ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪ್ರವಾಹಬಾಧಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Last Updated 25 ಜುಲೈ 2021, 13:03 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ನೆರೆಪೀಡಿತವಾದ ಕೆಲವು ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲನಾ ಕಾರ್ಯವನ್ನು ಕೆಲವೇ ನಿಮಿಷಗಳಲ್ಲಿ ತರಾತುರಿಯಲ್ಲಿ ಮುಗಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನೆರೆ ಸಂತ್ರಸ್ತರ ಅಳಲು ಆಲಿಸಲು ಆದ್ಯತೆ ನೀಡಲಿಲ್ಲ ಮತ್ತು ಪರಿಹಾರಕ್ಕಾಗಿ ಆರ್ಥಿಕ ಪ್ಯಾಕೇಜ್‌ ಘೋಷಿಸಲಿಲ್ಲ.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಹಿರಣ್ಯಕೇಶಿ ನದಿ ಪ್ರವಾಹದಿಂದ ಬಾಧಿತವಾಗಿರುವ ಗಲ್ಲಿಗಳ ಜನರ ಅಹವಾಲು ಕೇಳಲಲಿಲ್ಲ. ಮಹಾಲಕ್ಷ್ಮಿ ದೇವಸ್ಥಾನದ ಎದುರು ಉಕ್ಕಿ ಹರಿಯುತ್ತಿರುವ ಹಳ್ಳವನ್ನಷ್ಟೆ ವೀಕ್ಷಿಸಿ ತೆರಳಿದರು.

‘ಮಠ ಗಲ್ಲಿ, ನದಿ ಗಲ್ಲಿ, ಕುಂಬಾರ ಗಲ್ಲಿ, ಹರಗಾಪುರ ಗಲ್ಲಿ, ಹೊಸ ಓಣಿ, ಸುತಾರ ಗಲ್ಲಿ, ಪಿಂಜಾರ ಗಲ್ಲಿಯಲ್ಲಿ ಮನೆಗಳು ಜಲಾವೃತವಾಗಿವೆ. ಮುಖ್ಯಮಂತ್ರಿ ಬಂದು ಅಹವಾಲು ಆಲಿಸುತ್ತಾರೆ; ಪರಿಹಾರ ಕಲ್ಪಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಅವರು ತಣ್ಣೀರು ಎರಚಿದರು. ನಮ್ಮ ಸಮಸ್ಯೆಗಳನ್ನು ಕೇಳಬೇಕಿತ್ತು’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಮನೆ ಕಟ್ಟಿಕೊಡಲು ನಿರ್ಧಾರ:ಬಳಿಕ, ಶಂಕರಲಿಂಗ ಕಾರ್ಯಾಲಯದಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ‘ಪಟ್ಟಣದಲ್ಲಿ ಪ್ರತಿ ವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಮನೆಗಳ ಸ್ಥಳಾಂತರಕ್ಕೆ 50 ಎಕರೆ ಜಾಗ ಲಭ್ಯವಿದೆ. ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ’ ಎಂದು ಭರವಸೆ ನೀಡಿದರು.

ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಬಳಿ ವೇದಗಂಗಾ ನದಿ ಪ್ರವಾಹದಿಂದ ಮುಳುಗಡೆಯಾಗಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ವೀಕ್ಷಿಸಿದರು. ಆ ಗ್ರಾಮ ಮತ್ತು ಕೋಡ್ನಿ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಕೆಲ ಹೊತ್ತಿದ್ದು, ಸಂತ್ರಸ್ತರ ಸಮಸ್ಯೆ ಕೇಳಿದರು. ‘ಪರಿಹಾರ ಕೊಡುವುದು, ಮನೆ ಕಟ್ಟಿ ಕೊಡುವುದೆಲ್ಲವನ್ನೂ ಮಾಡುತ್ತೇವೆ. ನೀವ್ಯಾರೂ ಹೆದರುವ ಅಗತ್ಯವಿಲ್ಲ’ ಎಂದು ಭರವಸೆ ನೀಡಿದರು.

‘200 ಮನೆಗಳವರು ಜಾನುವಾರುಗಳ ಸಮೇತ ಇಲ್ಲಿದ್ದೇವೆ. ನೀವು ಬರುತ್ತಿದ್ದೀರೆಂದು ನಮಗೆ ಆಹಾರ ವ್ಯವವ್ಥೆ ಮಾಡಿದ್ದಾರೆ. ದನ–ಕರುಗಳಿಗೆ ಮೇವು ನೀಡಿದ್ದಾರೆ. 3 ದಿನಗಳಿಂದ ಸರಿಯಾಗಿ ಆಹಾರ ನೀಡಿಲ್ಲ. 2019ರಲ್ಲೂ ಪ್ರವಾಹ ಬಂದಿತ್ತು. ಆಗ ಹಾನಿ ಅನುಭವಿಸಿದವರಿಗೆ ಪರಿಹಾರ ಸಿಕ್ಕಿಲ್ಲ’ ಎಂದು ಸಂತ್ರಸ್ತರು ಮರಾಠಿಯಲ್ಲಿ ಅಳಲು ತೋಡಿಕೊಂಡರು. ‘ಜಾಗ ಸಿಕ್ಕರೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು’ ಎಂದು ಮುಖ್ಯಮಂತ್ರಿ ಆಶ್ವಾಸನೆ ಕೊಟ್ಟರು.

ಸೆಲ್ಫಿಗೆ ಪೋಸು:ಹೊರಬರುವಾಗ ಪಕ್ಷದ ಮಹಿಳಾ ಕಾರ್ಯಕರ್ತೆಯರು ಕೇಳಿದ ಸೆಲ್ಫಿಗೆ ಯಡಿಯೂರಪ್ಪ ಪೋಸು ನೀಡಿದರು.

ಪರಿಹಾರಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಕಾರಿಗೆ ಮುತ್ತಿಗೆ ಹಾಕಲು ಮುಂದಾದ ಕೆಲವರನ್ನು ಪೊಲೀಸರು ತಡೆದರು.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಆರ್‌. ಅಶೋಕ್‌, ಉಮೇಶ ಕತ್ತಿ ಇದ್ದರು.

‘ಮನೆ, ಜಮೀನು, ಮೇವಿನ ಬಣವೆ ಎಲ್ಲವೂ ಮುಳುಗಿವೆ. ಜಾನುವಾರುಗಳಿಗೆ ಮೂರು ದಿನಗಳಿಂದ ಮೇವಿಲ್ಲ. ನಾವು ಭಿಕ್ಷೆ ಬೇಡಿಯಾದರೂ ತಿನ್ನುತ್ತೇವೆ. ಮೂಕ ಪ್ರಾಣಿಗಳು ಏನು ಮಾಡಬೇಕು? ಬೆಲೆ ಬಾಳುವ ಎಮ್ಮೆ, ಆಕಳುಗಳಿಗೆ ಸಮರ್ಪಕ ವ್ಯವಸ್ಥೆ ಮಾಡಬೇಕಲ್ಲವೇ?’ ಎಂದು ಸಂತ್ರಸ್ತರು ಅಧಿಕಾರಿಗಳನ್ನು ನಂತರ ತರಾಟೆಗೆ ತೆಗೆದುಕೊಂಡರು.

‘ಹಣ ಕೋರಿ ಕೇಂದ್ರಕ್ಕೆ ಪತ್ರ’

‘ನೆರೆ ಪರಿಹಾರ ಕಾರ್ಯ ಕೈಗೊಳ್ಳಲು ಹಣಕಾಸಿನ ಸಮಸ್ಯೆ ಇಲ್ಲ. ತಾತ್ಕಾಲಿಕ ರಿಪೇರಿಗೆ ಕ್ರಮ ವಹಿಸಲಾಗುವುದು. ಹಣ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಯಡಿಯೂರಪ್ಪ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿ, ‘ಸದ್ಯಕ್ಕೆ ಮಳೆ ಕಡಿಮೆಯಾಗಿದೆ. ಮಹಾರಾಷ್ಟ್ರದವು ಹಾಗೂ ಜಿಲ್ಲೆಯಲ್ಲಿನ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಇದರಿಂದಾಗಿ ಪ್ರವಾಹ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಳೆ ಕಡಿಮೆಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT