ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.27ರಂದು ಬೆಳಗಾವಿಗೆ ಪ್ರಧಾನಿ ಭೇಟಿ: ಮನೆ ಮಾಡಿದ ಸಂಭ್ರಮ

Last Updated 24 ಫೆಬ್ರುವರಿ 2023, 16:20 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸುತ್ತಿರುವುದು ಹಬ್ಬದ ವಾತಾವರಣ ಸೃಷ್ಟಿಸಿದೆ. ಕಾರ್ಯಕ್ರಮದ ಯಶಸ್ವಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಫೆ.27ರಂದು ಕಾರ್ಯಕ್ರಮ ನಡೆಯಲಿರುವ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಪೂರ್ವಸಿದ್ಧತೆ ಪರಿಶೀಲಿಸಿ, ಶುಕ್ರವಾರ ಮಾತನಾಡಿದ ಅವರು, ‘ಕೃಷಿ ಸಮ್ಮಾನ್‌ ಯೋಜನೆಯ ನಿಧಿ ವರ್ಗಾವಣೆ, ರೈಲ್ವೆ ಅಭಿವೃದ್ಧಿ ಯೋಜನೆಗಳು ಹಾಗೂ ಜಲಜೀವನ ಮಿಷನ್ ಯೋಜನೆಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಇದರಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ನಿಧಿಯನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ. ಒಟ್ಟು 8 ಕೋಟಿ ರೈತರಿಗೆ ₹16 ಸಾವಿರ ಕೋಟಿ ಹಣ ಜಮೆಯಾಗಲಿದೆ. ಇದರಲ್ಲಿ ರಾಜ್ಯದ 4,95,790 ರೈತರಿಗೆ ₹991.16 ಕೋಟಿ, ಬೆಳಗಾವಿ ಜಿಲ್ಲೆಯ 51,649 ರೈತರಿಗೆ ₹102 ಕೋಟಿ ಜಮೆಯಾಗಲಿದೆ’ ಎಂದರು.

‘ರೋಡ್‌ ಶೋ ಅಷ್ಚುಕಟ್ಟಾಗಿ ನಿಭಾಯಿಸಬೇಕು. ಕಾರ್ಯಕ್ರಮದಲ್ಲಿ ಈ ಭಾಗದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ಸ್ಮರಣಿಕೆ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಾರಿಗೆ ವ್ಯವಸ್ಥೆ: ‘ವಿವಿಧ ಯೋಜನೆಯ ಫಲಾನುಭವಿಗಳನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಕಾರ್ಯಕ್ರಮಕ್ಕೆ ಕರೆತರಲು ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಒದಗಿಸಬೇಕು’ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

‘ಊಟ, ನೀರು ಮತ್ತು ಮಜ್ಜಿಗೆಯನ್ನು ಸಮರ್ಪಕವಾಗಿ ವಿತರಿಸಲು ತಂಡಗಳನ್ನು ನಿಯೋಜಿಸಬೇಕು. ವೇದಿಕೆ, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಗ್ರೀನ್ ರೂಮ್, ತಾತ್ಕಾಲಿಕ ರಸ್ತೆ, ಊಟದ ವ್ಯವಸ್ಥೆ ಕುರಿತು ಮಾಹಿತಿ’ ನೀಡಿದರು.

ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರ್ಲಿ, ಮಾಧ್ಯಮ ಸಂಚಾಲಕ ರವೀಂದ್ರ ಮುತಾಲಿಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಲಕ್ಷ ಜನರಿಗೆ ಊಟದ ವ್ಯವಸ್ಥೆ

‘ರಸ್ತೆ ದುರಸ್ತಿ, ಸೌಂದರ್ಯೀಕರಣ ಕೆಲಸ ನಡೆದಿದೆ. ಕನಿಷ್ಠ ಒಂದು ಲಕ್ಷ ಜನರಿಗೆ ಕುಡಿಯುವ ನೀರು, ಊಟ, ಮಜ್ಜಿಗೆ ಪ್ಯಾಕೆಟ್ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ, ಕೃಷಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾಹಿತಿ ನೀಡಿದರು.

ಮುಖ್ಯ ವೇದಿಕೆಗೆ ಆಗಮಿಸುವುದಕ್ಕಿಂತ ಮುಂಚೆ ಕಿರುತೆರೆ ಕಲಾವಿದರು ಪರ್ಯಾಯ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT