ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಗುವಿನ ಹೊಟ್ಟೆಯಲ್ಲಿದ್ದ 12 ಮ್ಯಾಗ್ನೆಟಿಕ್ ಗುಂಡಿಗಳು ಹೊರಕ್ಕೆ

Last Updated 12 ಮೇ 2020, 16:06 IST
ಅಕ್ಷರ ಗಾತ್ರ

ಬೆಳಗಾವಿ: ಎರಡು ವರ್ಷ ವಯಸ್ಸಿನ ಮಗು ಆಕಸ್ಮಿಕವಾಗಿ ನುಂಗಿದ್ದ 12 ಸಣ್ಣ ಮ್ಯಾಗ್ನೆಟಿಕ್ ಆಟಿಕೆ ಗುಂಡಿಗಳನ್ನು ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

‘ತೀವ್ರ ಹೊಟ್ಟೆನೋವು ಹಾಗೂ ಕಪ್ಪಾದ ಬಣ್ಣದ ಮಲ ವಿಸರ್ಜನೆ ಮಾಡುತ್ತಿದ್ದ ಗೋವಾದ ಆ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಚಿಕಿತ್ಸೆಗಾಗಿ ಪಾಲಕರು ವಿವಿಧೆಡೆ ಸುತ್ತಾಡಿ ಸುಸ್ತಾಗಿದ್ದರು. ಕೊನೆಗೆ ಗೋವಾ ಜಿಲ್ಲಾಡಳಿತದಿಂದ ಅನುಮತಿ ಪಡೆದು ಬೆಳಗಾವಿಗೆ ಬಂದಿದ್ದರು. ಮಗು ಜೀವನ್ಮರಣದ ನಡುವೆ ಹೋರಾಡುತ್ತಿತ್ತು’ ಎಂದು ವೈದ್ಯರು ತಿಳಿಸಿದ್ದಾರೆ.

‘ಎಕ್ಸರೇ ತೆಗೆದು ನೋಡಿದಾಗ ಹೊಟ್ಟೆಯಲ್ಲಿ ಯಾವುದೋ ವಸ್ತುಗಳು ಗೋಚರಿಸಿದವು. ಚಿಕ್ಕಮಕ್ಕಳ ತಜ್ಞಶಸ್ತ್ರಚಿಕಿತ್ಸಕ ಡಾ.ಸಂತೋಷ ಕುರಬೆಟ್ ಅವರು ಎರಡೂವರೆ ಗಂಟೆವರೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗು ನುಂಗಿದ್ದ 12 ಆಯಸ್ಕಾಂತೀಯ ಬಟನ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಶಸ್ತ್ರಚಿಕಿತ್ಸೆ ನಂತರ 5ನೇ ದಿನಕ್ಕೆ ಹೊರಗಿನಿಂದ ಆಹಾರ ನೀಡಲು ಪ್ರಾರಂಭಿಸಲಾಗಿತ್ತು. ಕೇವಲ 7 ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು. ಈ ಮೊದಲು ದೇಶದಲ್ಲಿ 4–6 ಆಯಸ್ಕಾಂತದ ಆಟದ ಬಟನ್‌ಗಳನ್ನು ನುಂಗಿದ ವರದಿಯಾಗಿತ್ತು. ಆದರೆ, 12 ಬಟನ್‌ಗಳನ್ನು ನುಂಗಿದ ಪ್ರಕರಣ ಇದೇ ಮೊದಲು. ಆ ಮಗು ಇಂಗ್ಲಿಷ್‌ ಅಕ್ಷರ ಮಾಲೆಯ 12 ಆಯಸ್ಕಾಂತಗಳನ್ನು ನುಂಗಿದ್ದ’ ಎಂದು ತಿಳಿಸಿದ್ದಾರೆ.

‘ಮಕ್ಕಳು ಆಡುವಾಗ ಪಾಲಕರು ನಿರ್ಲಕ್ಷ ವಹಿಸದೆ ಅವರತ್ತ ಗಮನಹರಿಸಬೇಕು. ಒಬ್ಬೊಬ್ಬರನ್ನು ಬಿಡದೆ ಅವರೊಂದಿಗೆ ಇರಬೇಕು’ ಎಂದು ಡಾ.ಸಂತೋಷ್ ಸಲಹೆ ನೀಡಿದ್ದಾರೆ.

ವೈದ್ಯರು ಮತ್ತು ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ. ಜಾಲಿ, ಜೆಎನ್ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಮಹಾಂತಶೆಟ್ಟಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT