ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಹೆಚ್ಚಲಿ ಜಾಗೃತಿಯ ’ತೂಕ‘; ಸಿಗಲಿ ಸರಿಯಾದ ‘ಅಳತೆ’

ಗ್ರಾಹಕರು, ರೈತರಿಗೆ ಹಲವು ರೀತಿಯಲ್ಲಿ ವಂಚನೆ
Last Updated 23 ಜನವರಿ 2022, 6:54 IST
ಅಕ್ಷರ ಗಾತ್ರ

ಬೆಳಗಾವಿ: ಸುಧಾರಿತ ತಂತ್ರಜ್ಞಾನ ಪರಿಚಯ–ಬಳಕೆ ನಡುವೆಯೂ ಜಿಲ್ಲೆಯಾದ್ಯಂತ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವುದಕ್ಕೆ ಕಡಿವಾಣ ಬಿದ್ದಿಲ್ಲ. ಗ್ರಾಹಕರು ವಂಚನೆಗೆ ಒಳಗಾಗುವುದು ಮುಂದುವರಿದೇ ಇದೆ!

ಇಲಾಖೆಯವರು ಚಾಪೆ ಕೆಳಗೆ ತೂರಿದರೆ, ವರ್ತಕರು ಅಥವಾ ವ್ಯಾಪಾರಿಗಳು ರಂಗೋಲಿ ಕೆಳಗೆ ತೂರಿ ‘ಮೊಸದ ಹೊಸ ಹೊಸ ಮಾರ್ಗ’ಗಳನ್ನು ಕಂಡುಹಿಡಿಯುತ್ತಿದ್ದಾರೆ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕಾದ ಇಲಾಖೆಯವರು ಗೊತ್ತಿದ್ದೂ ಗೊತ್ತಿಲ್ಲದ್ದಂತೆ ವರ್ತಿಸುತ್ತಿದ್ದಾರೆ. ದೂರುಗಳು ಬರಲೆಂದು ಕಾಯುತ್ತಿರುತ್ತಾರೆ. ಅವರ ನಿರ್ಲಕ್ಷ್ಯವು ವ್ಯಾಪಾರಿಗಳಿಗೆ ಲಾಭದ ಅವಕಾಶ ಮಾಡಿಕೊಡುತ್ತಿದೆ. ಗ್ರಾಹಕರು ಹಲವು ಅನಿವಾರ್ಯಗಳಿಗೆ ಒಳಗಾಗಿ ಮೋಸದ ಬಲೆಗೆ ಬೀಳುತ್ತಿದ್ದಾರೆ ಎನ್ನುವ ಮಾತುಗಳು ವ್ಯಾಪಕವಾಗಿವೆ.

ಬಹುತೇಕ ಪದಾರ್ಥಗಳ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ವರ್ತಕರು ನಡೆಸುವ ‘ಕಣ್ಕಟ್ಟು ಆಟ’ದಿಂದಾಗಿ ಗ್ರಾಹಕರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಸಮಯದ ಅಭಾವ ಮೊದಲಾದ ಅನಿವಾರ್ಯಗಳನ್ನು ವ್ಯಾಪಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ದೂರು ಕೊಡುವುದಕ್ಕೆ ಬಯಸುವುದಿಲ್ಲ. ಇದು ಕೂಡ ವರ್ತಕರಿಗೆ ವರವಾಗಿ ಪರಿಣಮಿಸಿದೆ. ಜಾಗೃತಿ ಕಾರ್ಯಕ್ರಮಗಳು ಗ್ರಾಹಕರ ದಿನಕ್ಕಷ್ಟೆ ಸೀಮಿತವಾಗಿವೆ.

‘ಬಿಸಿ’ ಮುಟ್ಟಿಸಿಲ್ಲ!
ಪೆಟ್ರೋಲ್, ಡೀಸೆಲ್‌ ಅಳತೆಯಲ್ಲೂ ಗೋಲ್‌ಮಾಲ್‌ ನಡೆಯುತ್ತಲೇ ಇದೆ. ‘ಬಂಕ್‌ಗಳಲ್ಲಿ ಅಳತೆ ಕಡಿಮೆ ಆಗುವಂತೆ ‘ಸೆಟ್’ ಮಾಡಿರುತ್ತಾರೆ; ಹೀಗಾಗಿ, ಬಹಳ ಎಚ್ಚರ ವಹಿಸಬೇಕು. ₹ 100, ₹ 200 ಹೀಗೆ... ಸಮ ಸಂಖ್ಯೆಯ ಬದಲಿಗೆ ₹99, ₹ 109, ₹ 150 ಹೀಗೆ... ಹಾಕಿಸಬೇಕು’ ಎಂಬ ಸಲಹೆಗಳು ಸವಾರರು ಹಾಗೂ ಚಾಲಕರ ವಲಯದಲ್ಲಿ ಕೇಳಿಬರುತ್ತಿವೆ. ಏನೇ ಮಾಡಿದರೂ ಮೋಸ ಖಚಿತ ಎನ್ನುವ ಮಾತುಗಳೂ ಇವೆ! ಆದರೆ, ಇದ್ಯಾವುದಕ್ಕೂ ಕಡಿವಾಣ ಹಾಕುವ ಅಥವಾ ದೊಡ್ಡ ಮಟ್ಟದಲ್ಲಿ ಬಿಸಿ ಮುಟ್ಟಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆ ಅಥವಾ ಜಿಲ್ಲಾಡಳಿತ ಮಾಡಿಲ್ಲ.

‘ಹೋಟೆಲ್‌ವೊಂದರಲ್ಲಿ ಚಿಕನ್‌ ಕಬಾಬ್‌ ಪಾರ್ಸಲ್‌ ತಂದಿದ್ದೆ. ಮನೆಗೆ ಬಂದು ನೋಡಿದಾಗ ಕೆಲವು ಪೀಸ್‌ ಗೋಬಿ ಮಂಚೂರಿ ಸೇರಿಸಲಾಗಿತ್ತು. ಪ್ರಶ್ನಿಸಿದರೆ, ಕ್ಷಮಿಸಿ ಸರ್ ಎಂಬ ಉತ್ತರ ಬಂತು. ಹೀಗೆ ಹಲವು ರೀತಿಯಲ್ಲಿ ಮೋಸ ಹೋಗುತ್ತಿದ್ದೇವೆ. ಬಂಕ್‌ಗಳಲ್ಲೂ ಇದೇ ಸ್ಥಿತಿ ಇದೆ’ ಎಂದು ಸದಾಶಿವನಗರ ನಿವಾಸಿ ಮಂಜುನಾಥ್‌ ಪ್ರತಿಕ್ರಿಯಿಸಿದರು.

ಜಾಗೃತಿ ಮೂಡಿಸುತ್ತಿಲ್ಲ
‘ಮೋಸವಾದಾಗ ಗ್ರಾಹಕರ ನ್ಯಾಯಾಲಯಕ್ಕೆ ಹೋಗಬೇಕು ಎಂಬ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಲ್ಲ. ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರದಿಂದಲೂ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಹೀಗಾಗಿ, ತೂಕ ಮತ್ತು ಅಳತೆಯಲ್ಲಿ ಗ್ರಾಹಕರನ್ನು ಮೋಸ ಮಾಡುವುದು ಅವ್ಯಾಹತವಾಗಿ ನಡೆದಿದೆ’ ಎನ್ನುತ್ತಾರೆ ಬೆಳಗಾವಿಯ ವಕೀಲ ಎನ್.ಆರ್. ಲಾತೂರ್.

‘ನಗರದಲ್ಲಿ 2 ಗ್ರಾಹಕರ ನ್ಯಾಯಾಲಯಗಳಿವೆ. ಅಲ್ಲಿ 10ಸಾವಿರಕ್ಕೂ ಹೆಚ್ಚಿನ ವಿವಿಧ ಪ್ರಕರಣಗಳು ಬಾಕಿ ಇವೆ. ಅವುಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಂಬಂಧಿಸಿದ ಸಚಿವರು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಅದು ಕಂಡುಬರುತ್ತಿಲ್ಲ’ ಎಂದು ದೂರಿದರು.

ಕಾನೂನು ಮಾಪನಶಾಸ್ತ್ರ ಇಲಾಖೆಗೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಜಿಲ್ಲೆಗೆ 22 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 10 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ! ಬೈಲಹೊಂಗಲ ಸೇರಿ ಹಲವು ತಾಲ್ಲೂಕು ಕೇಂದ್ರಗಳಲ್ಲಿ ಇನ್‌ಸ್ಟೆಕ್ಟರ್‌ಗಳ ಹುದ್ದೆಗಳೇ ಖಾಲಿ ಇವೆ ಎಂದು ಮೂಲಗಳು ತಿಳಿಸಿವೆ.

ವರ್ಷಕ್ಕೊಮ್ಮೆ ಪರಿಶೀಲಿಸಲು ಬರುತ್ತಾರೆ
ಚನ್ನಮ್ಮನ ಕಿತ್ತೂರು:
ಚಿಲ್ಲರೆ ತೂಕದಲ್ಲಿ ವ್ಯತ್ಯಾಸವಾಗುವುದು ಗ್ರಾಮೀಣ ಭಾಗದ ಗ್ರಾಹಕರ ಅರಿವಿಗೆ ಬರುವುದು ಅಪರೂಪ. ಆದರೆ, ಅಳತೆಯಲ್ಲಿ ಹಾಗಾಗುವುದಿಲ್ಲ. ಎಣ್ಣೆಯನ್ನು ಪಡೆದರೆ ಕ್ಯಾನ್‌ಗೆ ಅಥವಾ ಬಾಟಲಿಗೆ ಗುರುತು ಹಾಕಿಕೊಂಡಿರುತ್ತಾರೆ. ಇಲ್ಲಿ ಅವರನ್ನು ಯಾಮಾರಿಸುವುದು ಕಷ್ಟ ಎಂಬುದನ್ನು ಸ್ವತಃ ಅಂಗಡಿಕಾರರೇ ಒಪ್ಪಿಕೊಳ್ಳುತ್ತಾರೆ.

ಇಲಾಖೆಯವರು ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ಒಂದು ವಾರದ ಅವಧಿವರೆಗೆ ಠಿಕಾಣಿ ಹೂಡಿ ಎಲ್ಲ ಅಂಗಡಿಕಾರರ ಕಾಟಾ ಮತ್ತು ತೂಕದ ಕಲ್ಲುಗಳನ್ನು ಪರಿಶೀಲನೆ ಮಾಡುತ್ತಾರೆ. ಅವುಗಳಿಗೆ ಮೊಹರು ಕೂಡ ಹಾಕುತ್ತಾರೆ. ಎಲೆಕ್ಟ್ರಾನಿಕ್ ತೂಕದ ವ್ಯವಸ್ಥೆಯನ್ನೂ ಅವರು ಪರಿಶೀಲನೆ ನಡೆಸುತ್ತಾರೆ.

ಬೀದಿ ಬದಿಯ ಅನೇಕ ವ್ಯಾಪಾರಿಗಳು ತೂಕದ ಮಾಪನಗಳ ಪ್ರಮಾಣಿಕರಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ, ಅವರು ಪರಿಶೀಲನೆಗೆ ಬಂದಾಗ ಅಳೆಯುವ ಮತ್ತು ತೂಕ ಮಾಡುವ ತಕ್ಕಡಿಗಳನ್ನು ವಶಕ್ಕೆ ಪಡೆಯುತ್ತಾರೆ. ಅವುಗಳನ್ನು ಪ್ರಮಾಣೀಕರಿಸಿ ನೀಡುತ್ತಾರೆ. ಕೆಲವೊಮ್ಮೆ ದಂಡ ವಿಧಿಸಿದ ಉದಾಹರಣೆಗಳೂ ಇವೆ.

ಬೆಳೆ ಖರೀದಿಯಲ್ಲಿ ಮೋಸ
ತೆಲಸಂಗ:
ಗ್ರಾಮೀಣ ಪ್ರದೇಶದಲ್ಲಿ ಸಣ್ಣಪುಟ್ಟ ಕಿರಾಣಿ ವ್ಯಾಪಾರಸ್ಥರಲ್ಲಿ ತೂಕದಲ್ಲಿ ವ್ಯತ್ಯಾಸಗಳು ಕಂಡುಬರುವುದು ವಿರಳ. ಆದರೆ, ರೈತರು ಬೆಳೆದ ಪ್ರತಿಯೊಂದು ಬೆಳೆ ಖರೀದಿಸುವಾಗ ತೂಕದಲ್ಲಿ ಮೋಸ ಮಾಡುವುದು ನಡೆಯುತ್ತಲೇ ಇದೆ.

ದ್ರಾಕ್ಷಿ ಬೆಳೆಗಾರರಿಂದ ಖರೀದಿಸುವ ದಲ್ಲಾಳಿಗಳು ಎಲೆಕ್ಟ್ರಾನಿಕ್‌ ತಕ್ಕಡಿ ತರುವುದೇ ಇಲ್ಲ. ಕಬ್ಬು ಹೊತ್ತೊಯ್ದು ಖಾರ್ಖಾನೆಗಳಲ್ಲಿ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ತಡೆಯುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಜಾಣ ಕುರುಡರಾಗಿ ವರ್ತಿಸುತ್ತಾರೆ ಎಂಬ ಆರೋಪವಿದೆ.

‘ಚೀಲದಲ್ಲಿ ಒಂದೆರಡು ಕೆ.ಜಿ. ವ್ಯತ್ಯಾಸ ಮಾಡುತ್ತಾರೆ. ಕಳೆದ ವಾರದಲ್ಲಿ ದಲ್ಲಾಳಿಯೊಬ್ಬ ರೈತರ ಹೊಲದಲ್ಲಿ ತೊಗರಿ ಖರೀದಿ ಮಾಡಿದ್ದ. ಒಂದು ಚೀಲದಲ್ಲಿ 5 ಕೆ.ಜಿ. ಕಡಿಮೆ ಮಾಡಿ ಸಿಕ್ಕಿ ಬಿದ್ದ. ಇದು ಸಾಮಾನ್ಯ ಮೋಸ ಅಲ್ಲ. ಅಷ್ಟೆ ಅಲ್ಲದೆ ರೈತರು ಬೆಳೆದ ಕಾಳು, ತರಕಾರಿ ಇದ್ಯಾವುದರ ಖರೀದಿಯಲ್ಲೂ ನ್ಯಾಯವಾದ ತೂಕ ನಡೆಯುವುದಿಲ್ಲ. ಇದು ಮೋಸವೆಂದು ರೈತರಿಗೂ ಗೊತ್ತು. ದೂರು ಕೊಟ್ಟರೆ ಪರಿಹಾರ ಸಿಗುವ ಬದಲಿಗೆ ದಲ್ಲಾಳಿಯಿಂದ ಅಧಿಕಾರಿಗಳು ಲಂಚ ಪಡೆದು ಮೌನವಾಗುತ್ತಾರೆ. ದಲ್ಲಾಳಿ ಲಂಚದ ಹಣವನ್ನು ನಮ್ಮಿಂದಲೇ ಹೊಡೆಯುತ್ತಾನೆ. ಇದೆಲ್ಲವೂ ಬೇಕಾ ಎಂದು ಅನಿವಾರ್ಯವಾಗಿ ಸುಮ್ಮನಾಗುವುದು ಸಾಮಾನ್ಯವಾಗಿದೆ!

ಪ್ರಕರಣ ದಾಖಲಾಗಿಲ್ಲ
ಸವದತ್ತಿ:
ತಾಲ್ಲೂಕಿನಲ್ಲಿ ಪಿಕೆಪಿಎಸ್ ಸೇರಿ 131 ಪಡಿತರ ವಿತರಣಾ ಕೇಂದ್ರಗಳಿವೆ. ಇಲ್ಲಿ ವಿತರಿಸಲಾದ ಆಹಾರ ಧಾನ್ಯಗಳ ತೂಕಕ್ಕೂ ಮತ್ತು ಹೊರಗಡೆ ತೂಕಕ್ಕೂ ಸರಾಸರಿ 1ರಿಂದ 3ಕೆಜಿ ವ್ಯತ್ಯಾಸ ಕಂಡುಬರುತ್ತದೆ. ಆದಾಗ್ಯೂ ಪ್ರಕರಣ ದಾಖಲಾಗಲಿಲ್ಲ.

ತೂಕ ಮತ್ತು ಅಳತೆ ಇಲಾಖೆ ಕುರಿತು ಜನತೆಗೆ ಮಾಹಿತಿ ಇಲ್ಲ. ಖರೀದಿಸಿದ ವಸ್ತುಗಳ ತೂಕದಲ್ಲಿ ವ್ಯತ್ಯಾಸವಾದರೂ ಸಂಪರ್ಕಿಸುವ ವಿಳಾಸ ತಿಳಿಯದೆ ಸುಮ್ಮನಾಗುತ್ತಾರೆ. ಕಾನೂನು ಮಾಪನಶಾಸ್ತ್ರ ಇಲಾಖೆಯ ಇಲ್ಲಿನ ಕಚೇರಿಗೆ ಬೀಗ ಹಾಕಲಾಗಿದೆ. ಸುತ್ತಲೂ ಮುಳ್ಳು–ಕಳೆಗಿಡಗಳು ಬೆಳೆದಿವೆ!

ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ: ಉಪ್ಪಾರ್
‘ತೂಕ ಮತ್ತು ಅಳತೆಯಲ್ಲಿ ಮೋಸಕ್ಕೆ ಕಡಿವಾಣ ಹಾಕಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ದಿಢೀರ್‌ ದಾಳಿ ನಡೆಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುತ್ತಿದ್ದೇವೆ’ ಎನ್ನುತ್ತಾರೆ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಸ್.ಎಸ್. ಉಪ್ಪಾರ.

‘2021ರ ಮಾರ್ಚ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ ₹ 1.65 ಕೋಟಿ ದಂಡ ( ಸತ್ಯಾಪನಾ ಶುಲ್ಕ) ಸಂಗ್ರಹಿಸಿದ್ದೇವೆ. 2,612 ತ‍‍ಪಾಸಣೆಗಳನ್ನು ನಡೆಸಿದ್ದೇವೆ. 778 ಮೊಕದ್ದಮೆಗಳನ್ನು ದಾಖಲಿಸಿದ್ದೇವೆ. ₹ 12.24 ಲಕ್ಷ ದಂಡ ಸಂಗ್ರಹಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ಗಳ ಗುಣಮಟ್ಟದ ತಪಾಸಣೆ ನಡೆಸಿದ್ದೇವೆ. ತಾಲ್ಲೂಕುಗಳಲ್ಲಿ ಆಯಾ ನಿರೀಕ್ಷಕರು ಅರಿವು ಕಾರ್ಯಕ್ರಮ ಆಯೋಜಿಸುತ್ತಿರುತ್ತಾರೆ’ ಎಂದು ಅವರು ತಿಳಿಸಿದರು.

ಗ್ರಾಹಕರು 0831– 2457282 ಸಂಪರ್ಕಿಸಿ ದೂರು ನೀಡಬಹುದು. ಇ–ಮಾಪನ ಜಾಲತಾಣದ ಮೂಲಕವೂ ದೂರು ಸಲ್ಲಿಸಬಹುದು ಎಂದು ಕೋರದರು.

ಪ್ರತಿಕ್ರಿಯೆಗಳು
ಅನಿವಾರ್ಯವೇ ವರದಾನ

ರೈತನೊಬ್ಬ ನೂರಾರು ಚೀಲ ಕೃಷಿ ಉತ್ಪನ್ನಗಳನ್ನು ಮೊದಲೇ ತೂಕ ಮಾಡಿಸುವುದು ಕಷ್ಟಸಾಧ್ಯ. ಹೀಗಾಗಿ ದಲ್ಲಾಳಿಗಳು ತೂಕದಲ್ಲಿ ಮೋಸ ಮಾಡುವುದು ನಡೆಯುತ್ತಲೇ ಇದೆ. ಪ್ರಶ್ನಿಸಿದರೆ, ಧಾನ್ಯ ಖರೀದಿಸುವುದನ್ನು ವ್ಯಾಪಾರಿಗಳೆಲ್ಲರೂ ಕೂಡಿ ನಿರಾಕರಿಸುತ್ತಾರೆ. ದೂರದಿಂದ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದ ರೈತ ಉತ್ಪನ್ನಗಳನ್ನು ವಾಪಸ್ ಒಯ್ಯಲಾಗುವುದಿಲ್ಲ. ಈ ಅನಿವಾರ್ಯವು ಮೋಸ ಮಾಡುವವರಿಗೆ ವರದಾನವಾಗಿದೆ.
- ಅಶೋಕ ಶಿರಗುಪ್ಪಿ, ರೈತ, ಕಕಮರಿ

ದಾಳಿಯೇ ನಡೆದಿಲ್ಲ
ರೈತರಿಂದ ಧಾನ್ಯ ಖರೀದಿಸುವಾಗ ತೂಕದಲ್ಲಿನ ಮೋಸದ ಬಗ್ಗೆ ಯಾವ ಕ್ರಮವೂ ಆಗುತ್ತಿಲ್ಲ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ತೂಕದಲ್ಲಿ ಮೋಸ ನಡೆಯುತ್ತದೆಲೇ ಇದೆ. ಮಾರಾಟಕ್ಕೆ ಸೂಕ್ತ ಮಾರುಕಟ್ಟೆಯೂ ಇಲ್ಲ. ಸೂಕ್ತ ತೂಕದ ವ್ಯವಸ್ಥೆಯೂ ಇಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದಾಳಿ ನಡೆಸಿಲ್ಲ. ಸರ್ಕಾರವೂ ಪರಿಹಾರ ಕಂಡುಕೊಂಡಿಲ್ಲ.
- ಈಶ್ವರ ಉಂಡೋಡಿ, ರೈತ, ತೆಲಸಂಗ

ಎಲ್ಲ ರಂಗಗಳಲ್ಲಿ ಮೋಸ
ತರಕಾರಿ ಮಾರುವವರಿಂದ ಹಿಡಿದು ದೂಡ್ಡ ದೂಡ್ಡ ಅಂಗಡಿಕಾರರವರೆಗೆ ತೂಕದಲ್ಲಿ ಮೋಸ ಸಾಮಾನ್ಯವಾಗಿದೆ. ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳು ಬಂದ ನಂತರವೂ ಮೋಸ ಮಾಡುವುದು ಸುಲಭ ಎನ್ನುವಂತಾಗಿದೆ. ತಂತ್ರಜ್ಞಾನದ ಬಳಕೆಯಿಂದ ತೂಕ ಮತ್ತು ಅಳೆತೆ ವ್ಯವಹಾರ ಪಾರದರ್ಶಕ ಆಗಬೇಕಾಗತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದರಿಂದ ಗ್ರಾಹಕರು ಮತ್ತು ರೈತರು ಮೋಸ ಹೋಗುತ್ತಲೇ ಇದ್ದಾರೆ.
– ಕಿರಣ ಯಲಿಗಾರ, ನಾಗರಿಕ, ಮುನವಳ್ಳಿ

ಜಾಗೃತಿ ಮೂಡಿಸಬೇಕು
ಒಂದು ಕೆ.ಜಿ.ಯ ಪದಾರ್ಥ ತೆಗೆದುಕೊಂಡರೆ, ಅದರಲ್ಲಿ ಸರಾಸರಿ 5 ಗ್ರಾಂ. ವ್ಯತ್ಯಾಸ ಇರುತ್ತದೆ. ವರ್ತಕರು ತೂಕದ ಯಂತ್ರಗಳಲ್ಲೇ ಹಾಗೆ ಸೆಟ್ ಮಾಡಿರುತ್ತಾರೆ. ಉತ್ಪನ್ನವೊಂದರ ಗುಣಮಟ್ಟದಲ್ಲಿ ಹೆಚ್ಚು–ಕಡಿಮೆ ಆಗಿರುವ ಬಗ್ಗೆ ಕೆಲ ಪ್ರಕರಣಗಳನ್ನು ದಾಖಲಿಸಿದ್ದೇವೆ. ಗ್ರಾಹಕರಲ್ಲಿ ಜಾಗೃತಿ ಹೆಚ್ಚುವವರೆಗೆ ಮೋಸ ಮಾಡುವುದು ನಿಲ್ಲುವುದಿಲ್ಲ.
–ಎನ್.ಆರ್. ಲಾತೂರ್, ವಕೀಲ, ಬೆಳಗಾವಿ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ಜಗದೀಶ ಖೊಬ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT