ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿಯಲ್ಲಿ ಸೇತುವೆ ಕಾಮಗಾರಿ

ಐದು ವರ್ಷಗಳಿಂದಲೂ ಪೂರ್ಣಗೊಂಡಿಲ್ಲ
Last Updated 15 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯೆ ಸಂಪರ್ಕ ಕಲ್ಪಿಸಲು ತಾಲ್ಲೂಕಿನ ಚಂದೂರ ಟೇಕ್ ಮತ್ತು ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಟಾಕಳಿ ಗ್ರಾಮಗಳ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಆಮೆಗತಿಯಿಂದ ಸಾಗಿದೆ. ಐದು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

ಚೆಂದೂರ ಟೇಕ್-ಟಾಕಳಿ ಮಾ‌ರ್ಗದ ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ₹ 18.17 ಕೋಟಿ ಅನುದಾನ ನೀಡಿದೆ. 2013ರಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಅನುದಾನ ಮಂಜೂರಾಗಿದೆ. 2015ರಲ್ಲಿ ಕಾಮಗಾರಿ ಆರಂಭವಾಗಿದೆ. ಈವರೆಗೆ ಶೇ 20ರಷ್ಟ್ರು ಕಾಮಗಾರಿಯಷ್ಟೇ ಮುಗಿದಿದೆ! ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷಗಳು ಬೇಕು ಎನ್ನುವುದು ಸ್ಥಳೀಯರು ಹಾಗೂ ರೈತರ ಪ್ರಶ್ನೆಯಾಗಿದೆ.

ರಾಜ್ಯದ ಗಡಿ ಭಾಗದ ಜನರು ನೆರೆಯ ಮಹಾರಾಷ್ಟ್ರದ ಸುಕ್ಷೇತ್ರ ನರಸಿಂಹವಾಡಿ, ಖಿದ್ರಾಪುರ, ಇಚಲಕರಂಜಿ, ಕೊಲ್ಹಾಪುರ, ಮಿರಜ, ಸಾಂಗ್ಲಿ ಮೊದಲಾದ ಕಡೆಗಳಿಗೆ ತೆರಳಲು ಈ ಸೇತುವೆ ಅನುಕೂಲವಾಗಲಿದೆ. ಮಹಾರಾಷ್ಟ್ರದ ಜನರು ಸಹ ರಾಜ್ಯಕ್ಕೆ ಆಗಮಿಸಲು ಉಪಯುಕ್ತವಾಗಲಿದೆ. ಸೇತುವೆ ಮಂಜೂರಾದಾಗ ಎರಡೂ ರಾಜ್ಯದ ಗಡಿ ಭಾಗದ ಜನರು ಸಂತಸಪಟ್ಟಿದ್ದರು.

ಅನುಕೂಲ:

ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯ ಗಡಿ ಭಾಗದಲ್ಲಿ ಹತ್ತಾರು ಸಕ್ಕರೆ ಕಾರ್ಖಾನೆಗಳಿವೆ. ಗಡಿ ಭಾಗದ ರೈತರು ಕಬ್ಬು ಸಾಗಿಸಲು ಅನುಕೂಲವಾಗುವ ಉದ್ದೇಶದಿಂದ ಚಿಕ್ಕೋಡಿ-ಸದಲಗಾ ಕ್ಷೇತ್ರದ ಆಗಿನ ಶಾಸಕ ಪ್ರಕಾಶ ಹುಕ್ಕೇರಿ ಸೇತುವೆ ಮಂಜೂರು ಮಾಡಿಸಿದ್ದರು.

ಸೇತುವೆ ನಿರ್ಮಾಣಕ್ಕೆ ಆರಂಭದಲ್ಲಿ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದರು. ರಸ್ತೆಗೆ ಭೂಮಿ ಕೊಡಬೇಕಾಗುತ್ತದೆ, ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಹಿಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್‌ ಪರಿಹಾರ ಒದಗಿಸಿ ಶೀಘ್ರವಾಗಿ ಸೇತುವೆ ಕಾಮಗಾರಿ ನಡೆಸುವಂತೆ ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದರು.

ಕೊಚ್ಚಿ ಹೋದ ಸಾಮಗ್ರಿಗಳು:

ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಒತ್ತಡ ಹಾಕಿದಾಗ ಗುತ್ತಿಗೆದಾರರು ಸಿಮೆಂಟ್, ಕಬ್ಬಿಣ ಮುಂತಾದ ಸಾಮಗ್ರಿಗಳನ್ನು ತಂದು ನದಿ ಬದಿಯಲ್ಲಿ ಇಟ್ಟಿದ್ದರು. ಆದರೆ, ಮಳೆಗಾಲದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸೇತುವೆ ಸಲಕರಣೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ಚೆಂದೂರ ಟೇಕ-ಠಾಕಳಿ ಸೇತುವೆ 2013ರಲ್ಲಿ ಮಂಜೂರಾಗಿದೆ. ಆದರೆ, ಇದುವರೆಗೂ ಸೇತುವೆ ಕಾಮಗಾರಿ ಮುಕ್ತಾಯವಾಗಿಲ್ಲ. ನದಿಯಲ್ಲಿ ನಾಲ್ಕು ಪಿಲ್ಲರ್ ನಿಲ್ಲಿಸಿ ಐದಾರು ವರ್ಷ ಕಳೆದಿವೆ. ಈಗಲಾದರೂ ಸರ್ಕಾರ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಚಂದೂರಟೇಕ್ ನಿವಾಸಿ ಮನೋಜ್ ಖಿಚಡೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT