ಸೋಮವಾರ, ಜೂನ್ 14, 2021
28 °C
ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ

ಏ. 29, 30ರಂದು ಸಿಇಟಿ: ಕ್ಯಾಲ್ಕ್ಯುಲೇಟರ್, ಮೊಬೈಲ್, ಕೈಗಡಿಯಾರ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯು ಏ. 29 ಹಾಗೂ 30ರಂದು ನಡೆಯಲಿದ್ದು, ಪರೀಕ್ಷಾರ್ಥಿಗಳು ಕ್ಯಾಲ್ಕ್ಯುಲೇಟರ್, ಕೈಗಡಿಯಾರ ಅಥವಾ ಮೊಬೈಲ್ ಫೋನ್‌ಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ತಿಳಿಸಿದರು.

ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಳಗಾವಿ, ಚಿಕ್ಕೋಡಿ, ಗೋಕಾಕ ಮತ್ತು ಅಥಣಿ ತಾಲ್ಲೂಕುಗಳಲ್ಲಿ ಒಟ್ಟು 22 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ 22 ಮಂದಿ ಹಿರಿಯ ಪ್ರಾಚಾರ್ಯರನ್ನು ಪ್ರಶ್ನೆಪತ್ರಿಕಾ ಪಾಲಕ(ಕಸ್ಟೋಡಿಯನ್)ರನ್ನಾಗಿ ನೇಮಿಸಲಾಗುವುದು. ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಒಟ್ಟು 44 ಉಪನ್ಯಾಸಕರನ್ನು ವಿಶೇಷ ಜಾಗೃತಾ ದಳದ ಅಧಿಕಾರಿಗಳನ್ನಾಗಿ ಈಗಾಗಲೇ ನಿಯೋಜಿಸಲಾಗಿದೆ. ಅವರು ಪರೀಕ್ಷೆಯ ದಿನದಂದು ಕಡ್ಡಾಯವಾಗಿ ಆಯಾ ಕೇಂದ್ರಗಳಲ್ಲಿ ಉಪಸ್ಥಿತರಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಪರೀಕ್ಷೆ ವೇಳೆಯಲ್ಲಿ ಕೇಂದ್ರಗಳ 200 ಮೀಟರ್ ಸುತ್ತ 144 ಕಲಂ ಜಾರಿ ಮಾಡಲಾಗುವುದು. ಪ್ರಶ್ನೆಪತ್ರಿಕೆ ಮತ್ತು ಒಎಂಆರ್‌ ಶೀಟ್‌ಗಳನ್ನು ಭದ್ರತೆಯೊಂದಿಗೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿ, ವಿತರಿಸಲು ಪ್ರಶ್ನೆಪತ್ರಿಕಾ ಪಾಲಕರು, ಪ್ರಾಚಾರ್ಯರು, ಕ್ಷೇತ್ರ  ಶಿಕ್ಷಣಾಧಿಕಾರಿ ಮತ್ತು ತಹಶೀಲ್ದಾರರು ಎಚ್ಚರಿಕೆಯಿಂದ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಬೆಳಗಾವಿ ನಗರದಲ್ಲಿ 4,830 ಸೇರಿ ಜಿಲ್ಲೆಯಲ್ಲಿ ಒಟ್ಟು 9,782 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಬೆಳಗಾವಿ ನಗರದಲ್ಲಿ 10, ಚಿಕ್ಕೋಡಿಯಲ್ಲಿ 5, ಗೋಕಾಕದಲ್ಲಿ 4 ಹಾಗೂ ಅಥಣಿಯಲ್ಲಿ 3 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಯು ಕೆ.ಎನ್. ಸಂಗಮ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಪರೀಕ್ಷೆಗೆ ನಿಯೋಜನೆಗೊಂಡಿರುವ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು