ಭಾನುವಾರ, ಸೆಪ್ಟೆಂಬರ್ 15, 2019
30 °C
ಸಂಕಷ್ಟ ಹೇಳಿಕೊಳ್ಳಲು ಕಾದಿದ್ದವರ ಅಸಮಾಧಾನ

ತರಾತುರಿಯಲ್ಲಿ ‍ಪರಿಶೀಲನೆ, ಸಂತ್ರಸ್ತರ ಅಳಲು ಆಲಿಸದ ಕೇಂದ್ರ ತಂಡ

Published:
Updated:
Prajavani

ಬೆಳಗಾವಿ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಪ್ರಕಾಶ್‌ ನೇತೃತ್ವದ ಅಧಿಕಾರಿಗಳ ತಂಡ, ‍ತರಾತುರಿಯಲ್ಲಿ ಪರಿಶೀಲನೆಗಷ್ಟೇ ಆದ್ಯತೆ ನೀಡಿತು. ಸಂತ್ರಸ್ತರ ಅಳಲು ಆಲಿಸಲಿಲ್ಲ.

ಬೆಳಿಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ತಂಡ, ಮಧ್ಯಾಹ್ನ ಚಿಕ್ಕೋಡಿ ತಾಲ್ಲೂಕಿನ ಮಾಜರಿ ಸೇತುವೆಯ ಸುತ್ತಮುತ್ತ ನೂರಾರು ಎಕರೆ ಕಬ್ಬಿನ ಬೆಳೆ ಸಂಪೂರ್ಣ ಹಾನಿಯಾಗಿರುವುದನ್ನು ವೀಕ್ಷಿಸಿತು.

‘ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ. ಕೃಷ್ಣಾ ನದಿ ಪ್ರವಾಹದಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಸಾವಿರಾರು ಮನೆಗಳು ಕುಸಿದಿವೆ. 3 ತಿಂಗಳ ಹಿಂದೆ ಈ ಭಾಗದಲ್ಲಿ ನೀರಿಗೆ ತತ್ವಾರವಿತ್ತು. ಆಗಲೂ ಬೆಳೆ ನಷ್ಟವಾಗಿತ್ತು. ಈಗ ನೆರೆಯಿಂದಾಗಿ ಬಹಳಷ್ಟು ಬೆಳೆ ಹಾನಿಯಾಗಿದೆ. ಈ ಭಾಗದ ಸಂತ್ರಸ್ತರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು. ಇದಕ್ಕೆ ತಂಡದ ಅಧಿಕಾರಿಗಳಿಂದ ಪ್ರತಿಕ್ರಿಯೆ ಬರಲಿಲ್ಲ.

ಬಳಿಕ ಮಾಂಜರಿಯ ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ಹಾನಿಯಾಗಿರುವುದನ್ನು ಪರಿಶೀಲಿಸಿತು. ನಂತರ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಬಳಿ ದೂಧ್‌ಗಂಗಾ ನದಿ ಪ್ರವಾಹದಿಂದ ರಸ್ತೆ ಹಾಗೂ ಸೇತುವೆ ಕೊಚ್ಚಿ ಹೋಗಿದ್ದನ್ನು ವೀಕ್ಷಿಸಿತು. ಜುಗೂಳ ಗ್ರಾಮದ ಒಂದೆರಡು ರಸ್ತೆಯಲ್ಲಿ ಪ್ರದಕ್ಷಿಣೆ ಹಾಕಿದ ಅಧಿಕಾರಿಗಳು ಕಾರ್‌ನಿಂದ ಕೆಳಗಿಳಿಯಲೇ ಇಲ್ಲ! ಇದು, ಸಂಕಷ್ಟ ಹೇಳಿಕೊಳ್ಳಲು ಕಾದಿದ್ದ ಸಂತ್ರಸ್ತರ ಅಸಮಾಧಾನಕ್ಕೆ ಕಾರಣವಾಯಿತು.

ನಂತರ, ರಾಯಬಾಗ ತಾಲ್ಲೂಕಿನ ಕುಡಚಿ ಬಳಿಯ ಸೇತುವೆ, ಗೋಕಾಕ ಹೊರವಲಯದ ಲೋಳಸೂರ ಸೇತುವೆ, ಜಾನುವಾರು ಶಿಬಿರವನ್ನು  ವೀಕ್ಷಿಸಿದರು. ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಮಾಡಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು. ಅಲ್ಲಿ ಕೆಲವರ ಮಾತುಗಳನ್ನಷ್ಟೇ ಧಾವಂತದಲ್ಲಿ ಆಲಿಸಿದರು. ಬಳಿಕ ರಾಮದುರ್ಗ ತಾಲ್ಲೂಕಿನ ಆಯ್ದ ಸ್ಥಳಗಳನ್ನು ವೀಕ್ಷಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಪ್ರವಾಹದಿಂದ ಉಂಟಾದ ಹಾನಿಯನ್ನು ಹಾಗೂ ಸಂತ್ರಸ್ತರ ಪುನರ್ವಸತಿಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ತಂಡ, ಆ. 26ರಂದು ಬಾಗಲಕೋಟೆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಿದೆ.

Post Comments (+)