ಹಲಗಾ– ಮಚ್ಚೆ ಬೈಪಾಸ್‌ ರಸ್ತೆಗೆ ರೈತರಿಂದ ತೀವ್ರ ವಿರೋಧ

ಬುಧವಾರ, ಜೂನ್ 26, 2019
28 °C

ಹಲಗಾ– ಮಚ್ಚೆ ಬೈಪಾಸ್‌ ರಸ್ತೆಗೆ ರೈತರಿಂದ ತೀವ್ರ ವಿರೋಧ

Published:
Updated:
Prajavani

ಬೆಳಗಾವಿ: ‘ಹಲಗಾ– ಮಚ್ಚೆ ಬೈಪಾಸ್‌ ರಸ್ತೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ನಮ್ಮ ಜಮೀನುಗಳನ್ನು ಉಳಿಸಿಕೊಡಬೇಕು’ ಎಂದು ಧಾಮಣೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿದರು.

ಚಕ್ಕಡಿ– ಎತ್ತುಗಳ ಜೊತ ಬಂದಿದ್ದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವು ರೈತರು ಹಾಗೂ ರೈತ ಮಹಿಳೆಯರು ತಮ್ಮ ಕುತ್ತಿಗೆಗೆ ಹಗ್ಗವನ್ನು ಬಿಗಿದುಕೊಂಡು ಬಂದಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.

‘ಈ ಭಾಗದ ಜಮೀನುಗಳಲ್ಲಿ ಸುಮಾರು 30 ಅಡಿ ಆಳದಷ್ಟು ಎರಿಮಣ್ಣು ಇದೆ. ಇಂತಹ ಪ್ರದೇಶಗಳಲ್ಲಿ ಬೃಹತ್‌ ಕಾಮಗಾರಿ ಕೈಗೊಂಡರೆ ಅದು ಗಟ್ಟಿಯಾಗಿರುವುದಿಲ್ಲ. ಹಾಕಿದ ದುಡ್ಡೆಲ್ಲ ವ್ಯರ್ಥವಾಗುತ್ತದೆ. ತಕ್ಷಣ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು’ ಎಂದು ರೈತ ಮುಖಂಡ ಪ್ರಕಾಶ ನಾಯಕ ಒತ್ತಾಯಿಸಿದರು.

‘ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಫಲವತ್ತತೆಯ ಭೂಮಿಗಳನ್ನು ಬಿಟ್ಟು, ಬರಡು ಭೂಮಿಯ ಪ್ರದೇಶದಲ್ಲಿ ಬೈಪಾಸ್‌ ನಿರ್ಮಿಸಲಿ’ ಎಂದು ಸಲಹೆ ನೀಡಿದರು.

‘ಅಧಿಸೂಚನೆ ಹೊರಡಿಸದೇ, ರೈತರಿಗೆ ಮುನ್ಸೂಚನೆ ನಡೆಸದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಜಮೀನುಗಳಲ್ಲಿ ಬೆಳೆದು ನಿಂತಿದ್ದ ಕಬ್ಬುಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸಿದ್ದಾರೆ. ಪೊಲೀಸರನ್ನು ಬಿಟ್ಟು ರೈತರ ಮೇಲೆ ಹೊಡೆಸಿದ್ದಾರೆ. ರೈತ ಮಹಿಳೆಯೊಬ್ಬರಿಗೆ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರು ಕಾಲಿನಿಂದ ಒದ್ದಿದ್ದಾರೆ. ಇಂತಹ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಜಯಶ್ರೀ ಗುರನ್ನವರ ಒತ್ತಾಯಿಸಿದರು.

ಪುನರ್‌ ಪರಿಶೀಲನೆಗೆ ಒಪ್ಪಿಗೆ:

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಅಧಿಸೂಚನೆ ಹೊರಡಿಸದೆಯೇ ಜಮೀನು ಸ್ವಾಧೀನ ಮಾಡಿಕೊಳ್ಳುವುದು ತಪ್ಪು. ಅಧಿಸೂಚನೆಯ ಆದೇಶವನ್ನು ಪುನರ್‌ ಪರಿಶೀಲಿಸುತ್ತೇವೆ. ಅಧಿಸೂಚನೆ ಹೊರಡಿಸದೇ ಇದ್ದರೆ ಅಂತಹ ಜಮೀನುಗಳನ್ನು ಕೈಬಿಡಲಾಗುವುದು’ ಎಂದು ಭರವಸೆ ನೀಡಿದರು.

ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ‘ಅಧಿಕಾರಿಗಳ ಜೊತೆ ಸಭೆ ಮಾಡಿ, ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ಚೂನಪ್ಪ ಪೂಜೇರಿ, ಜಾವೀದ ಮುಲ್ಲಾ, ಶಂಕರ ಪಾಟೀಲ, ರಾಜು ಅಜರೇಕರ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !