ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಗೆ ಸಿಗುವುದೇ ಮತ್ತಷ್ಟು ಪ್ರಾತಿನಿಧ್ಯ?

ಯಡಿಯೂರಪ್ಪ ಸಂಪುಟದಲ್ಲಿ ಐವರು ಸಚಿವರಿದ್ದರು
Last Updated 4 ಮೇ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಪುನರ್‌ರಚನೆಯಾದರೆ ಜಿಲ್ಲೆಗೆ ಮತ್ತಷ್ಟು ಪ್ರಾತಿನಿಧ್ಯ ಸಿಗಬಹುದೇ, ‘ಶಕ್ತಿ ಕೇಂದ್ರ’ದ ಬಲ ಹೆಚ್ಚಾಗಬಹುದೇ, ಯಾರಿಗೆ ಅವಕಾಶ ಆಗಬಹುದು, ಯಾರು ಸ್ಥಾನ ಕಳೆದುಕೊಳ್ಳಬಹುದು... ಎಂಬಿತ್ಯಾದಿ ಎನ್ನುವ ಚರ್ಚೆಗಳು ನಡೆದಿವೆ.

18 ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ (13) ಹೆಚ್ಚಿದೆ. ಲಾಬಿಯೂ ದೊಡ್ಡದಾಗಿಯೇ ಇದೆ. ಸಂಪುಟದಲ್ಲಿ ಸ್ಥಾನಕ್ಕಾಗಿ ಆಕಾಂಕ್ಷಿಗಳು ತಮ್ಮದೇ ಮಟ್ಟದಲ್ಲಿ ಯತ್ನ ನಡೆಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮೂಲದವರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಜಿಲ್ಲೆಯಲ್ಲಿ ಯಾರಿಗೆ ಅದರ ಲಾಭ ದೊರೆಯಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಗೋಕಾಕದ ರಮೇಶ ಜಾರಕಿಹೊಳಿ ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಅವರೊಂದಿಗೆ, ‘ಸಚಿವರಾಗುವುದಕ್ಕಾಗಿಯೇ ಬಿಜೆಪಿ ಸೇರಿದೆವು’ ಎಂದು ಹೇಳಿಕೊಂಡು ಬಂದಿರುವ ಅಥಣಿಯ ಮಹೇಶ ಕುಮಠಳ್ಳಿ ಮತ್ತು ಕಾಗವಾಡದ ಶ್ರೀಮಂತ ಪಾಟೀಲ ಕೂಡ ಆಕಾಂಕ್ಷಿಗಳಾಗಿದ್ದಾರೆ. ಇವರೊಂದಿಗೆ, ಕುಡಚಿಯ ಪಿ. ರಾಜೀವ್, ದಕ್ಷಿಣ ಮತಕ್ಷೇತ್ರದ ಅಭಯ ಪಾಟೀಲ ಮತ್ತು ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕ ವಿಧಾನಸಭೆ ಉಪಸಭಾಧ್ಯಕ್ಷರೂ ಆಗಿರುವ ಆನಂದ (ವಿಶ್ವನಾಥ) ಮಾಮನಿ (ಮೂವರೂ ಮೂರನೇ ಬಾರಿಗೆ ಶಾಸಕರಾದವರು) ಕೂಡ ಇಂಗಿತ ಪಟ್ಟಿಯಲ್ಲಿದ್ದಾರೆ. ‘ನನಗೆ ಸಚಿವ ಸ್ಥಾನ ಬೇಕೇ ಬೇಕು’ ಎಂದು ಮಾಮನಿ ವರಿಷ್ಠರ ಎದುರು ಪಟ್ಟು ಹಿಡಿದಿದ್ದಾರೆ. ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯ ಬೆದರಿಕೆಯನ್ನೂ ಒಡ್ಡಿದ್ದಾರೆ. ಉತ್ತರ ಮತಕ್ಷೇತ್ರದ ಅನಿಲ ಬೆನಕೆ ಕೂಡ ಮರಾಠಾ ಕೋಟಾ ಮುಂದಿಟ್ಟು ಈಚೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಚರ್ಚೆಗೆ ಗ್ರಾಸವಾಗಿತ್ತು:ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನದ ನಂತರ ರಚನೆಯಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಜಿಲ್ಲೆಯ ಐವರು ಸ್ಥಾನ ಗಳಿಸಿದ್ದರು. ರಮೇಶ ಜಾರಕಿಹೊಳಿ, ಹುಕ್ಕೇರಿಯ ಉಮೇಶ ಕತ್ತಿ, ನಿಪ್ಪಾಣಿಯ ಶಶಿಕಲಾ ಜೊಲ್ಲೆ, ಕಾಗವಾಡದ ಶ್ರೀಮಂತ ಪಾಟೀಲ ಹಾಗೂ ಲಕ್ಷ್ಮಣ ಸವದಿ ಸಚಿವರಾಗಿದ್ದರು.

ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರಿಂದ ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ ಸಾರಿಗೆ ಖಾತೆ ಕೊಡುವ ಜೊತೆಗೆ ಉಪ ಮುಖ್ಯಮಂತ್ರಿ ಸ್ಥಾನವನ್ನೂ ಕೊಡಲಾಗಿತ್ತು. ಇದರಿಂದಾಗಿ ಗಡಿ ಜಿಲ್ಲೆಯು ‘ಪವರ್ ಸೆಂಟರ್‌’ ಆಗಿ ಹೊರಹೊಮ್ಮಿತ್ತು. ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವನ್ನೇ ಕೊಡದೆ ಜಿಲ್ಲೆಗೆ ಹೆಚ್ಚಿನ ಮಣೆ ಹಾಕಿದ್ದು ಚರ್ಚೆಗೂ ಗ್ರಾಸವಾಗಿತ್ತು. ಸಿ.ಡಿ. ಪ್ರಕರಣದಲ್ಲಿ ಸಿಲುಕಿದ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ, ಬಿಜೆಪಿಯ ಭದ್ರಕೋಟೆಯಾದ ಇಲ್ಲಿನ ಸಚಿವರ ಸ್ಥಾನ 4ಕ್ಕೆ ಕುಸಿದಿ‌ತ್ತು.

ಬೆಳಗಾವಿ ಲೋಕಸಭಾ ಕ್ಷೇತ್ರ ಕಡೆಗಣನೆ:ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರ ರಚನೆಯಾದ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಜಿಲ್ಲೆಯ ಇಬ್ಬರಿಗೆ ಮಾತ್ರವೇ (ಉಮೇಶ ಕತ್ತಿ ಮತ್ತು ಶಶಿಕಲಾ ಜೊಲ್ಲೆ) ಅವಕಾಶ ಸಿಕ್ಕಿತು. ಇದರೊಂದಿಗೆ, ಜಿಲ್ಲೆಯ ಸಚಿವರ ಸಂಖ್ಯೆ ಕೆಲವೇ ತಿಂಗಳ ಅಂತರದಲ್ಲಿ 5ರಿಂದ 2ಕ್ಕೆ ಇಳಿಯಿತು. ಈ ಇಬ್ಬರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದವರು.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ; ಅದರಲ್ಲೂ ಜಿಲ್ಲಾ ಕೇಂದ್ರಕ್ಕೆ ದೊರೆತಿಲ್ಲ ಎನ್ನವ ಕೊರಗು ಈ ಭಾಗದವರಲ್ಲಿದೆ.

ಸಂಪುಟ ಪುನರ್‌ರಚನೆ ನಂತರ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT