ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಮಲ್ಲಮ್ಮನ ಬೆಳವಡಿಯಲ್ಲಿ ಸಿಸಿಟಿವಿ ಕ್ಯಾಮೆರಾ

ಗ್ರಾಮ ಪಂಚಾಯ್ತಿಯಿಂದ ಅಭಿವೃದ್ಧಿ ಕಾರ್ಯ
Last Updated 22 ಮಾರ್ಚ್ 2021, 12:13 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಳ್ಳಿಗಳ ಪೈಕಿ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯ್ತಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದು ಗಮನಸೆಳೆಯುತ್ತಿದೆ.

ಪಿಡಿಒ ಉಸ್ಮಾನ ನದಾಫ ಗ್ರಾಮದ ಎಲ್ಲ ಪ್ರಮುಖ ವೃತ್ತಗಳಲ್ಲಿ, ಸದಾ ಜನ ಸಂಚಾರವಿರುವ ಪ್ರದೇಶಗಳಲ್ಲಿ ಒಂದು ತಿಂಗಳ ದೃಶ್ಯಗಳ ಸಂಗ್ರಹಣಾ ಸಾಮರ್ಥ್ಯವಿರುವ16 ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಮತ್ತು ನಾಗರಿಕರ ಸುರಕ್ಷತೆಯ ಹಿತದೃಷ್ಟಿಯಿಂದ ₹ 2 ಲಕ್ಷ ವೆಚ್ಚದಲ್ಲಿ ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ಇವುಗಳಿಗೆ ವೈಫೈ ಸಂಪರ್ಕವಿದ್ದು, ಲೈವ್‌ ದೃಶ್ಯವನ್ನು ಗ್ರಾಮ ಪಂಚಾಯ್ತಿಯಲ್ಲಿ ಹಾಗೂ ನಿಗದಿತ ಸಿಬ್ಬಂದಿಯ ಮೊಬೈನ್‌ನಲ್ಲಿ ವೀಕ್ಷಿಸಿ ಮಾನಿಟರ್ ಮಾಡಬಹುದಾಗಿದೆ.

8ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 26 ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಂಚಾಯ್ತಿ ಅನುದಾನದಲ್ಲಿ ಮಲ್ಲಮ್ಮನ ವೃತ್ತ, ವೀರಭದ್ರೇಶ್ವರ ದೇವಸ್ಥಾನ, ಬಸ್ ನಿಲ್ದಾಣ ಮೊದಲಾದ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ವಹಿಸಲಾಗಿದೆ. ಇದಕ್ಕೆ ಗ್ರಾಮಸ್ಥರು ಹಾಗೂ ಸದಸ್ಯರು ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಪಂಚಾಯ್ತಿ ಅಧಿಕಾರಿಗಳು.

‘ಗ್ರಾಮದ ಅಭಿವೃದ್ಧಿಗೆ ಪಂಚಾಯ್ತಿಯಿಂದ ಆದ್ಯತೆ ನೀಡಿದ್ದೇವೆ. ಉದ್ಯಾನ, ಹೈಟೆಕ್ ಡಿಜಿಟಲ್ ಲೈಬ್ರರಿ, ಸಭಾಭವನ, ಕೆರೆ ಅಭಿವೃದ್ಧಿ, ಶಾಲೆಗೆ ಕಾಂಪೌಂಡ್, ಆಟದ ಮೈದಾನ, ಮಳೆ ನೀರು ಸಂಗ್ರಹ ವ್ಯವಸ್ಥೆ, ಇಂಗು ಗುಂಡಿ ಮಾಡಲಾಗಿದೆ. ₹ 58 ಲಕ್ಷ ವೆಚ್ಚದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಪೂರೈಕೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ವೀರವನಿತೆ ಬೆಳವಡಿ ಮಲ್ಲಮ್ಮಳ ನಾಡಿನಲ್ಲಿ ಜನಿಸಿದ್ದು ನಮ್ಮ ಹೆಮ್ಮೆ. ಈ ಗ್ರಾಮದ ಸಮಗ್ರ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆರೇಣುಕಾ ಕುರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT