ಬುಧವಾರ, ಆಗಸ್ಟ್ 4, 2021
21 °C
ಕೋವಿಡ್ ನಿಯಂತ್ರಣ: ಅಧಿಕಾರಿಗಳ ಸಭೆ

ನಗರವಾಸಿಗಳು ಇನ್ನೂ ಜಾಗೃತರಾಗಿಲ್ಲ; ಸಚಿವ ರಮೇಶ ಜಾರಕಿಹೊಳಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್‌–19 ತೀವ್ರವಾಗಿ ಹರಡುತ್ತಿದ್ದು, ಮುಂದಿನ ಎರಡು ತಿಂಗಳು ಗರಿಷ್ಠ ಮಟ್ಟ ತಲುಪಲಿದೆ. ಗ್ರಾಮೀಣ ಪ್ರದೇಶಗಳ ಜನರು ಜಾಗೃತರಾದಷ್ಟು ನಗರ ಪ್ರದೇಶದವರು ಜಾಗೃತರಾಗಿಲ್ಲ. ಇವರನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಹೇಳಿದರು. 

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ ಹಾಗೂ ಪ್ರವಾಹ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಳ್ಳಿ ಜನರು ಎಲ್ಲಿಯೂ ತಿರುಗಾಡದೇ ಅಲ್ಲಲ್ಲಿಯೇ ವಾಸವಾಗಿದ್ದಾರೆ. ಆದರೆ, ಬೆಂಗಳೂರು, ಮುಂಬೈ ಜನರು ಈಗ ವಾಪಸ್‌ ಬರುತ್ತಿದ್ದಾರೆ. ಇದರಿಂದಾಗಿ ಸೋಂಕು ಇನ್ನಷ್ಟು ಹರಡುತ್ತಿದೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ವೆಂಟಿಲೇಟರ್, ಹಾಸಿಗೆಗಳು ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ನೆಗಡಿ, ಜ್ವರದ ಔಷಧ ತೆಗೆದುಕೊಳ್ಳುತ್ತಿರುವವರ ಬಗ್ಗೆ ಮಾಹಿತಿ ಕಲೆಹಾಕಬೇಕು. ಅಂತಹವರನ್ನು ಗುರುತಿಸಿ ಪರೀಕ್ಷೆ ನಡೆಸಬೇಕು. ಹೆಚ್ಚೆಚ್ಚು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು, ಹೋಮ್ ಕ್ವಾರಂಟೈನ್‌ನಲ್ಲಿ ಇರುವವರ ಬಗ್ಗೆ ನಿರಂತರ ನಿಗಾ ವಹಿಸಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಪರೀಕ್ಷೆಯ ವರದಿ ಬರುವ ಮೊದಲೇ ಕೆಲವು ವ್ಯಕ್ತಿಗಳು ಕ್ವಾರಂಟೈನ್‌ನಿಂದ ಹೊರಗೆ ಬಂದು ಊರೆಲ್ಲ ಸುತ್ತಿದ್ದಾರೆ. ಇದು ಹೇಗೆ ಸಾಧ್ಯ? ವೈದ್ಯಾಧಿಕಾರಿಗಳು ಹೇಗೆ ಅವರನ್ನು ಹೊರಗೆ ಬಿಟ್ಟರು?’ ಎಂದು ತರಾಟೆಗೆ ತೆಗೆದುಕೊಂಡರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ, ‘ಭಾನುವಾರ ಲಾಕ್‌ಡೌನ್ ಯಶಸ್ವಿಯಾಗಿದ್ದು, ಜನರು ಸ್ವಯಂಪ್ರೇರಣೆಯಿಂದ ಬೆಂಬಲ ನೀಡಿದ್ದಾರೆ. ಜನಪ್ರತಿನಿಧಿಗಳು ಕೂಡ ಸ್ವಯಂಪ್ರೇರಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ತಡೆಗಟ್ಟಲು ಸಹಕರಿಸಬೇಕಿದೆ’ ಎಂದು ನಿರ್ದೇಶನ ನೀಡಿದರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ‘ಅಂತರರಾಜ್ಯ ಗಡಿಯನ್ನು ಜನರು ದಾಟದಂತೆ ಮೊದಲ 3 ತಿಂಗಳು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಿದರು. ಆದರೆ, ಈಗ 10–15 ದಿನಗಳಿಂದ ಬಿಟ್ಟು ಬಿಟ್ಟಿದ್ದಾರೆ. ಸಾಕಷ್ಟು ಜನರು ಮುಖ್ಯ ರಸ್ತೆಯನ್ನು ಬಿಟ್ಟು, ಒಳ ರಸ್ತೆಯ ಮೂಲಕ ಓಡಾಡುತ್ತಿದ್ದಾರೆ. ಇದನ್ನು ತಡೆಯಬೇಕಾಗಿದೆ’ ಎಂದು ಹೇಳಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ‘ಮದುವೆ ಮತ್ತಿತರ ಸಮಾರಂಭಗಳಲ್ಲಿ ಅತೀ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಆದ್ದರಿಂದ ಹೋಮ್ ಕ್ವಾರಂಟೈನ್ ಇರುವವರ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ. ಹೋಮ್ ಕ್ವಾರಂಟೈನ್ ಬದಲು ಅಲ್ಲಿ ಸ್ಥಳೀಯವಾಗಿ ಲಭ್ಯವಿರುವ ಹಾಸ್ಟೆಲ್ ಅಥವಾ ಶಾಲಾ ಕಟ್ಟಡಗಳಲ್ಲಿ ಇರಿಸಬೇಕು' ಎಂದು ಮನವಿ ಮಾಡಿಕೊಂಡರು.

316 ಜನರು ಗುಣಮುಖ:

‘ಜಿಲ್ಲೆಯಲ್ಲಿ 396 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 316 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 74 ಸಕ್ರಿಯ ಪ್ರಕರಣಗಳಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ‘ಹೋಮ್ ಕ್ವಾರಂಟೈನ್ ಇರುವವರ ಮೇಲೆ ನಿಗಾ ವಹಿಸಲು ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ತಂಡಗಳನ್ನು ನಿಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿದಿನ ಒಂದು ಸಾವಿರ ಮಾದರಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಗರ್ಭಿಣಿಯಿಂದ ಬರಬಹುದು:

‘ಸೋಂಕು ಪೀಡಿತ ಗರ್ಭಿಣಿಯಿಂದ ಜನಿಸುವ ಮಗುವಿಗೆ ಸೋಂಕು ಬರುವ ಸಾಧ್ಯತೆ ಇರುತ್ತದೆ. ಆದರೆ, ಅಂತಹ ಯಾವ ಪ್ರಕರಣಗಳೂ ಜಿಲ್ಲೆಯಲ್ಲಿ ವರದಿಯಾಗಿಲ್ಲ. ಸೋಂಕು ಕಾಣಿಸಿಕೊಂಡಿದ್ದ ಏಳು ಜನ ಗರ್ಭಿಣಿಯರ ಪೈಕಿ ಒಬ್ಬರಿಗೆ ಹೆರಿಗೆಯಾಗಿದೆ. ಅವರ ಮಗುವಿನಲ್ಲಿ ಸೋಂಕು ಪತ್ತೆಯಾಗಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ವಿ. ಮುನ್ಯಾಳ ಹೇಳಿದರು.

‘ಅಂತರ್ ರಾಜ್ಯ ಗಡಿಯಲ್ಲಿ ವಲಸೆ ಕಾರ್ಮಿಕರು ಮತ್ತು ಪ್ರಯಾಣಿಕರ ಮೇಲೆ ನಿಗಾ ವಹಿಸಲು ಗಡಿಭಾಗದ 40 ಕ್ಕೂ ಅಧಿಕ ಗ್ರಾಮಗಳಲ್ಲಿ ಪೊಲಿಸ್ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಭೆಗೆ ವಿವರಿಸಿದರು.

ಮಳೆ-ಬೆಳೆ ಸ್ಥಿತಿಗತಿ ಪರಿಶೀಲನೆ:

‘ಮಳೆಗಾಲ ಆರಂಭಗೊಂಡಿರುವುದರಿಂದ ರೈತರಿ ಬಿತ್ತನೆ ಬೀಜ, ಗೊಬ್ಬರಗಳ ಪೂರೈಕೆಗೆ ತೊಂದರೆಯಾಗಬಾರದು. ಇದಲ್ಲದೇ ರೈತರಿಗೆ ಸಿಗಬೇಕಿರುವ ಪರಿಹಾರ ಮತ್ತು ಬೆಳೆವಿಮೆ ಸಮರ್ಪಕವಾಗಿ ಒದಗಿಸಬೇಕು’ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಮರು ಸಮೀಕ್ಷೆ ಮಾಡುವಂತೆ ಪದೆ ಪದೇ ಮನವಿ ಮಾಡಿಕೊಂಡರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡ್ರ ಹಾಗೂ ದುರ್ಯೋಧನ ಐಹೊಳೆ ಅಸಮಾಧಾನ ವ್ಯಕ್ತಪಡಿಸಿದರು.

ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ನಗರ ಪೊಲಿಸ್ ಆಯುಕ್ತರಾದ ತ್ಯಾಗರಾಜನ್,  ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಮತ್ತಿತರರು ಉಪಸ್ಥಿತರಿದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು