ಮೂರು ತಿಂಗಳಲ್ಲಿ ಪ್ರಕರಣಗಳ ವಿಲೇವಾರಿ: ಮಾನವ ಹಕ್ಕುಗಳ ಆಯೋಗದ ಸದಸ್ಯ ದತ್ತ

7

ಮೂರು ತಿಂಗಳಲ್ಲಿ ಪ್ರಕರಣಗಳ ವಿಲೇವಾರಿ: ಮಾನವ ಹಕ್ಕುಗಳ ಆಯೋಗದ ಸದಸ್ಯ ದತ್ತ

Published:
Updated:
Deccan Herald

ಬೆಳಗಾವಿ: ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನು ಮೂರು ತಿಂಗಳ ಒಳಗೆ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ್‌ ದತ್ತ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಗೆ ಸಂಬಂಧಿಸಿದ ಮಾನವ ಹಕ್ಕುಗಳ ಆಯೋಗದ ಬಾಕಿ ಪ್ರಕರಣಗಳ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಐದು ವರ್ಷಗಳಿಂದ ಸಂಪೂರ್ಣವಾದ ಆಯೋಗ ಇರಲಿಲ್ಲ. ಇದರಿಂದಾಗಿ ಬಹಳಷ್ಟು ಪ್ರಕರಣಗಳು ಬಾಕಿ ಉಳಿದಿವೆ. ನನ್ನ ಪೀಠದ ಎದುರು 4,000 ಪ್ರಕರಣಗಳಿವೆ. ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು. ಅಧ್ಯಕ್ಷ ಡಿ.ಎಚ್. ವಘೇಲಾ ಅವರ ಸೂಚನೆಯಂತೆ, ಹೊಸ ಪ್ರಕರಣಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಲಾಗುವುದು’ ಎಂದು ಹೇಳಿದರು.

‘ಆಡಳಿತ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಂಡಿರುವ ಬಹಳಷ್ಟು ಮಂದಿ, ಆಯೋಗದ ಕದ ತಟ್ಟುತ್ತಿದ್ದಾರೆ. ಇದರಿಂದಾಗಿ, ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಮಾನವ ಹಕ್ಕುಗಳ ಆಯೋಗಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಮೂರು ತಿಂಗಳೊಳಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ವಿಳಂಬ ಮಾಡಬೇಡಿ: ‘ವರದಿ ಸಲ್ಲಿಸಲು ವಿಳಂಬವಾದರೆ ನೋಟಿಸ್ ಜಾರಿಗೊಳಿಸಲಾಗುವುದು. ನಂತರವೂ ಉತ್ತರ ನೀಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೆಳಹಂತದ ಅಧಿಕಾರಿಗಳು ನೀಡುವ ವರದಿಯನ್ನಷ್ಟೇ ಕಳುಹಿಸಬಾರದು. ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದಾಗಿ ಪ್ರಕರಣದ ಕುರಿತು ಪರಿಶೀಲಿಸಿ, ವಿಚಾರಣೆ ನಡೆಸಿ ವರದಿ ಕೊಡಬೇಕು. ಪ್ರಕರಣಗಳು ವಿಳಂಬವಾಗುವುದರಿಂದ ಸಾರ್ವಜನಿಕರಿಗೆ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಆದ್ದರಿಂದ ವರದಿ ಸಲ್ಲಿಸಲು ವಿಳಂಬ ಮಾಡುವುದು ಸಮಂಜಸವಲ್ಲ. ಬೇಗ ವರದಿ ದೊರೆತರೆ, ತ್ವರಿತ ವಿಲೇವಾರಿ ಸಾಧ್ಯವಾಗುತ್ತದೆ’ ಎಂದರು.

‘ಉತ್ತಮ ಆಡಳಿತಕ್ಕೆ ಅನುಕೂಲ ಮಾಡಿಕೊಡುವುದು ಆಯೋಗದ ಉದ್ದೇಶವಾಗಿದೆ. ಜಿಲ್ಲಾಮಟ್ಟದಲ್ಲಿ ಆಡಳಿತ ಸರಿಯಾಗಿದ್ದರೆ ಇಡೀ ರಾಜ್ಯ ಸುವ್ಯವಸ್ಥಿತವಾಗಿರುತ್ತದೆ. ಆದ್ದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ಪಡೆದರು.

ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ, ಪಾಲಿಕೆ ಆಯುಕ್ತ ಶಶಿಧರ ಕುರೇರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !