ಕುಟುಂಬ ಸದಸ್ಯರ ಜೊತೆ ಸಮಯ ಕಳೆದ ಅಭ್ಯರ್ಥಿಗಳು!

ಸೋಮವಾರ, ಮೇ 27, 2019
24 °C

ಕುಟುಂಬ ಸದಸ್ಯರ ಜೊತೆ ಸಮಯ ಕಳೆದ ಅಭ್ಯರ್ಥಿಗಳು!

Published:
Updated:
Prajavani

ಬೆಳಗಾವಿ: ಲೋಕಸಭಾ ಚುನಾವಣೆಯ ಪ್ರಚಾರ ಮಾಡಿ ಸುಸ್ತಾಗಿದ್ದ ಅಭ್ಯರ್ಥಿಗಳು ಮತದಾನ ಮುಗಿದ ಮರುದಿನ ಬುಧವಾರ ವಿಶ್ರಾಂತಿ ಪಡೆದರು. ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ, ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ತಮ್ಮ ಕುಟುಂಬ ಸದಸ್ಯರ ಜೊತೆ ಕಾಲಕಳೆದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುರೇಶ ಅಂಗಡಿ ದಿನವಿಡೀ ಸಮಯ ಕಳೆದರು. ಪತ್ನಿ, ಮಗಳು ಹಾಗೂ ಮೊಮ್ಮಕ್ಕಳ ಜೊತೆ ಕುಶಲೋಪರಿಯಲ್ಲಿ ತೊಡಗಿದ್ದರು. ಸುಮಾರು ಒಂದು ತಿಂಗಳಿನಿಂದ ಬಿರುಸಿನ ಪ್ರಚಾರ ನಡೆಸಿದ್ದ ಸುರೇಶ ಅವರು, ಕುಟುಂಬ ಸದಸ್ಯರಿಗೆ ಸಮಯ ನೀಡಿರಲಿಲ್ಲ. ಪ್ರತಿದಿನ ಬೆಳಿಗ್ಗೆ 6ಗಂಟೆಯಿಂದಲೇ ಪ್ರಚಾರ ಆರಂಭಿಸುತ್ತಿದ್ದ ಅವರು, ರಾತ್ರಿ 10 ಗಂಟೆಗೆ ಪ್ರಚಾರ ಮುಗಿಸುತ್ತಿದ್ದರು. ಮನೆಗೆ ಮರಳುವಾಗ ರಾತ್ರಿ 11 ಅಥವಾ 12 ಗಂಟೆ ಆಗಿರುತ್ತಿತ್ತು. ಹೀಗಾಗಿ ಕುಟುಂಬ ಸದಸ್ಯರಿಗೆ ಸಮಯ ನೀಡಿರಲಿಲ್ಲ.

ಮತದಾನ ನಡೆದುಹೋಗಿದ್ದರಿಂದ ಸುರೇಶ ಅವರು ಪ್ರಚಾರಕ್ಕೆ ತೆರಳಲಿಲ್ಲ. ಮನೆಯಲ್ಲಿಯೇ ಇದ್ದು, ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಲೋಕಾಭಿರಾಮವಾಗಿ ಚರ್ಚಿಸಿದರು. ಟಿ.ವಿ ಚಾನೆಲ್‌ಗಳಲ್ಲಿ ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸಿದರು. ಚುನಾವಣೆಯ ಫಲಿತಾಂಶ ಹಾಗೂ  ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಕುರಿತು ಆಪ್ತರ ಜೊತೆ ಲೋಕಾಭಿರಾಮವಾಗಿ ಮಾತನಾಡಿದರು.

ವಿಶ್ವಾಸ: ‘ಮೂರು ಅವಧಿಯಲ್ಲಿ ಸಂಸದನಾಗಿ ಮಾಡಿದ ಕೆಲಸ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದಾಗಿ ಗೆಲ್ಲುವ ವಿಶ್ವಾಸವಿದೆ’ ಎಂದು ಸುರೇಶ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿಗೆ ಬಂದರೆ ಸ್ವಾಗತ. ಅವರು ಕಾಂಗ್ರೆಸ್‌ನ ಮೂಲ ಕಾರ್ಯಕರ್ತರಾಗಿದ್ದರು. ಆದರೆ, ಆ ಪಕ್ಷವು ಅವರಿಗೆ ಮೋಸ ಮಾಡಿದೆ’ ಎಂದು ಹೇಳಿದರು.

ಕುಟುಂಬದವರ ಜೊತೆ ಸಮಯ ಕಳೆದ ಸಾಧುನವರ:

ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ಬೈಲಹೊಂಗಲದಲ್ಲಿರುವ ತಮ್ಮ ನಿವಾಸದಲ್ಲಿ ಸಮಯ ಕಳೆದರು. ಪತ್ನಿ, ಒಬ್ಬ ಪುತ್ರ, ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳ ಜೊತೆ ಕಾಲ ಕಳೆದರು.

ಬೆಳಿಗ್ಗೆ ಎಂದಿನಂತೆ ವಾಯು ವಿಹಾರ ನಡೆಸಿದರು. ಪ್ರಚಾರದಲ್ಲಿ ತಮಗೆ ಸಾಥ್‌ ನೀಡಲು ಬಂದಿದ್ದ ಮಕ್ಕಳು, ಮೊಮ್ಮಕ್ಕಳ ಜೊತೆ ಉಪಹಾರ ಸೇವಿಸಿದರು. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಶಕ್ತಿ ಮೀರಿ ಪ್ರಚಾರ ನಡೆಸಿದ್ದರು. ಇದರಿಂದ ಉಂಟಾಗಿದ್ದ ದೈಹಿಕ ಆಯಾಸವನ್ನು ಮನೆಯಲ್ಲಿಯೇ ಇದ್ದುಕೊಂಡು ಕಳೆದರು. ಟಿ.ವಿಯಲ್ಲಿ ರಾಜ್ಯ ರಾಜಕೀಯದ ಬೆಳವಣಿಗೆ ಕುರಿತು ಸುದ್ದಿಗಳನ್ನು ವೀಕ್ಷಿಸಿದರು. ಸ್ನೇಹಿತರು, ಕುಟುಂಬದ ಸದಸ್ಯರ ಜೊತೆ ಊಟ ಸವಿದರು.

ಪೈಪೋಟಿಯ ನಿರೀಕ್ಷೆ:

‘ಮೂರು ಸಲ ಸಂಸದರಾಗಿದ್ದರೂ ಸುರೇಶ ಅಂಗಡಿ ಜನರ ನಿರೀಕ್ಷೆಗಳನ್ನು ಈಡೇರಿಸಿಲ್ಲ. ಇದರಿಂದಾಗಿ ಮತದಾರರು ಈ ಸಲ ಬದಲಾವಣೆ ಬಯಸಿದ್ದಾರೆ. ಇದರ ಲಾಭ ತಮಗೆ ದಕ್ಕಲಿದೆ’ ಎಂದು ಸಾಧುನವರ ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !