ಚದುರಂಗದಲ್ಲಿ ಭರವಸೆಯ ಪ್ರತಿಭೆ

7
35ಕ್ಕೂ ಹೆಚ್ಚು ಬಹುಮಾನ ಪಡೆದ ಯೋಗರಾಜ್‌

ಚದುರಂಗದಲ್ಲಿ ಭರವಸೆಯ ಪ್ರತಿಭೆ

Published:
Updated:
Deccan Herald

ಬೆಳಗಾವಿ: ಇಲ್ಲಿನ ಕ್ಯಾಂಪ್‌ನಲ್ಲಿರುವ ಕೇಂದ್ರೀಯ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿ ಯೋಗರಾಜ್‌ ಮಹಾಲೆ ಚೆಸ್‌ ಆಟದಲ್ಲಿ ಭರವಸೆಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾನೆ. ತಾನು ‘ಬೆಳೆಯುವ ಸಿರಿ’ ಎನ್ನುವುದನ್ನು ಮೊಳಕೆಯಲ್ಲಿಯೇ ಸಾಬೀತುಪಡಿಸಿದ್ದಾನೆ.

ಕೆಲವೇ ವರ್ಷಗಳಲ್ಲಿ 35ಕ್ಕೂ ಹೆಚ್ಚು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾನೆ 12 ವರ್ಷ ವಯಸ್ಸಿನ ಈ ಹುಡುಗ. ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ತೋರಿದ್ದಾನೆ. ವಿವೇಚನೆ ಹಾಗೂ ವಿವೇಕವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಯಸುವ ಚದುರಂಗದ ಅಟದಲ್ಲಿ, ಶ್ರೇಯಾಂಕವನ್ನು ಸುಧಾರಿಸಿಕೊಳ್ಳುತ್ತಿದ್ದಾನೆ.

ಉತ್ತರಕನ್ನಡ ಜಿಲ್ಲೆ ಭಟ್ಕಳದವರಾದ ವಿವೇಕ್ ಹಾಗೂ ಸೀಮಾ ದಂಪತಿಯ ಪುತ್ರನಾದ ಈತ, ಚದುರಂಗವನ್ನೇ ತನ್ನ ಪ್ರಮುಖ ಹವ್ಯಾಸವನ್ನಾಗಿ ಬೆಳೆಸಿಕೊಂಡಿದ್ದಾನೆ. ಪಾಠದ ಕಡೆಗೂ ಗಮನ ಕೊಟ್ಟು, ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ.

ಚಿಕ್ಕವನಿದ್ದಾಗಲೇ ಆತ ತೋರಿದ ಆಸಕ್ತಿಗೆ ಪೋಷಕರು ನೀರೆರೆದು ಪೋಷಿಸುತ್ತಾ ಬಂದಿದ್ದಾರೆ. ಟೂರ್ನಿಗಳು ನಡೆಯುವ ಕಡೆಗಳಿಗೆ ಕರೆದೊಯ್ದು ಭಾಗವಹಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಪ್ರತಿಭೆಗೆ ಸಾಣೆ ಹಿಡಿಯಲು ತರಬೇತಿ ಕೊಡಿಸುತ್ತಿದ್ದಾರೆ.

2015ರಿಂದ

2015ರ ಜೂನ್‌ನಲ್ಲಿ ಹುಬ್ಬಳ್ಳಿಯ ಇಂದ್ರಾಳೀಸ್ ಶಾಲೆಯಲ್ಲಿ ಆಟದ ತರಬೇತಿ ಪಡೆಯುವುದನ್ನು ಆರಂಭಿಸಿದ. ಅದೇ ವರ್ಷದ ಜುಲೈನಲ್ಲಿ ಶಾಲೆ ಆಯೋಜಿಸಿದ್ದ 5ನೇ ರಾಜ್ಯಮಟ್ಟದ ಅಂತರಶಾಲಾ ಚೆಸ್‌ ಸ್ಪರ್ಧೆಯ 1ರಿಂದ 4ನೇ ತರಗತಿ ವಿಭಾಗದಲ್ಲಿ 6 ಸುತ್ತುಗಳಲ್ಲಿ 3 ಅಂಕ ಪಡೆದು 12ನೇ ಸ್ಥಾನ ಪಡೆದಿದ್ದ. ಕೆಲವೇ ದಿನಗಳ ನಂತರದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಗಳಿಸಿದ್ದ.

ನಂತರ ಹುಬ್ಬಳ್ಳಿ ರೋಟರಿ ಕ್ಲಬ್ ಹಾಗೂ ಧಾರವಾಡ ಚೆಸ್‌ ಸಂಸ್ಥೆ ಏರ್ಪಡಿಸಿದ್ದ ಅಖಿಲ ಭಾರತ ಮುಕ್ತ ಫಿಡೆ ರೇಟಿಂಗ್ ರ‍್ಯಾಪಿಡ್ ಚೆಸ್‌ ಟೂರ್ನಿಯ 10 ವರ್ಷ ವಯೋಮಿತಿಯವರ ವಿಭಾಗದಲ್ಲಿ 9 ಸುತ್ತುಗಳಲ್ಲಿ 3.5 ಅಂಕ ಗಳಿಸಿ 2ನೇ ಸ್ಥಾನ, ಆಗಸ್ಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಗೆ 2ನೇ ಸ್ಥಾನ, 2016ರ ನವೆಂಬರ್‌ನಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆ ಬೆಳಗಾವಿಯಲ್ಲಿ ನಡೆಸಿದ ಕ್ಲಸ್ಟರ್‌ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.

ಹುಟ್ಟೂರಿನ ಸನ್ಮಾನ

ಹುಬ್ಬಳ್ಳಿ ಚೆಸ್‌ ಅಕಾಡೆಮಿ ರಾಜ್ಯ ಚೆಸ್‌ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ತೃತೀಯ, ಚಿಕ್ಕೋಡಿ ತಾಲ್ಲೂಕು ಬೆನಾಡಿ ಚೆಸ್ ಸಂಸ್ಥೆ ನಡೆಸಿದ ಮುಕ್ತ ಟೂರ್ನಿಯಲ್ಲಿ 2ನೇ ಸ್ಥಾನ ಹಾಗೂ ಖಾನಾಪುರ ಶಾಂತಿನಿಕೇತನ ಪಬ್ಲಿಕ್‌ ಶಾಲೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದಿದ್ದಾನೆ.

ಹೊನ್ನಾವರದಲ್ಲಿ ರೋಟರಿ ಕ್ಲಬ್ ಈಚೆಗೆ ನಡೆಸಿದ 16 ವರ್ಷ ವಯೋಮಿತಿಯವರ ಮುಕ್ತ ರ‌್ಯಾಪಿಡ್ ಚೆಸ್ ಟೂರ್ನಿಯಲ್ಲಿ 2ನೇ ಬಹುಮಾನ ಗೆದ್ದಿದ್ದಾನೆ. ಪ್ರಸ್ತುತ ಗಿರೀಶ ಬಾಚಿಕರ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ.

‘ಹುಬ್ಬಳ್ಳಿಯಲ್ಲಿ 3ನೇ ತರಗತಿ ಮುಗಿಸಿದ್ದ ಆತನಿಗೆ, ಚೆಸ್‌ ಬೋರ್ಡ್‌ ತಂದುಕೊಟ್ಟಿದ್ದೆ. ಕಾಯಿಗಳ ನಡೆ, ಸ್ಥಾನಮಾನಗಳನ್ನು ತಿಳಿಸಿದಾಗ ಆಸಕ್ತಿ ತೋರಿದ. ನನ್ನೊಂದಿಗೆ ಗಂಭೀರವಾಗಿ ಆಡುತ್ತಿದ್ದುದ್ದರಿಂದ ತರಬೇತಿಗೆ ಸೇರಿದೆ. ಈಗ, ಆತ ಫಿಡೆ ಶ್ರೇಯಾಂಕಿತ (1122) ಆಟಗಾರನಾಗಿದ್ದಾನೆ. ಹಲವು ಕಡೆಗಳಲ್ಲಿ ಬಹುಮಾನ ಪಡೆದಿದ್ದಾನೆ. ಚದುರಂಗವನ್ನು ಗಂಭೀರವಾಗಿ ಪರಿಗಣಿಸಿದ್ದಾನೆ’ ಎನ್ನುತ್ತಾರೆ ತಂದೆ ವಿವೇಕ್.

ಸಂಪರ್ಕ ಮೊ: 96862 59332.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !