ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಚಿಣ್ಣರ ಕಲರವ ಆರಂಭ- ಕೋವಿಡ್ ಮಾರ್ಗಸೂಚಿ ಪಾಲನೆಗೆ ಕ್ರಮ

ಸಂಭ್ರಮದ ಸ್ವಾಗತ
Last Updated 25 ಅಕ್ಟೋಬರ್ 2021, 12:55 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಭೌತಿಕ ತರಗತಿಗಳಿಗೆ ಅನುಮತಿ ನೀಡಲಾಗಿದ್ದು, ಅಲ್ಲಿ ಸೋಮವಾರದಿಂದ ಚಿಣ್ಣರ ಕಲರವ ಆರಂಭವಾಗಿದೆ.

ಜಿಲ್ಲೆಯ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 678 ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 956 ಸೇರಿ 1,634 ಶಾಲೆಗಳಲ್ಲಿ1–5ರಿಂದತರಗತಿಗಳು ಪುನರಾರಂಭಗೊಂಡವು. ಮಕ್ಕಳು ಸಂಭ್ರಮದಿಂದ ಶಾಲೆಗೆ ಬಂದರೆ, ಶಿಕ್ಷಕರು ಮತ್ತು ಸಿಬ್ಬಂದಿ ಸಡಗರದಿಂದ ಬರಮಾಡಿಕೊಂಡರು.

ಶೇ 50ರಷ್ಟು ವಿದ್ಯಾರ್ಥಿಗಳು ಹಾಜರಾಗಲು ಸರ್ಕಾರ ಅವಕಾಶ ನೀಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೋವಿಡ್ ಮಾರ್ಗಸೂಚಿ ಪಾಲಿಸಿ ತರಗತಿಗಳನ್ನು ನಡೆಸಲು ಕ್ರಮ ವಹಿಸಲಾಗಿದೆ ಎಂದುಸಾರ್ವಜನಿಕಶಿಕ್ಷಣಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕೆಲವು ಶಾಲೆಗಳಲ್ಲಿ ಪುಷ್ಪದಳಗಳ ವೃಷ್ಟಿ ಮೂಲಕ ಬರಮಾಡಿಕೊಳ್ಳಲಾಯಿತು. ಕೆಲವೆಡೆ ಗುಲಾಬಿ ಹೂ, ಮಾಸ್ಕ್‌, ಸ್ಯಾನಿಟೈಸರ್ ನೀಡಿ ಬರ ಮಾಡಿಕೊಳ್ಳಲಾಯಿತು. ಬಹುತೇಕ ಗ್ರಾಮಗಳಲ್ಲಿ ತಳಿರು–ತೋರಣಗಳಿಂದ ಶಾಲಾವರಣವನ್ನು ಸಿಂಗರಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ರಂಗೋಲಿ ಬಿಡಿಸಿ ಮಕ್ಕಳಿಗೆ ಸ್ವಾಗತ ನೀಡಲಾಯಿತು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 1ನೇ ತರಗತಿಗೆ 39,858 ವಿದ್ಯಾರ್ಥಿಗಳ ಪೈಕಿ 22,436 ವಿದ್ಯಾರ್ಥಿಗಳು ಅಂದರೆ ಶೇ 56.2ರಷ್ಟು, 2ನೇ ತರಗತಿಗೆ 39,072ರ ಪೈಕಿ 22,496 (ಶೇ. 57.05), 3ನೇ ತರಗತಿಗೆ 40,050 ವಿದ್ಯಾರ್ಥಿಗಳ ಪೈಕಿ 23,493 (ಶೇ 58.06), 4ನೇ ತರಗತಿಗೆ 42,079 ಪೈಕಿ 25,968 (ಶೇ 61.07) ಮತ್ತು 5ನೇ ತರಗತಿಗೆ 40,655 ವಿದ್ಯಾರ್ಥಿಗಳ ಪೈಕಿ 24,834 ವಿದ್ಯಾರ್ಥಿಗಳು (ಶೇ 58.06) ಹಾಜರಾದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 956 ಶಾಲೆಗಳಿವೆ. ಈ ಪೈಕಿ 757 ಸರ್ಕಾರಿ, 14 ಅನುದಾನಿತ ಮತ್ತು 195 ಅನುದಾನ ರಹಿತ ಶಾಲೆಗಳಾಗಿವೆ. ಅಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.

‘ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಸುರಕ್ಷತೆಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ’ ಎಂದು ಡಿಡಿಪಿಐಗಳಾದ ಡಾ.ಆನಂದ ಪುಂಡಲೀಕ ಹಾಗೂ ಗಜಾನನ ಮನ್ನಿಕೇರಿ ತಿಳಿಸಿದರು.

‘ಶಾಲೆಗೆ ಹೋಗಿ ಬಂದಿದ್ದಕ್ಕೆ ನನಗೆ ಬಹಳ ಖುಷಿಯಾಯ್ತು. ಸ್ನೇಹಿತರನ್ನು ನೋಡಿ–ಮಾತನಾಡಿಸಿ ಸಂತಸವಾಯಿತು. ಶಿಕ್ಷಕರು ಭೇಟಿಯಾದರು. ತರಗತಿ ನಡೆಸಿದರು. ಆನ್‌ಲೈನ್‌ ತರಗತಿಯಿಂದ ಬಹಳ ತೊಂದರೆಯಾಗಿತ್ತು. ಶಿಕ್ಷಕರನ್ನು ನೇರವಾಗಿ ನೋಡಿ ಖುಷಿಯಾಯಿತು. ಹೊಲಸು ಕೊರೊನಾದಿಂದ ಶಾಲೆಯಿಂದ ದೂರ ಉಳಿದಿದ್ದೆವು. ತರಗತಿಯಲ್ಲಿ ಅಂತರ ಕಾಯ್ದುಕೊಂಡು ಕುಳಿತಿದ್ದೆ. ಇದಕ್ಕೆ ಶಿಕ್ಷಕರು ಶ್ಲಾಘಿಸಿದರು’ ಎಂದು ನಗರದ ಸಂತ ಜೋಸೆಫ್ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಅದಿತಿ ಕಲಭಾವಿ ಪ್ರತಿಕ್ರಿಯಿಸಿದರು.

ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಮಕ್ಕಳಿಗೆ ಸ್ಯಾನಿಟೈಸರ್, ಗುಲಾಬಿ, ಬಾಳೆಹಣ್ಣು ನೀಡಿ ಶುಭ ಹಾರೈಸಿದರು.

ಪುಷ್ಪದಳಗಳ ಮಳೆ

ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲೆಯಲ್ಲಿ ಮಕ್ಕಳಿಗೆ ಪುಷ್ಪದಳವೃಷ್ಟಿ ಮಾಡಲಾಯಿತು. ಚಾಕೊಲೇಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್‌ ನೀಡಿ ಬರಮಾಡಿಕೊಳ್ಳಲಾಯಿತು.

ಗೇಟ್‌ನಲ್ಲಿ ಬಲೂನುಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಸಂಭ್ರಮದಿಂದ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳದವರು ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮಂಡಳದ ಅಧ್ಯಕ್ಷ ಧನಂಜಯ ಜಾಧವ, ‘ಕೋವಿಡ್ ಕಾರಣದಿಂದ ಮಕ್ಕಳು ಶಾಲೆಯಿಂದ ದೂರವಿದ್ದರು. ಅವರಲ್ಲಿ ಉತ್ಸಾಹ ಮೂಡಿಸಲು ಸಡಗರದಿಂದ ಸ್ವಾಗತಿಸಲಾಯಿತು. ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾಗವಹಿಸಿದ್ದೆವು’ ಎಂದರು.

ಪ್ರಾಥಮಿಕ ಮರಾಠಿ ಶಾಲೆಯ ಮುಖ್ಯಶಿಕ್ಷಕಿ ಬಿ.ಎನ್. ಬಾಳೇಕುಂದ್ರಿ, ಕನ್ನಡ ಶಾಲೆಯ ಮುಖ್ಯಶಿಕ್ಷಕ ವಿ.ಜಿ. ಕರೇರುದ್ರನ್ನವರ, ಮುಖಂಡರಾದ ಮನೋಹರ ಕಡೋಲಕರ, ರಾಮಚಂದ್ರ ಮನ್ನೋಳಕರ, ಪಂಕಜ ಘಾಡಿ, ಭಾಗ್ಯಶ್ರೀ ಕೋಕಿತಕರ, ಶ್ವೇತಾ ಜಗದಾಳೆ, ನಾರಾಯಣ ಪಾಟೀಲ, ರಾಜು ಪಾಟೀಲ, ಸುರೇಶ ಘೋರ್ಪಡೆ, ಗುರು ಹಲಗತ್ತಿ, ಲಕ್ಷ್ಮಣ ಪಾಟೀಲ, ಪರಶರಾಮ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT