ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಬೆಳೆ, ಮೂಲಸೌಕರ್ಯ ಹಾನಿ ಪರಿಶೀಲಿಸಿದ ಕೇಂದ್ರ ತಂಡ

ಕೇಂದ್ರದ ಅಧಿಕಾರಿಗಳ ತಂಡದಿಂದ ವಿವಿಧ ಪ್ರದೇಶಗಳಿಗೆ ಭೇಟಿ
Last Updated 5 ಸೆಪ್ಟೆಂಬರ್ 2021, 11:46 IST
ಅಕ್ಷರ ಗಾತ್ರ

ಬೆಳಗಾವಿ: ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಅಧ್ಯಯನಕ್ಕಾಗಿ ಜಿಲ್ಲೆಗೆ ಬಂದಿರುವ ಕೇಂದ್ರ ಅಧ್ಯಯನ ತಂಡವು ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಿ ಭಾನುವಾರ ಪರಿಶೀಲನೆ ನಡೆಸಿತು.

ಮೊದಲ ದಿನ ಖಾನಾಪುರ, ಹುಕ್ಕೇರಿ ಹಾಗೂ ಗೋಕಾಕ ತಾಲ್ಲೂಕುಗಳಿಗೆ ಭೇಟಿ ನೀಡಿತು. ಭಾನುವಾರ ಬೆಳಿಗ್ಗೆ ನಗರಕ್ಕೆ ಬಂದ ತಂಡವನ್ನು ಜಿಲ್ಲಾಧಿಕಾರಿ ‌ಎಂ.ಜಿ. ಹಿರೇಮಠ ಸ್ವಾಗತಿಸಿದರು. ಕೇಂದ್ರ ಗೃಹ ಸಚಿವಾಲಯದ ಮುಖ್ಯನಿಯಂತ್ರಣಾಧಿಕಾರಿ (ಅಕೌಂಟ್ಸ್‌) ಸುಶೀಲ್ ಪಾಲ್ ನೇತೃತ್ವದ ನೆರೆ ಅಧ್ಯಯನ ತಂಡವು ಮೊದಲಿಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತು ಚರ್ಚಿಸಿತು.

ಮನೆ, ಬೆಳೆ ಮತ್ತು ರಸ್ತೆ, ಸೇತುವೆ, ಶಾಲಾ ಕಟ್ಟಡಗಳು ಸೇರಿದಂತೆ ಇತರ ಮೂಲಸೌಕರ್ಯಗಳ ಹಾನಿಯ ಕುರಿತು ಛಾಯಾಚಿತ್ರಗಳ ಸಮೇತ ಪ್ರಾತ್ಯಕ್ಷಿಕೆಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೀಡಿದರು.

ಅಧ್ಯಯನ ತಂಡದ ಸದಸ್ಯರಾದ ಕೇಂದ್ರ ಕೃಷಿ ಸಚಿವಾಲಯದ ನಿರ್ದೇಶಕ ಡಾ.ಕೆ. ಮನೋಹರನ್, ಇಂಧನ ಇಲಾಖೆಯ ಶುಭಂ ಗರ್ಗ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ಆರ್ಯ ಮತ್ತಿತರರು ಉಪಸ್ಥಿತರಿದ್ದರು.

ಪರಿಹಾರ ಬಿಡುಗಡೆಗೆ ಕ್ರಮ

‘ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಸರ್ಕಾರದ ಮಾರ್ಗಸೂಚಿ ಪ್ರಕಾರ ನೆರವು ಬಿಡುಗಡೆಗೆ ವರದಿಯನ್ನು ಸಲ್ಲಿಸಲಾಗುವುದು. ನೆರೆ ಅಧ್ಯಯನದ ಬಳಿಕ ಸಾಮಾನ್ಯವಾಗಿ 8–10 ದಿನಗಳೊಳಗೆ ಕೇಂದ್ರಕ್ಕೆ ಸಮಗ್ರ ವರದಿ ಸಲ್ಲಿಸಲಾಗುತ್ತದೆ’ ಎಂದು ಹೇಳಿದರು.

‘ರಾಜ್ಯಕ್ಕೆ ಮಾರ್ಗಸೂಚಿ ಪ್ರಕಾರ ಒಟ್ಟು ₹ 765 ಕೋಟಿ ಬಿಡುಗಡೆಗೆ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವ ಆಧರಿಸಿ ಅಧ್ಯಯನಕ್ಕೆ ಮೂರು ತಂಡಗಳನ್ನು ಕೇಂದ್ರ ಸರ್ಕಾರವು ಕಳುಹಿಸಿದೆ. ಅವು, ವಿವಿಧೆಡೆ ಭೇಟಿ ನೀಡಿ ಹಾನಿ ಪರಿಶೀಲನೆ ಕೈಗೊಂಡಿವೆ. ಬೆಳೆ ಹಾನಿ ಜಂಟಿ ಸಮೀಕ್ಷೆ ಬಳಿಕ ಸೂಕ್ತ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ಆರ್ಯ ತಿಳಿಸಿದರು.

ಗೌಡವಾಡ ಗ್ರಾಮದಲ್ಲಿ ‌ಮನೆಗಳು ಬಿದ್ದಿರುವುದನ್ನು ಅಧಿಕಾರಿಗಳ ವೀಕ್ಷಿಸಿದರು. ಸಂತ್ರಸ್ತರ ಜೊತೆ ಚರ್ಚಿಸಿದರು. ಮನೆ ಕುಸಿದಾಗ ತುರ್ತಾಗಿ ಆಶ್ರಯ ಪಡೆದಿರುವ ಬಗ್ಗೆ ತಿಳಿದುಕೊಂಡರು.

ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಶಶಿಧರ ಬಗಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶು‌ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ ಕೊಳ್ಳಾ ಇದ್ದರು.

ಬೆಳೆ ಹಾನಿ ವೀಕ್ಷಣೆ

ಅತಿವೃಷ್ಟಿಯಿಂದ ‌ತೀವ್ರ ಹಾನಿ‌ ಉಂಟಾಗಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ತಂಡವು ತೋಟಗಾರಿಕೆ ಬೆಳೆಹಾನಿ, ಮನೆ ಹಾಗೂ ಮೂಲಸೌಕರ್ಯ ಹಾನಿಯನ್ನು ಪರಿಶೀಲಿಸಿತು. ಜಿನರಾಳ ಕ್ರಾಸ್‌ನಲ್ಲಿ ತೋಟಗಾರಿಕೆ ಬೆಳೆಹಾನಿ, ಬಡಕುಂದ್ರಿ ಹೊಳೆಮ್ಮ ದೇವಸ್ಥಾನದ ಬಳಿ ಹಿರಣ್ಯಕೇಶಿ ನದಿ ಪಾತ್ರದ ಮನೆಗಳು ಹಾಗೂ ಮೂಲಸೌಕರ್ಯ ಹಾನಿ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು. ಜೂನ್ 2ನೇ ವಾರದಲ್ಲಿ ಬಿತ್ತನೆ ಮಾಡಲಾದ ಕ್ಯಾಬೇಜ್ ಬೆಳೆ‌ ಜುಲೈನಲ್ಲಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಅದೇ ರೀತಿ ಟೊಮೆಟೊ ಬೆಳೆ ಕೂಡ ಹಾನಿಯಾಗಿದೆ ಎಂದು ಅಲ್ಲಿನ ರೈತರು ವಿವರಿಸಿದರು.

‘20 ಗುಂಟೆ ಜಮೀನಿನಲ್ಲಿ 12 ಟನ್ ಇಳುವರಿ ಬರಬೇಕಿತ್ತು. ಮಳೆಯಿಂದಾಗಿ ಕೇವಲ 2 ಟನ್ ಕೂಡ ಬಂದಿಲ್ಲ.‌ ₹ 30ಸಾವಿರ ಖರ್ಚಾಗಿತ್ತು’ ಎಂದು ರೈತರು ಹೇಳಿದರು.

‘ನೂರಾರು ಎಕರೆಯಲ್ಲಿರುವ ಟೊಮೆಟೊ ಬೆಳೆ ಹಾನಿಯಾಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ಆರ್ಯ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವಿವರಿಸಿದರು.

ಹೊಳೆಮ್ಮಾದೇವಿ ದೇವಸ್ಥಾನದ ಆವರಣದಲ್ಲಿ, ಅತಿವೃಷ್ಟಿ ಹಾನಿಗೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು. ಹುಕ್ಕೇರಿ ತಾಲ್ಲೂಕಿನ ಯರನಾಳ, ಇಸ್ಲಾಂಪುರ, ಸುಲ್ತಾನಪುರ, ಹರಗಾಪುರ, ಗುಡಸ-ಹುಲ್ಲೊಳಿ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಹಾನಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತಂಡದ ಸದಸ್ಯರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT