ಮೂಡಲಗಿ: ‘ಸಹಕಾರ ಕ್ಷೇತ್ರ ಬೆಳೆಯಲು ಕರ್ನಾಟಕವು ಮೂಲಪ್ರೇರಣೆಯಾಗಿದ್ದು, ರಾಜ್ಯದಲ್ಲಿ ಸಹಕಾರಿ ಕ್ಷೇತ್ರವು ಉಜ್ವಲ ಪರಂಪರೆ ಹೊಂದಿದೆ’ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕಲ್ಲೋಳಿಯ ಸತೀಶ ಈರಣ್ಣ ಕಡಾಡಿ ಹೇಳಿದರು.
ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ವಿಜಯಲಕ್ಷ್ಮಿ ವಿವಿದೊದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ಪ್ರಗತಿಗೆ ಪ್ರತ್ಯೇಕವಾದ ಸಚಿವಾಲಯ ಸ್ಥಾಪಿಸುವ ಮೂಲಕ ಸಹಕಾರ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ’ ಎಂದರು.
ಸಂಸ್ಥೆಯ ಅಧ್ಯಕ್ಷ ರಮೇಶ ಉಟಗಿ ಮಾತನಾಡಿ ‘ವಿಜಯಲಕ್ಷ್ಮಿ ಸಹಕಾರಿ ಕೃಷಿ ಸಂಘವು ಎರಡು ದಶಕದಿಂದ ಗ್ರಾಮೀಣ ಭಾಗದಲ್ಲಿ ರೈತರಿಗೆ ಕೃಷಿ ಪ್ರಗತಿಗೆ ಮತ್ತು ಟ್ರ್ಯಾಕ್ಟರ್ ಸಾಲ ನೀಡಿ ಅನುಕೂಲ ಮಾಡಿಕೊಟ್ಟಿದೆ. ಸಂಘದ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಸಂಘವು ಪ್ರಗತಿಯಲ್ಲಿದೆ’ ಎಂದರು.
ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ದೀಪಕ ಕಲ್ಲೋಳಿ, ಕಲ್ಲೋಳಿಯ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸೊಸೈಟಿ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಭಾಗವಹಿಸಿದ್ದರು.
ಸಂಸ್ಥೆಯ ನಿರ್ದೇಶಕರಾದ ಮುತ್ತೆಪ್ಪ ಉರಬಿ, ಮಹಾಲಿಂಗಪ್ಪ ಕಳಸಾರ, ಚಂದ್ರವ್ವ ಪಾಯನ್ನವರ, ಲಕ್ಕವ್ವ ಪಾಟೀಲ, ಪರಸಪ್ಪ ಬೇವಿನಕಟ್ಟಿ, ನಿಂಗಪ್ಪ ಪಾಟೀಲ, ಮಲ್ಲಿಕಾರ್ಜನ ಉಟಗಿ, ಅಮೀನಸಾಬ ಬಾಗವಾನ ಇದ್ದರು.