ಶುಕ್ರವಾರ, ಅಕ್ಟೋಬರ್ 30, 2020
27 °C
ಗರಿಗೆದರಿದ ಕುತೂಹಲ

ಅಂಗಡಿ ಉತ್ತರಾಧಿಕಾರಿ ಯಾರು? ಉಪ ಚುನಾವಣೆ ಚರ್ಚೆ ಆರಂಭ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಎದುರಾಗುವ ಉಪ ಚುನಾವಣೆಗೆ ಅಭ್ಯರ್ಥಿಗಳು ಯಾರಾಗಬಹುದು ಎನ್ನುವ ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಅಂಗಡಿ ಅವರು 2004ರಿಂದ ಒಟ್ಟು 4 ಚುನಾವಣೆಗಳಲ್ಲಿ ಸತತವಾಗಿ ಜಯ ಗಳಿಸಿದ್ದರು. ಇದರಿಂದಾಗಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಪ್ರಬಲ ಹಿಡಿತ ಹೊಂದಿದ್ದ ಅಂಗಡಿ ಅವರ ಹಠಾತ್ ನಿಧನದಿಂದ ಬಿಜೆಪಿ ವಲಯದಲ್ಲಿ ಆಘಾತ ಉಂಟಾಗಿದೆ. ಹೀಗಾಗಿ, ಉತ್ತರಾಧಿಕಾರಿ ಯಾರಾಗುತ್ತಾರೆ ಎನ್ನುವ ಕುತೂಹಲ ಜನರದಾಗಿದೆ.

ಹೋದ ಚುನಾವಣೆಯಲ್ಲಿ ಅಂಗಡಿ ಅವರಿಗೆ ಟಿಕೆಟ್‌ ನೀಡಲು ಪಕ್ಷದ ಒಂದು ಬಣ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಅಂಗಡಿ ಅವರ ಪ್ರಭಾವ ಬಲಿಷ್ಠವಾಗಿದ್ದರಿಂದ ಹೈಕಮಾಂಡ್ ವಿರೋಧಿಗಳಿಗೆ ಮಣೆ ಹಾಕಿರಲಿಲ್ಲ. ಬಳಿಕ ವರಿಷ್ಠರ ಸೂಚನೆಯಿಂದಾಗಿ ವಿರೋಧಿಗಳು ಸುಮ್ಮನಾಗಿದ್ದರು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ಗುರಿ ಪಕ್ಷದ್ದಾಗಿತ್ತಾದ್ದರಿಂದ ಮುಖಂಡರೆಲ್ಲರೂ ಒಮ್ಮತದಿಂದ ಕೆಲಸ ಮಾಡಿದ್ದರು. ಆದರೆ, ಈಗ ಅಂಗಡಿ ಅವರ ಧಿಡೀರ್‌ ನಿರ್ಗಮನ ಕ್ಷೇತ್ರದಲ್ಲಿ ನಿರ್ವಾತ ಸೃಷ್ಟಿಸಿದೆ. ಅನಿರೀಕ್ಷಿತ ಬೆಳವಣಿಗೆ ಉಂಟಾಗಿದ್ದರಿಂದಾಗಿ, ಬಲಿಷ್ಠ ಅಭ್ಯರ್ಥಿಗಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.

ರಾಜಕೀಯ ಹಿನ್ನೆಲೆಯವರಿಲ್ಲ: ಅಂಗಡಿ ಪತ್ನಿ ಮಂಗಳಾ ಸೇರಿ ಕುಟುಂಬದಲ್ಲಿ ರಾಜಕೀಯ ಹಿನ್ನೆಲೆಯವರು ಯಾರೂ ಇಲ್ಲ. ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡವರಿಲ್ಲ. ಹೀಗಾಗಿ, ಅನುಕಂಪದ ಆಧಾರದ ಮೇಲೆ ಟಿಕೆಟ್‌ ನೀಡಲಾಗುವುದೇ, ಅಚ್ಚರಿಯ ಅಭ್ಯರ್ಥಿಗೆ ಅವಕಾಶ ಸಿಗುವುದೇ ಎನ್ನುವ ಕುತೂಹಲದ ಮಾತುಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.

ಹೋದ ಚುನಾವಣೆ ಕಾಲಕ್ಕೆ ಕಾಂಗ್ರೆಸ್‌ನಲ್ಲಿದ್ದ ರಮೇಶ ಜಾರಕಿಹೊಳಿ ಈಗ ಬಿಜೆಪಿಯಲ್ಲಿದ್ದು, ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ. ಅವರೊಂದಿಗೆ  ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಭಾವವೂ ಕೆಲಸ ಮಾಡಲಿದೆ. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನೆರಡರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಹೆಸರುಗಳ ಬಗ್ಗೆ ಚರ್ಚೆ: ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಬಿಡಿಡಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ, ಉಳಿದಂತೆ  ಅಂಗಡಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖಂಡರಾದ ರಾಜು ಚಿಕ್ಕನಗೌಡರ, ಸುಭಾಷ್ ಗೂಳಶೆಟ್ಟಿ, ಕಿರಣ್ ಜಾಧವ್ ಹೆಸರುಗಳಿವೆ.

2019ರ ಚುನಾವಣೆಯಲ್ಲಿ ಡಾ.ಎಸ್‌.ವಿ. ಸಾಧುನವರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 2014ರಲ್ಲಿ ಲಕ್ಷ್ಮಿ ಹೆಬ್ಬಾಳಕರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅವರು ಈಗ, ಗ್ರಾಮೀಣ ಲೋಕಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ. ಮುಖಂಡ ಅಶೋಕ ಪಟ್ಟಣ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಸಾಧುನವರ ಅವರಿಗೆ ಮತ್ತೊಂದು ಅವಕಾಶ ಸಿಗುವುದೇ ಅಥವಾ ಹೊಸ ಮುಖಕ್ಕೆ ಮಣೆ ಹಾಕುವರೋ ಎನ್ನುವ ಚರ್ಚೆಗಳು ನಡೆದಿವೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅಷ್ಟೇನು ನೆಲೆ ಇಲ್ಲ.

‘ಉಪ ಚುನಾವಣೆಗೆ ಸಿದ್ಧವಾಗಲೇಬೇಕಾಗುತ್ತದೆ. ಕ್ಷೇತ್ರ ಉಳಿಸಿಕೊಳ್ಳಲು ರಾಜಕೀಯ ತಂತ್ರ ಅನುಸರಿಸಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಈ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲಾಗುವುದು’ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು