ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ 2 ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ: ಸ್ವಾಗತಾರ್ಹ ನಿರ್ಧಾರ

ಅಧಿವೇಶನಕ್ಕಿಂತಲೂ ಹೆಚ್ಚು ಸಹಕಾರಿ
Last Updated 30 ಜನವರಿ 2020, 20:12 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿರುವುದನ್ನು ಈ ಭಾಗದ ಜನರು ಸ್ವಾಗತಿಸಿದ್ದಾರೆ. ‘ಕೊಟ್ಟಿರುವ ಮಾತನ್ನು ಅವರು ಉಳಿಸಿಕೊಳ್ಳಬೇಕು’ ಎಂಬ ಆಗ್ರಹವನ್ನೂ ಮಂಡಿಸಿದ್ದಾರೆ.

₹ 438 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವರ್ಣ ವಿಧಾನಸೌಧ ವರ್ಷದಲ್ಲಿ ಕೆಲವೇ ದಿನಗಳಷ್ಟೇ ಬಳಕೆಯಾಗುತ್ತಿದೆ. ಹೋದ ವರ್ಷ ‘ನೆರೆ ಪರಿಹಾರ ಕಾರ್ಯದ’ ನೆಪವೊಡ್ಡಿ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನೂ ಇಲ್ಲಿ ನಡೆಸಲಿಲ್ಲ. ಆಗಾಗ, ಕೆಲವು ಇಲಾಖೆಗಳಿಂದ ಕಾರ್ಯಾಗಾರ, ವಿಚಾರಸಂಕಿರಣಗಳಷ್ಟೇ ನಡೆದಿವೆ. ಈ ಸೌಧ ಉತ್ತರ ಕರ್ನಾಟಕದ ಶಕ್ತಿಸೌಧವಾಗಬೇಕು ಎನ್ನುವ ಇಲ್ಲಿನ ಜನರ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಡಿರುವ ಪ್ರಸ್ತಾವವು ಕಾರ್ಯರೂಪಕ್ಕೆ ಬಂದರೆ ಒಳತಾಗಲಿದೆ ಎಂಬ ಆಸೆಗಣ್ಣಿನಲ್ಲಿ ಜನರಿದ್ದಾರೆ.

ಈವರೆಗೆ ಅಧಿವೇಶನ ಸಂದರ್ಭದಲ್ಲಿ ಒಂದು ಸಚಿವ ಸಂಪುಟ ಸಭೆಯನ್ನು ಇಲ್ಲಿ ನಡೆಸಲಾಗುತ್ತಿತ್ತು.

ಕಚೇರಿಗಳೂ ಸ್ಥಾಪನೆಯಾಗಲಿ

ಗಡಿ, ನೀರಾವರಿ ಯೋಜನೆಗೆ ಸಂಬಂಧಿಸಿದ ಕಚೇರಿಗಳು ಸೇರಿದಂತೆ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆಯೂ ಇದೆ. ಇದಕ್ಕೂ ಗಮನಹರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿದ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಹೇಳಿದ್ದಾರೆ. ‘ಬೆಂಗಳೂರಿನಲ್ಲಿರುವಂತೆ ಇಲ್ಲಿಯೂ 5 ವಿವಿಧ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ ಕಲ್ಪಿಸಲು ಈ ತೀರ್ಮಾನ ಮಾಡಲಾಗಿದೆ. ಇಲ್ಲಿಗೆ ವರ್ಗಾಯಿಸಲಾಗುವ ಅಧಿಕಾರಿಗಳಿಗೆ ಆಡಳಿತಾತ್ಮಕ ಮತ್ತು ಆರ್ಥಿಕವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನೂ ನೀಡಲಾಗುವುದು’ ಎಂದು ಪ್ರಕಟಿಸಿದ್ದಾರೆ. ಇದು ಕೂಡ ಅನುಷ್ಠಾನಗೊಳ್ಳಬೇಕು ಎನ್ನುವ ಒತ್ತಾಯ ಜನರದಾಗಿದೆ.

‘ಅಭಿವೃದ್ಧಿ ದೃಷ್ಟಿಯಲ್ಲಿ ನೋಡಿದರೆ, ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸುವುದು ವಿಧಾನಮಂಡಲ ಅಧಿವೇಶನಕ್ಕಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಇದು ಹೆಚ್ಚು ಸಹಕಾರಿಯಾಗಲಿದೆ. ಅಲ್ಲಿನ ತೀರ್ಮಾನಗಳು ಅನುಷ್ಠಾನಕ್ಕೆ ಬರಲೇಬೇಕಾಗುತ್ತವೆ. ಆಗ ಹಲವು ಸಮಸ್ಯೆಗಳು ಬಗೆಹರಿಯತ್ತವೆ. ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಜೀವ ಬರುತ್ತದೆ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

ಈ ಭಾಗಕ್ಕೆ ಆದ್ಯತೆ ಸಿಗಬೇಕು

‘ಅಧಿವೇಶನದಲ್ಲಿ ರಾಜಕೀಯ ಕಾರಣಗಳಿಗಾಗಿ ಗಲಾಟೆ, ಗೊಂದಲಗಳು ಸಾಮಾನ್ಯ ಎನ್ನುವಂತಾಗಿ ಹೋಗಿವೆ. ಆಗ, ನೀರಾವರಿ ಸೇರಿದಂತೆ ಈ ಭಾಗದ ಅಭಿವೃದ್ಧಿ ಯೋಜನೆಗಳು ಮತ್ತು ಜನರ ಆಶೋತ್ತರಗಳ ಬಗ್ಗೆ ಆದ್ಯತೆ ದೊರೆಯುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಪ್ರಾಧಾನ್ಯತೆ ಸಿಗುತ್ತದೆ. ಇಡೀ ಉತ್ತರ ಕರ್ನಾಟಕದ ಸಮಸ್ಯೆಗಳ ‍ಪರಿಹಾರಕ್ಕೆ ಒತ್ತು ಕೊಡಬೇಕು. ಮುಖ್ಯಮಂತ್ರಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘1980ರಲ್ಲಿ ಬೆಂಗಳೂರಿನ ಹೊರಗೆ ಮೊದಲ ಬಾರಿಗೆ ಬೆಳಗಾವಿಯಲ್ಲಿ ಸಚಿವ ಸಂಪುಟ ಸಭೆಯನ್ನು (ವಿಭಾಗ ಮಟ್ಟದಲ್ಲಿ) ಆಗಿನ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ನಡೆಸಿದ್ದರು’ ಎಂದು ‘ಪ್ರಜಾವಾಣಿ’ಯೊಂದಿಗೆ ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT