ಕಟ್ಟಡ ಸಿದ್ಧ, ಹುದ್ದೆಗಳೆ ಮಂಜೂರಾಗಿಲ್ಲ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಸಮೀಪ ಬಹುನಿರೀಕ್ಷಿತ ಪಶು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅತ್ಯಂತ ಮುಖ್ಯವಾಗಿ ಹುದ್ದೆಗಳ ಮಂಜೂರಾತಿ ಹಾಗೂ ನೇಮಕಾತಿ ಪ್ರಕ್ರಿಯೆಯೇ ನಡೆಯದಿರುವುದು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವುದಕ್ಕೆ ತೊಡಕಾಗಿ ಪರಿಣಮಿಸಿದೆ.

ಪ್ರಸಕ್ತ ಸಾಲಿನಿಂದಲೂ ಈ ಕಾಲೇಜು ಕಾರ್ಯಾರಂಭಿಸುವುದು ಅನುಮಾನ ಎನ್ನುವಂತಹ ಪರಿಸ್ಥಿತಿ ಇದೆ.

ಏಕೆಂದರೆ, ವಿಸಿಐ (ಭಾರತೀಯ ಪಶುವೈದ್ಯಕೀಯ ಪರಿಷತ್)ನಿಂದ ಅನುಮೋದನೆ ಪಡೆಯುವ ಪ್ರಕ್ರಿಯೆಯೇ ನಡೆದಿಲ್ಲ. ಹುದ್ದೆಗಳು ಮಂಜೂರಾಗಿ, ನೇಮಕಾತಿ ಆಗದಿದ್ದರೆ ವಿಸಿಐ ಅನುಮೋದನೆ ಕೊಡುವುದಿಲ್ಲ.

ಬಿಜೆಪಿ ಸರ್ಕಾರವಿದ್ದಾಗ ಅಥಣಿ, ಗದಗ ಹಾಗೂ ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ 2012ರಲ್ಲಿ ಘೋಷಿಸಿ, ಹಣ ತೆಗೆದಿಡಲಾಗಿತ್ತು. ಇದಾಗಿ 3 ವರ್ಷಗಳ ನಂತರ ಅಂದರೆ 2015ರಲ್ಲಿ ಕಾಮಗಾರಿ ಪ್ರಾರಂಭವಾಯಿತು. 24 ತಿಂಗಳಲ್ಲಿ ಪೂರ್ಣ ಮಾಡುವುದಾಗಿ ತಿಳಿಸಲಾಗಿತ್ತು. ಅನುದಾನ ಕೊರತೆ ಮತ್ತಿತರ ಕಾರಣದಿಂದ ವಿಳಂಬವಾಗಿದೆ.

200 ಹುದ್ದೆಗಳು ಬೇಕು:

ಪ್ರಸ್ತುತ ತರಗತಿ ಕೊಠಡಿಗಳ ಸಂಕೀರ್ಣ ಮೈದಳೆದಿದೆ. ಆದರೆ, ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ಮೇಲೆ ಕೋವಿಡ್ ಕಾರ್ಮೋಡ ಕವಿದಿದೆ.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೇಲ್ವಿಚಾರಣೆಯಲ್ಲಿ ಸ್ಥಾಪಿಸಲಾಗುತ್ತಿದೆ.

200 ಎಕರೆ ಜಾಗ ನೀಡಲಾಗಿದೆ. ಮೂರು ಅಂತಸ್ತಿನ ಕಟ್ಟಡ ಪೂರ್ಣಗೊಂಡಿದೆ, 10  ವಿಭಾಗಗಳಿಗೆಗೆಂದು ಒಂದೊಂದು ಸಿಬ್ಬಂದಿ, ತರಗತಿ ಹಾಗೂ ಪ್ರಯೋಗಾಲಯಕ್ಕೆ ಬೇಕಾಗುವ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.

ತರಗತಿಗಳನ್ನು ಆರಂಭಿಸಲು ಬೇಕಾದ ಬೆಂಚು, ಡೆಸ್ಕ್‌, ಪ್ರಯೋಗಾಲಯಗಳಿಗೆ ಅಗತ್ಯವಾದ ಪರಿಕರಗಳನ್ನು ಇನ್ನಷ್ಟೇ ಒದಗಿಸಬೇಕಾಗಿದೆ.

ಮುಖ್ಯ ಕಟ್ಟಡದ ಹಿಂದೆ ಡಿಪಾರ್ಟ್‌ಮೆಂಟ್‌ ಕಮ್‌ ಕ್ಯಾಂಟೀನ್‌ ನಿರ್ಮಿಸಲಾಗಿದೆ. 54 ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅನುಕೂಲವಾಗುವ ಹಾಸ್ಟೆಲ್‌ ಕಟ್ಟಡ ಕಟ್ಟಲಾಗಿದೆ. ಸೆಪ್ಟಿಕ್‌ ಟ್ಯಾಂಕ್‌ ಕಾಮಗಾರಿ ಪೂರ್ಣಗೊಂಡಿದೆ. ಈವರೆಗೆ ₹ 50 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಯತ್ನದ ಫಲವಾಗಿ

ಅಥಣಿಯಲ್ಲಿ ಹಿಂದೆ ಶಾಸಕರಾಗಿದ್ದ ಹಾಲಿ ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರ  ಪ್ರಯತ್ನದ ಫಲವಾಗಿ ಕಾಮಗಾರಿ ಚುರುಕು ಪಡೆದಿದೆ. ವಿಶ್ವವಿದ್ಯಾಲಯದ ವಿಸ್ತರಣೆ ನಿರ್ದೇಶಕರೂ ಆಗಿರುವ ವಿಶೇಷ ಕರ್ತವ್ಯಾಧಿಕಾರಿ ಡಾ.ಎನ್.ಎ. ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ.

ಕಟ್ಟಡವನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿಯೇ ಮೂರು ವರ್ಷಗಳು ಉರುಳಿವೆ. ಚಟುವಟಿಕೆಗಳು ನಡೆಯುತ್ತಿಲ್ಲವಾದ್ದರಿಂದ ನಿರ್ವಹಣೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

‘ಸರ್ಕಾರದ ಗಮನಕ್ಕೆ ತರಲಾಗಿದೆ’

‘ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದಾಗಿ ಅನುದಾನಕ್ಕೆ ಕೊರತೆಯಾಗಿಲ್ಲ. ಕಟ್ಟಡ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಬೋಧಕ ಹಾಗೂ ಬೋಧಕೇತರ ಸೇರಿದಂತೆ ಒಟ್ಟು 200 ಹುದ್ದೆಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಮಂಜೂರಾಗಿಲ್ಲ’ ಎಂದು ವಿಶೇಷ ಕರ್ತವ್ಯಾಧಿಕಾರಿ ಡಾ.ಎನ್.ಎ. ಪಾಟೀಲ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

‘ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಪ್ರಯತ್ನ ಮುಂದುವರಿಸಲಾಗಿದೆ. ಕೋವಿಡ್ ಸಂಕಷ್ಟದ ಸ್ಥಿತಿಯೂ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದು ತಿಳಿಸಿದರು.

‘3ನೇ ಹಂತದಲ್ಲಿ ₹ 27 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಆಸ್ಪತ್ರೆಯ ಮೊದಲ ಮಹಡಿ, ಮರಣೋತ್ತರ ಪರೀಕ್ಷೆ ಸಭಾಂಗಣ, ಗ್ರಂಥಾಲಯ ಕಟ್ಟಡ ಮತ್ತು ವಸತಿಗೃಹಗಳ ಕಾಮಗಾರಿ ಕೈಗೊಳ್ಳಲಾಗುವುದು. ಕಾಲೇಜು ಆರಂಭಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿತ್ತು. ಅವು ಸಿದ್ಧವಾಗಿವೆ’ ಎಂದು ತಿಳಿಸಿದರು.

ಮೊದಲಿಗೆ 40 ಸೀಟು

ಹುದ್ದೆಗಳ ನೇಮಕಾತಿ ನಡೆದು, ಕಾಲೇಜು ಆರಂಭವಾದಲ್ಲಿ ಮೊದಲಿಗೆ 40 ಸೀಟುಗಳ ಪ್ರವೇಶಾತಿಗೆ ಯೋಜಿಸಲಾಗಿದೆ. ಒಟ್ಟು 60 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.

–ಡಾ.ಎನ್.ಎ. ಪಾಟೀಲ, ವಿಶೇಷ ಕರ್ತವ್ಯಾಧಿಕಾರಿ, ಪಶು ವೈದ್ಯಕೀಯ ಕಾಲೇಜು, ಕೊಕಟನೂರ, ಅಥಣಿ ತಾಲ್ಲೂಕು

ಅಗತ್ಯ ಕ್ರಮ

ಬಿ.ಎಸ್. ಯಡಿಯೂರಪ್ಪ ಅವರು ಮೊದಲು ಮುಖ್ಯಮಂತ್ರಿಯಾಗಿದ್ದಾಗ ಕಾಲೇಜು ಘೋಷಣೆ ಆಗಿತ್ತು. ನಂತರ ಬಂದ ಸರ್ಕಾರಗಳು ಅನುದಾನ ನೀಡಿರಲಿಲ್ಲ. ನಮ್ಮ ಸರ್ಕಾರದಲ್ಲಿ ಒದಗಿಸಲಾಗಿದೆ. ಆರಂಭಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುವುದು.

–ಪ್ರಭು ಚವ್ಹಾಣ, ಪಶುಸಂಗೋಪನಾ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು