ಸಿ–ವಿಜಿಲ್ ಆ್ಯಪ್‌ಗೆ ಸೆಲ್ಫಿ ಕಾಟ!

ಮಂಗಳವಾರ, ಏಪ್ರಿಲ್ 23, 2019
31 °C

ಸಿ–ವಿಜಿಲ್ ಆ್ಯಪ್‌ಗೆ ಸೆಲ್ಫಿ ಕಾಟ!

Published:
Updated:
Prajavani

ಬೆಳಗಾವಿ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ದಾಖಲಿಸಲು ರೂಪಿಸಿರುವ ಸಿ-ವಿಜಿಲ್‌ ಮೊಬೈಲ್‌ ಆ್ಯಪ್‌ ದುರ್ಬಳಕೆಯಾಗುತ್ತಿದೆ. ದೂರುಗಳ ಬದಲಾಗಿ, ಸೆಲ್ಫಿ ಫೋಟೊಗಳು ಹಾಗೂ ಹಾಡುಗಳ ವಿಡಿಯೊಗಳು ಹರಿದು ಬರುತ್ತಿವೆ. ಇದು ಚುನಾವಣಾ ಅಧಿಕಾರಿಗಳಿಗೆ ತಲೆನೋವು ತಂದಿದೆ.

ಕಳೆದ ತಿಂಗಳು ಮಾರ್ಚ್‌ 12ರಂದು ಈ ಆ್ಯಪ್‌ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಈ ತಿಂಗಳ 10ರವರೆಗೆ ಜಿಲ್ಲೆಯಾದ್ಯಂತ 78 ದೂರುಗಳು (ಸಂದೇಶಗಳು) ದಾಖಲಾಗಿವೆ. ಅವುಗಳಲ್ಲಿ 65 ಸಂದೇಶಗಳು ಸೆಲ್ಪಿ ಹಾಗೂ ಹಾಡುಗಳ ವಿಡಿಯೊಗಳಿಗೆ ಸಂಬಂಧಿಸಿದ್ದಾಗಿದೆ. ಇವುಗಳನ್ನು ರದ್ದುಗೊಳಿಸಲಾಗಿದೆ. ಇನ್ನುಳಿದ 13 ದೂರುಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ವಿಚಕ್ಷಣ ದಳಕ್ಕೆ (ಫ್ಲೈಯಿಂಗ್ ಸ್ಕ್ವಾಡ್‌) ಸೂಚಿಸಲಾಗಿತ್ತು.

ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವುಗಳಲ್ಲಿ 8 ದೂರುಗಳನ್ನು ಸೂಕ್ತ ಸಾಕ್ಷ್ಯಾಧಾರಗಳು ಲಭ್ಯ ಇಲ್ಲದ ಕಾರಣ ರದ್ದುಪಡಿಸಲಾಯಿತು. ಇನ್ನುಳಿದ 5 ದೂರುಗಳನ್ನು ದಾಖಲಿಸಿಕೊಂಡು, ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ.

ಕ್ಷೇತ್ರವಾರು ದೂರುಗಳ ಮಾಹಿತಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 28, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ 24, ಉತ್ತರ ಕನ್ನಡ ಕ್ಷೇತ್ರದ ಕಿತ್ತೂರು ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ 5 ದೂರುಗಳು ದಾಖಲಾಗಿವೆ. ಧಾರವಾಡದ ನವಲಗುಂದ ವಿಧಾನಸಭಾ ಕ್ಷೇತ್ರದಿಂದ 1 ಹಾಗೂ 20 ದೂರುಗಳು ಸಲ್ಲಿಕೆಯಾಗಿವೆ’ ಎಂದು ಸಿ–ವಿಜಿಲ್‌ ಜಿಲ್ಲಾ ನೋಡಲ್ ಅಧಿಕಾರಿ ಡಿ.ಜಿ. ನಾಗೇಶ ತಿಳಿಸಿದರು.

ತನಿಖೆಗೆ ಪರಿಗಣಿಸಿದ 13 ದೂರುಗಳಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರದಿಂದ 2, ಬೈಲಹೊಂಗಲ 1, ಬೆಳಗಾವಿ ದಕ್ಷಿಣ 1, ಬೆಳಗಾವಿ ಉತ್ತರ 2, ಚಿಕ್ಕೋಡಿ–ಸದಲಗಾ 3, ರಾಮದುರ್ಗ 1, ಕಿತ್ತೂರ 2 ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ 1 ದೂರು.

5 ಪ್ರಕರಣಗಳಲ್ಲಿ ಕ್ರಮ: ‘ಬೈಲಹೊಂಗಲ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ತಲಾ ಒಂದು ಹಾಗೂ ಚಿಕ್ಕೋಡಿ–ಸದಲಗಾ ಕ್ಷೇತ್ರದ 3 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗಿದೆ. ಇವು ಅನುಮತಿ ಇಲ್ಲದೇ ಬಾವುಟ ಕಟ್ಟಿರುವುದು ಹಾಗೂ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದ್ದಾಗಿವೆ. ಇವುಗಳ ಕುರಿತು ಕ್ರಮ ಜರುಗಿಸಲಾಗುತ್ತಿದೆ’ ಎಂದು ನಾಗೇಶ ತಿಳಿಸಿದರು.

‘ಸಿ–ವಿಜಿಲ್‌ ಆ್ಯಪ್‌ನಲ್ಲಿ ದಾಖಲಾಗುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ದೂರು ಸಲ್ಲಿಕೆಯಾದ ಕೂಡಲೇ ಮಾನಿಟರಿಂಗ್ ಸಮಿತಿಯಿಂದ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್‌ಗೆ ಪರಿಶೀಲಿಸಲು ಸೂಚಿಸಲಾಗುತ್ತದೆ. 15 ನಿಮಿಷಗಳಲ್ಲಿ ಸ್ಕ್ವಾಡ್‌ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ದೂರು ಸಮರ್ಪಕವಾಗಿದ್ದರೆ ಸ್ಥಳದಲ್ಲೇ ಕ್ರಮಕೈಗೊಳ್ಳುತ್ತಾರೆ. ಗಂಭೀರ ಪ್ರಕರಣಗಳಿದ್ದರೆ ಸಹಾಯಕ ಚುನಾವಣಾಧಿಕಾರಿಗಳು ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳುತ್ತಾರೆ. ಅಗತ್ಯ ಬಿದ್ದರೆ ಎಫ್‌ಐಆರ್‌ ದಾಖಲಿಸಿ, ತನಿಖೆ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

ಸೆಲ್ಫಿ ಕಳುಹಿಸುತ್ತಿರುವ ಸಾರ್ವಜನಿಕರು
‘ಸಾರ್ವಜನಿಕರು ಆ್ಯಪ್‌ನ್ನು ಪರೀಕ್ಷಿಸುವ ಉದ್ದೇಶದಿಂದ ಸೆಲ್ಫಿ ಹಾಗೂ ತಮ್ಮ ಸುತ್ತಲಿನ ಫೋಟೊ, ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ನಿಜವಾದ ದೂರುಗಳಿಗಿಂತ ಇಂಥವುಗಳೇ ಹೆಚ್ಚಾಗಿವೆ’ ಎಂದು ಸಿ–ವಿಜಿಲ್ ಜಿಲ್ಲಾ ನೋಡಲ್ ಅಧಿಕಾರಿ ಡಿ.ಜಿ. ನಾಗೇಶ ತಿಳಿಸಿದರು.

‘ಮತದಾರರಿಗೆ ಹಣ ಇನ್ನಿತರ ಸಾಮಗ್ರಿ ಹಂಚುವುದು, ಬೆದರಿಕೆ, ಅನುಮತಿ ಇಲ್ಲದೇ ಬ್ಯಾನರ್, ಬಾವುಟ ಕಟ್ಟುವುದು ಸೇರಿ ತಮ್ಮ ಸುತ್ತಲು ನಡೆಯುತ್ತಿರುವ ಚುನಾವಣಾ ಅಕ್ರಮಗಳ ಬಗ್ಗೆ ಮಾತ್ರ ಸಾರ್ವಜನಿಕರು ಫೋಟೊ, ವಿಡಿಯೊಗಳನ್ನು ಕಳುಹಿಸಬೇಕು. ಅಕ್ರಮ ತಡೆಗಟ್ಟಲು ಸಹಕಾರ ನೀಡಬೇಕು’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !