ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ತಾಯಿ, ಮಗನಿಗೆ ಸಂಕಷ್ಟ ತಂದಿತ್ತ ಲಾಕ್‌ಡೌನ್‌

ನೆರವಿನ ನಿರೀಕ್ಷೆಯಲ್ಲಿ ಕುಟುಂಬ
ಅಕ್ಷರ ಗಾತ್ರ

ಚಿಕ್ಕೋಡಿ: ‘ಎರಡ್ ತಿಂಗಳಿಂದ ಕಸ ಮುಸುರಿ ಮಾಡೋ ಕೆಲಸಾನೂ ಇಲ್ರೀ, ಲಾಕ್‌ಡೌನ್‌ನಿಂದಾಗಿ ಎರಡ್ ತಿಂಗಳಿಂದ ಪೆನ್ಷನೂ ಬಂದಿಲ್ಲಾ, ಸರ್ಕಾರ ನೀಡಿರೋ ರೇಷನ್ ಕಾಳಾ ಕುದಿಸಿ ಮಗಾ ಮತ್ ನಾ ದಿನಾ ಸಾಗಸಾಕತ್ತೇವಿ, ಮುಂದ್ ನಮ್ ಜೀವನಾ ಹೆಂಗ್ ಅನ್ನೋ ಚಿಂತಿ ಕಾಡಾಕತೇತಿ...’

– ಹೀಗೆ ಹೇಳುವ ಆ ಮಹಿಳೆಯ ಗಂಟಲು ಉಬ್ಬಿ ಬರುತ್ತಿತ್ತು. ಪತಿ ಮತ್ತು ಹಿರಿಮಗನನ್ನು ಕಳೆದುಕೊಂಡು ಕಿರಿ ಮಗನೊಂದಿಗೆ (ಇವರು ಅಂಗವಿಕಲ) ಬದುಕು ನಡೆಸುತ್ತಿರುವ ಪಟ್ಟಣದ ಮಹಿಳೆ ಶಾರದಾ ಕರಾಳೆ ಅವರು ಲಾಕ್‌ಡೌನ್‌ನಿಂದಾಗಿ ಪಡುತ್ತಿರುವ ವ್ಯಥೆಯ ಕಥೆ ಇದು.

15 ವರ್ಷದ ಮಗ ಚೇತನ ಅವರ ಕಾಲುಗಳು ಬಾಲ್ಯಾವಸ್ಥೆಯಲ್ಲಿಯೇ ಚೈತನ್ಯ ಕಳೆದುಕೊಂಡಿವೆ. ಮನೆಯಲ್ಲಿ ತೆವಳುತ್ತಲೇ ಜೀವನ ನಡೆಸುತ್ತಿದ್ದಾನೆ. ಇಲ್ಲಿನ ಮಿನಿ ವಿಧಾನಸೌಧದ ಎದುರಿಗೆ ಗುಬ್ಬಿಗೂಡಿನಂತಿರುವ ಇಕ್ಕಟ್ಟಾದ ಮನೆಯಲ್ಲಿಯೇ ಬದುಕು ಸಾಗಿಸುತ್ತಿರುವ ಶಾರದಾ, ದಿನವೂ ಕಸ ಮುಸುರೆ ಕೆಲಸ ಮಾಡಿ ಮಗನ ಪೋಷಣೆ ಮಾಡುತ್ತಿದ್ದಾರೆ.

‘ಕೊರೊನಾ ಕಂಟಕ ತಡೆಯಲು ಸರ್ಕಾರ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಕಸ–ಮುಸುರೆ ಕೆಲಸಕ್ಕೂ ಹೋಗಿಲ್ಲ. ಇತ್ತ ತನಗೆ ಸರ್ಕಾರ ನೀಡುತ್ತಿದ್ದ ವಿಧವಾ ವೇತನ ಮತ್ತು ಮಗನ ಅಂಗವಿಕಲ ಪಿಂಚಣಿಯೂ ಕಳೆದ ಎರಡು ತಿಂಗಳಿನಿಂದ ಜಮೆ ಆಗಿಲ್ಲ. ಸರ್ಕಾರ ಅಕ್ಕಿ ಮತ್ತು ಗೋಧಿ ನೀಡಿದೆ. ಅದನ್ನೇ ಕುದಿಸಿಕೊಂಡು ತಿನ್ನುತ್ತಾ ದಿನ ಕಳೆಯುತ್ತಿದ್ದೇವೆ. ಇನ್ನು ಎಷ್ಟು ದಿನ ಲಾಕ್‌ಡೌನ್‌ ಮುಂದುವರಿಯುತ್ತದೆಯೋ ಎಂಬ ಆತಂಕ ಎದುರಾಗಿದೆ’ ಎನ್ನುವಾಗ ಶಾರದಾ ಅವರ ಕಣ್ಣುಗಳು ತೇವಗೊಂಡಿದ್ದವು.

ಉಪಹಾರ ಗೃಹದಲ್ಲಿ ಸರ್ವರ್ ಕೆಲಸ ಮಾಡುತ್ತಿದ್ದ ಪತಿ ತೀರಿಕೊಂಡಿದ್ದಾರೆ. ಬಾಲ್ಯಾವಸ್ಥೆಯಲ್ಲಿಯೇ ಕಾಲುಗಳು ಊನಗೊಂಡು ಅಂಗವಿಕಲನಾಗಿದ್ದ ಹಿರಿಮಗನೂ ಎರಡು ವರ್ಷಗಳ ಹಿಂದೆ ಮೃತರಾಗಿದ್ದಾರೆ. ಕಿರಿಮಗ ಚೇತನ ಕೂಡ ಅಂಗವಿಕಲ. ಈತನಿಗೆ ಅಂಗವಿಕಲ ವೇತನ ಹೊರತುಪಡಿಸಿದರೆ ಸರ್ಕಾರದಿಂದ ಯಾವುದೇ ಸವಲತ್ತುಗಳು ಸಿಕ್ಕಿಲ್ಲ. ಹೆಚ್ಚಿನ ಚಿಕಿತ್ಸೆ ನೀಡಿ ಮಗುವನ್ನು ಸಶಕ್ತಗೊಳಿಸುವ ಆರ್ಥಿಕ ಶಕ್ತಿ ಶಾರದಾ ಅವರಿಗೆ ಇಲ್ಲ. ಹೀಗಾಗಿ ಕಷ್ಟದಲ್ಲೇ ಕೈ ತೊಳೆಯುತ್ತಾ ಬದುಕು ನಡೆಸುತ್ತಿರುವ ಅವರು ಸಹೃದಯಿ ದಾನಿಗಳ ನೆರವಿನ ಹಸ್ತಕ್ಕಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT