ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ: ಜನವಸತಿಯತ್ತ ಚಿರತೆ ಸುಳಿದಿದ್ದು ಏಕೆ?

ಬೋನಿಗೆ ಬೀಳಿಸಲು ಅರಣ್ಯ ಇಲಾಖೆ ಯತ್ನ, ಸುಳಿದಾಡಿದ ಜಾಗದಲ್ಲಿ ಬೋನು
Last Updated 30 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸವದತ್ತಿ ತಾಲ್ಲೂಕಿನಲ್ಲಿ ಬುಧವಾರ ಮೂರು ಕಡೆ ಕಾಣಿಸಿಕೊಂಡಿದ್ದ ಚಿರತೆ, ಗುರುವಾರ ಎಲ್ಲಿಯೂ, ಯಾರ ಕಣ್ಣಿಗೂ ಬಿದ್ದಿಲ್ಲ. ಅದರ ಹೆಜ್ಜೆ ಗುರುತುಗಳು ಕಂಡಲ್ಲಿ ಬೋನುಗಳನ್ನು ಇಡಲಾಗಿದೆ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಕಾಣಿಸದ ಚಿರತೆಗಳು ಈಗ ಜನವಸತಿಯತ್ತ ಏಕೆ ಸುಳಿದಾಡುತ್ತಿವೆ ಎಂಬ ಪ್ರಶ್ನೆ ಕಾಡುತ್ತಿದೆ.

ಹೂಲಿಕಟ್ಟಿ, ಶಿಂಧೋಗಿ, ಯಕ್ಕೇರಿ ಗ್ರಾಮಗಳ ಸರಹದ್ದಿನಲ್ಲಿ ಮಂಗಳವಾರ ತಡರಾತ್ರಿ ಕೆಲವರಿಗೆ ಚಿರತೆ ಕಾಣಿಸಿಕೊಂಡಿತ್ತು. ಬುಧವಾರ ಬೆಳಿಗ್ಗೆ ಕೂಡ ಕುರಿ ಕಾಯಲು ಹೋದವರ ಕಣ್ಣಿಗೆ ಬಿದ್ದಿತ್ತು. ಕುದುರೆಯ ಮೇಲೆ ದಾಳಿ ಮಾಡಿದ ಚಿರತೆ ಅದನ್ನು ಗಾಯಗೊಳಿಸಿದೆ. ಕುರಿಯೊಂದನ್ನು ಎಳೆದುಕೊಂಡು ಹೋಗಿದೆ.

‘ಶಿಂಧೋಗಿಯ ಕಬ್ಬಿನ ತೋಟದತ್ತ ಚಿರತೆ ಓಡಿದ್ದನ್ನು ಜನ ಕಂಡಿದ್ದಾರೆ. ಅಲ್ಲಿ ಹೆಜ್ಜೆ ಗುರುತುಗಳೂ ಪತ್ತೆಯಾಗಿವೆ. ಹಾಗಾಗಿ, ಬುಧವಾರ ರಾತ್ರಿಯೇ ಕಬ್ಬಿನ ಗದ್ದೆಯ ಎರಡು ಕಡೆ ಬೋನು ಇಡಲಾಗಿದೆ. ಇನ್ನೊಂದೆಡೆ, ಶಿಂಧೋಗಿ ಕಾಡಿನಲ್ಲಿ ಕುದುರೆ ಬೇಟೆಯಾಡಿದ ಜಾಗದಲ್ಲಿ ಕೂಡ ಇನ್ನೊಂದು ಬೋನು ಇಡಲಾಗಿದೆ. ಬೋನಿನ ಒಳಗಡೆ ನಾಯಿ ಕಟ್ಟಿದ್ದು, ಚಿರತೆ ಸೆರೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಲಾಗಿದೆ. ಆದರೆ, ರಾತ್ರಿಯಿಡೀ ಈ ಭಾಗದಲ್ಲಿ ಎಲ್ಲಿಯೂ ಅದು ಮತ್ತೆ ಸುಳಿದಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ಶಂಕರ ಅಂತರಗಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸವದತ್ತಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಭಾಗದಲ್ಲಿ ಕುರುಚಲು ಕಾಡು ಇದ್ದು, ವನ್ಯಮೃಗಗಳು ಇವೆ. ಸವದತ್ತಿ ವಲಯದಲ್ಲಿ 13 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು ಕತ್ತೆಕಿರುಬ, ತೋಳ, ನರಿ, ಗುಳ್ಳೆನರಿ, ಕಾಡು ಹಂದಿ, ಚಿಪ್ಪು ಹಂದಿಗಳ ಚಲನವಲನವೇ ಹೆಚ್ಚು. ಹೀಗಾಗಿ, ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆಗಾಗ ವನ್ಯಮೃಗಗಳು ಸೆರೆ ಸಿಕ್ಕಿವೆ. ಆದರೆ, ಚಿರತೆ ಎಂದೂ ಕಂಡಿರಲಿಲ್ಲ. ಇದೇ ಮೊದಲಬಾರಿಗೆ ಚಿರತೆ ಇತ್ತ ಓಡಾಡಿದ್ದು ಸಹಜವಾಗಿಯೇ ಅಚ್ಚರಿಗೆ ಕಾರಣವಾಗಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಸವದತ್ತಿ, ರಾಮದುರ್ಗ ಹಾಗೂ ಗೋಕಾಕ ತಾಲ್ಲೂಕು ಸೇರಿ 43 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಮಳೆಗಾಲದಲ್ಲಿ ಕಾಡಿನಲ್ಲಿ ಹಸಿರು ಚಿಗುರುತ್ತದೆ. ಅಲ್ಲಿಗೆ ಹಸು, ಕುರಿ ಮೇಯಿಸಲು ಹೋಗುವವರು ಹೆಚ್ಚು. ಆ ಪ್ರಾಣಿಗಳ ಬೇಟೆಯಾಡಲು ವನ್ಯಮೃಗಗಳು ಬರುತ್ತವೆ. ಈ ಬಾರಿ ಚಿರತೆ ಬಂದಿದ್ದು ವಿಶೇಷ ಎನ್ನುವುದು ಪರಿಸರವಾದಿಗಳ ಅನಿಸಿಕೆ.

‘ಚಿರತೆ ಜನವಸತಿ ಹತ್ತಿರ ಇರುವ ಪ್ರಾಣಿ’

‘ಚಿರತೆ ಮನುಷ್ಯರ ಮೇಲೆ ದಾಳಿ ಮಾಡುವ ಪ್ರಾಣಿಯಲ್ಲ. ನಾಯಿ ಅಥವಾ ಕುರಿ ಅದರ ಆಹಾರ. ಹಾಗಾಗಿ, ಕಾಡಂಚಿನ ಗ್ರಾಮಗಳಲ್ಲಿ ಬೇಟೆಯಾಡಲು ಅದು ಓಡಾಡುತ್ತದೆ. ಹೆಚ್ಚಾಗಿ ಕಾಡಂಚಿನ ಜನಸವಸತಿಗೆ ಹತ್ತಿರದಲ್ಲೇ ಇರುವ ಮೃಗ ಅದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಇರನಟ್ಟಿ ತಿಳಿಸಿದರು.

ಒಂದು ವೇಳೆ ಚಿರತೆ ಕಣ್ಣಿಗೆ ಬಿದ್ದರೂ ಚೀರಾಡಿ ಅದನ್ನು ಹೆದರಿಸದೇ ಇದ್ದರೆ, ತಾನಾಗಿಯೇ ತನ್ನ ದಾರಿಯಲ್ಲಿ ಸಾಗುತ್ತದೆ. ಮನುಷ್ಯರ ಮೇಲಿನ ಭಯದಿಂದ ಅದು ದಾಳಿಗೆ ಮುಂದಾಗುತ್ತದೆ ಎಂದೂ ಅವರು ತಿಳಿಸಿದರು.

ತನ್ನ ಆಹಾರದ ಅವಶ್ಯಕತೆ ಮುಗಿದ ಬಳಿಕ ಅದು ಮರಳಿ ಹೋಗಿರಬಹುದು. ಆದರೂ ಅದರ ಸುಳಿದಾಟದ ಜಾಗಗಳ ಮೇಲೆ ಕಣ್ಣಿಟ್ಟಿದ್ದೇವೆ. ಅರಣ್ಯ ಇಲಾಖೆಯ ಸಿಬ್ಬಂದಿ ರಾತ್ರಿ ಕೂಡ ಗಸ್ತು ಸುತ್ತುತ್ತಿದ್ದಾರೆ. ಜನ ಆತಂಕ ಪಡಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT