ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೇಂದ್ರ ಬಜೆಟ್ ಬಗ್ಗೆ ಪ್ರಮುಖರ ಪ್ರತಿಕ್ರಿಯೆಗಳು

Last Updated 1 ಫೆಬ್ರುವರಿ 2022, 13:05 IST
ಅಕ್ಷರ ಗಾತ್ರ

ಸರ್ಕಾರದ ಬದ್ಧತೆ ಪ್ರದರ್ಶನ

2022–23ನೇ ಕೇಂದ್ರ ಬಜೆಟ್‌ನಲ್ಲಿ ರಾಸಾಯನಿಕ ಮುಕ್ತ ಮತ್ತು ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿರುವುದು ಮತ್ತು ಕೃಷಿ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಕೊಟ್ಟಿರುವುದು ರೈತರ ಪರವಾಗಿರುವ ಬದ್ಧತೆಯನ್ನು ತೋರಿಸಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ ಹಾಗೂ ಅಭಿವೃದ್ಧಿಗೂ ಪೂರಕವಾಗಿದೆ. ರೈತರಿಗೆ ಒಂದು ದೇಶ ಒಂದು ಉತ್ಪನ್ನ ಯೋಜನೆ ಅನುಷ್ಠಾನ, 2023ನೇ ವರ್ಷವನ್ನು ಸಿರಿ ಧಾನ್ಯಗಳ ವರ್ಷವೆಂದು ಘೋಷಿಸಿರುವುದು, 400 ರೈಲುಗಳ ಘೋಷಣೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 80 ಲಕ್ಷ ಮನೆಗಳ ನಿರ್ಮಾಣದ ಗುರಿ, 2 ಲಕ್ಷ ಅಂಗನವಾಡಿಗಳ ಆಧುನೀಕರಣ, ನದಿಗಳ ಜೋಡಣೆ, ಸಹಕಾರಿ ಸಂಘಗಳ ತೆರಿಗೆ ಇಳಿಕೆ ಶ್ಲಾಘನೀಯ.

– ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

ಜನಪರವಾಗಿದೆ

ಕೇಂದ್ರ ಸಚಿವೆ ನಿರ್ಮಲಾ ಸೀತಾರಮನ್ ಅವರು ಮಂಡಿಸಿರುವ ಬಜೆಟ್ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಪೂರಕವಾಗಿರುವ ಬಜೆಟ್ ಆಗಿದೆ. ಅತ್ಯಂತ ದೂರದೃಷ್ಠಿಯಿಂದ ಕೂಡಿರುವ ಈ ಬಜೆಟ್‌ನಲ್ಲಿ ನೀರಾವರಿ, ಕೃಷಿ, ಆರೋಗ್ಯ, ಶಿಕ್ಷಣ, ರಸ್ತೆ, ಸಾರಿಗೆ , 400 ಹೊಸ ರೈಲು ಯೋಜನೆಗಳು, ಡಿಜಿಟಲೀಕರಣ ಹಾಗೂ ಮೂಲ ಸೌಕರ್ಯ ಮತ್ತು ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದ್ದು ಸ್ವಾಗತಾರ್ಹ. ಭಾರತದ ಆರ್ಥಿಕ ಸ್ಥಿತಿ-ಗತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿ ಆಗಲಿದೆ. ಎಲ್ಲ ವರ್ಗಗಳ ಜನರಿಗೆ ಅನುಕೂಲವಾಗಲಿದೆ.

- ಪ್ರಶಾಂತ ಅರಳೀಕಟ್ಟಿ, ಗೋಕಾಕ

ಸುಧಾರಣೆಗೆ ಪ್ರಯತ್ನ

ಬದಲಾವಣೆಯನ್ನು ಒಂದೇ ರಾತ್ರಿಯಲ್ಲಿ ಮಾಡಲಾಗದು. ಈ ನಿಟ್ಟಿನಲ್ಲಿ ನೋಡಿದರೆ ಕೇಂದ್ರದ ಬಜಟ್ ಸುಧಾರಣೆ, ಪ್ರದರ್ಶನ ಹಾಗೂ ಪರಿವರ್ತನೆಗೆ ಪೂರಕವಾಗಿದೆ. ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆದಾಯ ತೆರಿಗೆ ವಿನಾಯಿತಿ ಪ್ರಮಾಣ ಹೆಚ್ಚಿಸಬೇಕಿತ್ತು. ಆದರೆ, ಅದು ಆಗದಿರುವುದು ಮಧ್ಯಮ ವರ್ಗದ ವೇತನದಾರರಿಗೆ ನಿರಾಸೆಯಾಗಿದೆ. ಇಂಧನ ದರ ಏರಿಕೆಯಿಂದ ತೊಂದರೆಯಾಗಲಿದೆ. ನದಿಗಳ ಜೋಡೆಣೆಯಂತಹ ಹಲವು ಯೋಜನೆಗಳು ಸ್ವಾಗತಾರ್ಹವಾಗಿವೆ.

- ಸತೀಶ ತೆಂಡುಲ್ಕರ್, ಅಧ್ಯಕ್ಷ, ನಾಗರಿಕ ಪರಿಷತ್ತು, ಬೆಳಗಾವಿ

ರೈತರಿಗೆ ನಿರಾಸೆಯಾಗಿದೆ

ಬಜೆಟ್‌ನಲ್ಲಿ ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಸತತ ಅತಿವೃಷ್ಟಿ ಹೊಡೆತದಿಂದ ತತ್ತರಿಸಿ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರ ಸಾಲ ಮನ್ನಾ ಮಾಡದೆ ಇರುವುದು ಮತ್ತು ರೈತರಿಗೆ ಪ್ರತ್ಯೇಕವಾಗಿ ಯಾವುದೇ ಪ್ಯಾಕೇಜ್ ಘೋಷಣೆ ಮಾಡದಿರುವುದು ನಿರಾಸೆ ತಂದಿದೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಕೇವಲ ಮಾತಿನಲ್ಲಿ ಹೇಳಲಾಗುತ್ತಿದೆ. ಆದರೆ, ಅದಕ್ಕೆ ಪೂರಕ ಯೋಜನೆ ಅನುಷ್ಠಾನಗೊಳಿಸದೆ ಕೇವಲ ಹುಸಿ ಭರವಸೆಗಳ ಬಜೆಟ್ ಇದಾಗಿದೆ. ಉದ್ಯಮಿಗಳ ಪರವಾದ ಬಜೆಟ್ ಆಗಿದೆ.

- ರವಿ ಸಿದ್ದಮ್ಮನ್ನವರ, ರೈತ ಮುಖಂಡ

ರಾಜ್ಯಕ್ಕೆ ಮತ್ತೆ ಅನ್ಯಾಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್ ಶೂನ್ಯ ಬಜೆಟ್ ಆಗಿದೆ. ರಾಜ್ಯದ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ದೇಶದ ಜನರು ಏಳು ವರ್ಷಗಳಿಂದ ಅಪಾರ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಅಧಿಕಾರ ನೀಡಿದ್ದರು. ಆದರೆ, ಜನರ ನಿರೀಕ್ಷೆ ಹುಸಿಗೊಳಿಸಲಾಗಿದೆ. ರೈತರನ್ನು ಕಡೆಗಣಿಸಲಾಗಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಏನೂ ದೊರೆತಿಲ್ಲ. ಕೋವಿಡ್ ಸಂಕಷ್ಟದಲ್ಲಿ ಕರ್ನಾಟಕಕ್ಕೆ ದೊಡ್ಡ ಹಾನಿಯಾಗಿತ್ತು. ದುಡಿಯುವ ಹಾಗೂ ಮಧ್ಯಮ ವರ್ಗವು ಪರಿಹಾರ ನಿರೀಕ್ಷಿಸಿದ್ದವು. ಸಚಿವರು ಕರ್ನಾಟಕ ಪ್ರತಿನಿಧಿಸಿದರೂ ಹೊಸ ಯೋಜನೆ ನೀಡದೆ ದ್ರೋಹ ಬಗೆದಿದ್ದಾರೆ

- ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ಮಹಿಳಾ ಸಬಲೀಕರಣಕ್ಕೆ ಒತ್ತು

ಕೇಂದ್ರ ಬಜೆಟ್‌ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಅಭಿವೃದ್ಧಿಗೆ ಪೂರಕವಾಗಿದೆ. ಕೌಶಲಗಳ ಪೂರೈಕೆ ಮತ್ತು ಆನ್ಲೈನ್ ಶಿಕ್ಷಣ ಕಾರ್ಯಕ್ರಮಗಳು, ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಆದ್ಯತೆ ಕೊಟ್ಟಿರುವುದು ಸಂತಸ ತಂದಿದೆ. ರೈತರು, ಗ್ರಾಮೀಣ ಜನರು ಸೇರಿ ಎಲ್ಲ ವರ್ಗಕ್ಕೂ ಬಜೆಟ್ ಸ್ಪರ್ಶ ಸಿಕ್ಕಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ.

- ದೀಪಾ ಎಂ. ಕುಡಚಿ, ನಿರ್ದೇಶಕಿ, ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ

ಜನರ ನಿರೀಕ್ಷೆಗಳು ಹುಸಿ

ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಮತ್ತು ವೇತನದಾರರಿಗೆ ಕೊಡುಗೆ ನೀಡದೆ ಮೋಸ ಮಾಡಿದೆ. ತೆರಿಗೆ ವಿನಾಯಿತಿ ಅಥವಾ ಬೆಲೆ ಇಳಿಕೆ ನಿರೀಕ್ಷಿಸಲಾಗಿತ್ತು. ಆದರೆ ಅಂತಹ ಕೊಡುಗೆ ನೀಡಿಲ್ಲ. ಜಿಎಸ್‌ಟಿ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿರುವಾಗ, ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಮಾಡುವ ಮೂಲಕ ನೆರವಿಗೆ ಬರಬಹುದಿತ್ತು. ಕೋವಿಡ್ ವಿಮೆ ಮೂಲಕವಾದರೂ ನೆರವಾಗಬೇಕಿತ್ತು. ಬಿಜೆಪಿ ಕೇವಲ ಭರವಸೆಗಳ ಸರಕಾರವೇ ಹೊರತು ಈಡೇರಿಸುವುದಲ್ಲ ಎನ್ನುವುದು ಸಾಬೀತಾಗಿದೆ.

- ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ಹೊರೆ ಬೀಳುವುದು ಗೋಚರ

ಸರ್ವಾಂಗೀಣ ಆಭಿವೃದ್ದಿಗಾಗಿ ಸ್ವಾವಲಂಬಿಮಯವಾದ ಬಜೆಟ್ ಇದಾಗಿದೆ. ಉತ್ಪಾದಕ ವಲಯಗಳಾದ ಕೃಷಿ, ಕೈಗಾರಿಕೆ, ಸೇವಾ ವಲಯಗಳಲ್ಲಿ ಸಮ್ಮಾನ್ ನಿಧಿಗಳ ಹಂಚಿಕೆ ಮಾಡಿದ್ದರಿಂದ ಆದಾಯ ಸಂಗ್ರಹ ಹೆಚ್ಚುವ ಸಾದ್ಯತೆ ಇದೆ. ಮೂಲ ಸೌಕರ್ಯ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಚೇತರಿಕೆ ಕಂಡುಬರುವ ಅಂಶಗಳನ್ನು ಹೊಂದಿದೆ. ಅನುತ್ಪಾದಕ ವಲಯಗಳಲ್ಲಿ ನಿಡುತ್ತಿರುವ ಅನುದಾನ ಕಡಿತಗೊಳಿಸಿರುವುದು ಮಧ್ಯಮ ವರ್ಗದವರ ಮೇಲೆ ಹೋರೆ ಬೀಳುವಂತಹ ಸಂಭವ ಗೊಚರಿಸುತ್ತಿದೆ. 2022-23ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿ ಧಾನ್ಯ ವರ್ಷವೆಂದು ಘೋಷಿಸಿರುವುದು ಸ್ವಾಗತಾರ್ಹ

- ಶಿವಾನಂದ ಕಲ್ಲೂರ, ಆರ್ಥಶಾಸ್ತ್ರ ಉಪನ್ಯಾಸಕ, ಬೈಲಹೊಂಗಲ

ಸಂಕಷ್ಟ ಪರಿಹಾರದ ಸಮತೋಲನ ಬಜೆಟ್

ತೆರಿಗೆಯ ಹೊರೆ ಹೇರದ ಆತ್ಮನಿರ್ಭರ ಮತ್ತುಸಮತೋಲನ ಬಜೆಟ್ ಇದಾಗಿದೆ. ಆಧುನಿಕ ಭಾರತ ನಿರ್ಮಾಣದ ದಿಕ್ಸೂಚಿಯೂ ಆಗಿದೆ. ಆರ್ಥಿಕ ವ್ಯವಸ್ಥೆಗೆ ಬೂಸ್ಟರ್ ಡೋಸ್ ನೀಡುವ ಮತ್ತು ಸರ್ವಹಿತದ ದೃಷ್ಟಿಯಿಂದ ಅಭಿವೃದ್ಧಿ ಸಾಧಿಸುವ ಚಿಂತನೆಯ ದೃಢ ಹೆಜ್ಜೆಯಾಗಿದೆ. ವಿಶ್ವದ ಬದಲಾವಣೆಗೆ ಭಾರತ ಸ್ಪಂದಿಸುವ ದೂರದೃಷ್ಟಿಯು ಡಿಜಿಟಲ್ ಮತ್ತು ಕ್ರಿಫ್ಟೋ ಕರೆನ್ಸಿಗೆ ಮಾನ್ಯತೆ ನೀಡುವ ಮೂಲಕ ಕಾರ್ಯಗತವಾಗಿದೆ. ರೈತರು, ಸಹಕಾರ ವ್ಯವಸ್ಥೆಗೆ ಕೊಟ್ಟ ಸವಲತ್ತುಗಳು ಗ್ರಾಮೀಣ ಮತ್ತು ಕೃಷಿ ವ್ಯವಸ್ಥೆಗೆ ಉತ್ತೇಜನ ನೀಡಲಿವೆ. ಸಾವಯುವ ಕೃಷಿಗೆ ಉತ್ತೇಜನ ಹೊಸ ಚೈತನ್ಯ ನೀಡಲಿದೆ. ಐದು ನದಿಗಳ ಜೋಡಣೆ ಆರ್ಥಿಕ, ಕೃಷಿ ಮತ್ತು ಜಲಸಂಪನ್ಮೂಲಗಳ ಕ್ರಾಂತಿಕಾರಿ ಬದಲಾವಣೆಗೆ ಅಡಿಗಲ್ಲಾಗಲಿದೆ.

- ಮಾರುತಿ ಝಿರಲಿ, ವಕ್ತಾರ, ರಾಜ್ಯ ಘಟಕ, ಬಿಜೆಪಿ

ಮಹಿಳೆಯರ ಬಗ್ಗೆ ತಾತ್ಸಾರ

ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರಿಗೆ ಪೂರಕವಾದ ಯಾವ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ‌. ಮಹಿಳಾ ಸಬಲೀಕರಣ ಎನ್ನುವ ಮಾತು ಕೇವಲ ಹೇಳಿಕೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಮಹಿಳೆಯರ ಕುರಿತು ತಾತ್ಸಾರ ಭಾವನೆ ಇದ್ದಂತಿದೆ. ಇದು ಬಜೆಟ್‌ನಲ್ಲಿ ಪ್ರತಿಫಲಿಸುತ್ತಿದೆ. ಇದರಿಂದ ಅಸಮಾಧಾನವಾಗಿದೆ.

- ನಾಗವ್ವ ಪೂಜೇರಿ, ಮೇಕಲಮರಡಿ

ಸಂಕಷ್ಟ ನಿವಾರಣೆಗೆ ಸ್ಪಂದನೆ ಇಲ್ಲ

ದೇಶದ ಯಾವ ವಲಯಕ್ಕೂ ಮತ್ತು ಯಾರ ಸಂಕಷ್ಟಕ್ಕೂ ಸ್ಪಂದನೆ ಇಲ್ಲದ ಬಜೆಟ್ ಇದಾಗಿದೆ. ತುಂಬಾ ನಿರಾಸೆ ಮೂಡಿಸಿದೆ. ಕಳಪೆ ಪ್ರದರ್ಶನಕ್ಕಾಗಿ ಕರ್ನಾಟಕದ ಬಿಜೆಪಿ ಸಂಸದರು, ಕರ್ನಾಟಕ ಪ್ರತಿನಿಧಿಸುತ್ತಿರುವ ವಿತ್ತ ಸಚಿವರಿಗೆ ಇದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

- ವಿನಯ ನಾವಲಗಟ್ಟಿ, ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಘಟಕ

ಹೊಸತನದಿಂದ ಕೂಡಿದೆ

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಹೊಸತನದ ಆಗರವಾಗಿದೆ. ಜನಸಾಮಾನ್ಯರನ್ನು ಕೇಂದ್ರವಾಗಿಟ್ಟುಕೊಂಡು ರೂಪಗೊಂಡಿದೆ. ಕೃಷ್ಣಾ, ಕಾವೇರಿ, ಗೋದಾವರಿ ನದಿಗಳ ಜೋಡಣೆಗೆ ಒತ್ತು ನೀಡಿರುವುದು ಅಭಿನಂದನೀಯ. ಒಂದರಿಂದ 12ನೇ ತರಗತಿಯವರೆಗಿನ ಶಾಲೆಗಳು, ವಿಶ್ವವಿದ್ಯಾಲಯಗಳನ್ನು ಡಿಜಿಟಲೀಕರಣಗೊಳಿಸಿರುವುದು, ಹೊಸ ರೈಲು ಮಾರ್ಗಗಳಿಗೆ ಆದ್ಯತೆ ನೀಡಿರುವುದು, ರೈತರ ಕನಸುಗಳಿಗೆ ಹೆಚ್ಚು ಒತ್ತು ನೀಡಿರುವುದು ವಿಶೇಷ ಎನಿಸಿದೆ. ಒಟ್ಟಿನಲ್ಲಿ ಮಧ್ಯಮವರ್ಗದವರ ಮತ್ತು ಜನಸಾಮಾನ್ಯರ ಬದುಕಿಗೆ ಆದ್ಯತೆ ನೀಡಿದೆ.

- ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT