ಶತಮಾನದ ಶಾಲೆಯಲ್ಲಿ ಅತ್ಯಾಧುನಿಕ ಕಲಿಕೆ

7
ಅಥಣಿ ತಾಲ್ಲೂಕು ಸಂಕೋನಟ್ಟಿಯಲ್ಲಿ ಮಾದರಿ ಸ್ಕೂಲ್

ಶತಮಾನದ ಶಾಲೆಯಲ್ಲಿ ಅತ್ಯಾಧುನಿಕ ಕಲಿಕೆ

Published:
Updated:
Deccan Herald

ಅಥಣಿ: ಶತಮಾನದ ಇತಿಹಾಸ ಹೊಂದಿರುವ ತಾಲ್ಲೂಕಿನ ಸಂಕೋನಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅತ್ಯಾಧುನಿಕ ವ್ಯವಸ್ಥೆಯಲ್ಲಿ ಕಲಿಸಲಾಗುತ್ತಿದೆ.

ಗ್ರಾಮಸ್ಥರ ಸಹಕಾರ ಹಾಗೂ ದಾನಿಗಳ ನೆರವಿನಿಂದ, ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ. ಅನುಭವಿ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಮಕ್ಕಳ ಕಲಿಕೆಯ ಮಟ್ಟ ವೃದ್ಧಿಸುತ್ತಿದೆ. ಹೀಗಾಗಿ, ಪೋಷಕರು ಮಕ್ಕಳನ್ನು ಇಲ್ಲಿಗೆ ಸೇರಿಸಲು ಆಸಕ್ತಿ ತೋರಿಸುತ್ತಿದ್ದಾರೆ.

ಇಲ್ಲಿನ ಮಕ್ಕಳು ಶಿಕ್ಷಣಕ್ಕಾಗಿ ಬೇರೆಡೆಗೆ ಹೋಗುವುದನ್ನು ಹಾಗೂ ತೊಂದರೆಪಡುವುದನ್ನು ತಪ್ಪಿಸಲು, ಶಿಕ್ಷಣ ಪ್ರೇಮಿ ರತ್ನಪ್ಪ ಪರಪ್ಪ ಮಗದುಮ್‌ ಶಾಲಾ ಕಟ್ಟಡ ನಿರ್ಮಿಸಲು 1 ಎಕರೆ 26 ಗುಂಟೆ ಜಮೀನು ದಾನ ನೀಡಿದ್ದರು. ಮೊದಲಿಗೆ ಅಲ್ಲಿ 4 ಕೊಠಡಿಗಳನ್ನು ನಿರ್ಮಿಸಲಾಗಿತ್ತು. 1918ರ ಮಾರ್ಚ್‌ 8ರಂದು ಬಡಿಗೇರ ಓಣಿಯ ಪರಮಾನಂದ ದೇವಸ್ಥಾನದಲ್ಲಿ ಪ್ರಾರಂಭವಾದ ಈ ಶಾಲೆಯು ಆರಂಭದಲ್ಲಿ 1ರಿಂದ 4ನೇ ತರಗತಿಗಳನ್ನು ಹೊಂದಿತ್ತು. ಕೊಠಡಿಗಳು ನಿರ್ಮಾಣವಾದ ನಂತರ ಅಲ್ಲಿಗೆ ಸ್ಥಳಾಂತರಿಸಲಾಯಿತು. ನಂತರದ ಶಿಕ್ಷಣಕ್ಕಾಗಿ ಮಕ್ಕಳು ಬೇರೆ ಕಡೆಗೆ ಹೋಗಬೇಕಾಗಿತ್ತು.

ಈಗಿನ ನೋಟ:

ಈಗ 16 ಕೊಠಡಿಗಳನ್ನು ಹೊಂದಿದೆ. 1ರಿಂದ 7ನೇ ತರಗತಿವರೆಗೆ ಕಲಿಸಲಾಗುತ್ತದೆ. 300 ವಿದ್ಯಾರ್ಥಿಗಳಿದ್ದಾರೆ. 12 ಮಂದಿ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಎಚ್. ಮಾಲಗಾರ ಮುಖ್ಯಶಿಕ್ಷಕರಾಗಿದ್ದಾರೆ.

ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್ ಸೌಲಭ್ಯ, ವಿಶಾಲವಾದ ಆಟದ ಮೈದಾನ, ಪ್ರಯೋಗಾಲಯ, ಗ್ರಂಥಾಲಯ, ಬಿಸಿಯೂಟ ಕೊಠಡಿ ಸೌಲಭ್ಯವಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌, ಮೀನಾ ತಂಡ, ಭಾರತ ಸೇವಾದಳ, ಪರಿಸರ ಕ್ಲಬ್, ಶಾಲಾ ಸಂಸತ್ತು ಮೂಲಕ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದು ಮಕ್ಕಳ ಜ್ಞಾನವನ್ನು ವೃದ್ಧಿಸುತ್ತಿದೆ; ಅವರು ಕ್ರಿಯಾಶೀಲವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದೆ.

ಶಿಕ್ಷಕರ ಪಾತ್ರ:

ಅಶೋಕ ಕೌಜಲಗಿ,  ಬಸಯ್ಯ ಅವರವಾಡಮಠ, ಅಪ್ಪಾಸಾಬ ಪಡನಾಡ, ಬಸಲಿಂಗಪ್ಪ ಕರಬಸಪ್ಪಗೊಳ, ಗಿರಿಮಲ್ಲ ಧರಿಗೌಡ ₹ 12.50 ಲಕ್ಷ ಮೌಲ್ಯದ ವಸ್ತುಗಳನ್ನು ಕೊಡಿಸಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ದಿಲೀಪ ಪಡನಾಡ ಹಾಗೂ ಸದಸ್ಯರೂ ಸಹಕಾರ ನೀಡುತ್ತಿದ್ದಾರೆ. ‌ಎಂ.ಬಿ. ಪಡನಾಡ ಊಟದ ತಟ್ಟೆಗಳನ್ನು ಕೊಡಿಸಿದ್ದಾರೆ. ಮಕ್ಕಳಿಗೆ ಅಗಾಗ ಪ್ರೋತ್ಸಾಹಧನ ನೀಡುತ್ತಾ ಬಂದಿದ್ದಾರೆ.

‘ಶಾಲೆಯ ಒಳಾವರಣದ ಸುತ್ತಲೂ ಗಿಡ–ಮರಗಳನ್ನು ಬೆಳೆಸಲಾಗುತ್ತಿದೆ. ಪ್ರತಿ ವರ್ಷ ಪರಿಸರ ದಿನ ಆಚರಿಸಿ ಜಾಗೃತಿ ಮಾಡಲಾಗುತ್ತಿದೆ.  ಪ್ಲಾಸ್ಟಿಕ್‌ ಮುಕ್ತ ಶಾಲೆಯನ್ನಾಗಿ ಘೋಷಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ವಿಜ್ಞಾನ ವಿಷಯವನ್ನು ಪ್ರಾಯೋಗಿಕವಾಗಿ ಮತ್ತು ಪ್ರೊಜೆಕ್ಟರ್ ಮೂಲಕ ಹೇಳಲಾಗುತ್ತಿದೆ. ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸಲಾಗುತ್ತಿದೆ. ಇಲ್ಲಿ ಕಲಿತ ಬಹಳ ವಿದ್ಯಾರ್ಥಿ–ವಿದ್ಯಾರ್ಥಿನಿಯರು ವಿವಿಧ ಉದ್ಯೋಗದಲ್ಲಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕ ಪಡನಾಡ ಹೇಳಿದರು.‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !