ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛತಾ ಸೈನಿಕರ’ ಸುಂದರ ದಿನ

ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪೌರ ಕಾರ್ಮಿಕರ ದಿನ
Last Updated 24 ಸೆಪ್ಟೆಂಬರ್ 2022, 6:07 IST
ಅಕ್ಷರ ಗಾತ್ರ

ಬೆಳಗಾವಿ: ಪ್ರತಿ ದಿನ ನಸುಕಿನಲ್ಲಿಯೇ ಎದ್ದು ಪೊರಕೆ, ಸಲಾಕೆ, ಬುಟ್ಟಿಗಳನ್ನು ಹಿಡಿದು ನಗರದ ಸ್ವಚ್ಛತೆಗೆ ಸನ್ನದ್ಧರಾಗುತ್ತಿದ್ದ ಜನರಿಗೆ ಶುಕ್ರವಾರ ವಿಶಿಷ್ಟವಾದ ದಿನ. ಇಡೀ ದಿನವನ್ನು ತ್ಯಾಜ್ಯದಲ್ಲಿ ಕಳೆಯುವ ಆ ಜೀವಗಳು ಆಟವಾಡಿ, ತಮಾಷೆ ಮಾಡಿ ಸಂಭ್ರಮಿಸಿದರು. ಸಮವಸ್ತ್ರದಲ್ಲಿ ಬಂದು ಸ್ವಚ್ಛತಾ ಯೋಧರಂತೆ ಕಂಗೊಳಿಸಿದರು.

ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಪೊಲೀಸ್ ಮೈದಾನದಲ್ಲಿ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದವರು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಇನ್ನಿಲ್ಲದಂತೆ ಸಂಭ್ರಮಿಸಿದರು.

ನಂತರ ಓಟದ ಸ್ಪರ್ಧೆ, ಕೊಕ್ಕೊ, ಕಬಡ್ಡಿ, ಥ್ರೋ ಬಾಲ್, ಸಂಗೀತ ಕುರ್ಚಿ, ಚೆಸ್‌, ರಿಂಗ್‌ ಎಸೆತ ಹೀಗೆ ವಿವಿಧ ಆಟಗಳಲ್ಲಿ ಕಾರ್ಮಿಕರು ಮೈ ಮರೆತರು. ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ಕ್ರೀಡೆಗಳು ನಡೆದವು.

ಪ್ರತಿ ದಿನ ಕಸ ಎತ್ತಲು, ತ್ಯಾಜ್ಯ ನಿರ್ವಹಣೆ ಮಾಡಲು ಹೋಗುತ್ತಿದ್ದ ತಮ್ಮ ಪಾಲಕರನ್ನು ಕಂಡು ಮಕ್ಕಳು ಹಾಗೂ ಸ್ನೇಹ ಬಳಗದವರು ಚಪ್ಪಾಳೆ ತಟ್ಟಿ ಹುರುದುಂಬಿಸಿದರು.

ಇದಕ್ಕೂ ಮುನ್ನ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಎಲ್ಲರ ಹಸ್ತಲಾಘವ ಮಾಡಿ ಶುಭ ಕೋರಿದರು. ‘ಸ್ಮಾರ್ಟ್‌ಸಿಟಿ ಆಗಿರುವ ಬೆಳಗಾವಿ ನಗರವನ್ನು ಸ್ವಚ್ಛ ಹಾಗೂ ಸುಂದರ ಮಾಡುವಲ್ಲಿ ಪೌರಕಾರ್ಮಿಕ ಪಾತ್ರವೇ ಮುಖ್ಯವಾದುದು. ನಿಮ್ಮೆಲ್ಲರ ಅವಿತರ ಶ್ರೇವೆಗೆ ನಗರವಾಸಿಗಳು ಋಣಿಯಾಗಿದ್ದೇವೆ’ ಎಂದರು.

‘ದೇಶದ ಪೌರ ಕಾರ್ಮಿಕ ಸಿಬ್ಬಂದಿಗಾಗಿ ಇದು ವಿಶೇಷ ದಿನ.
ಅವರ ಸೇವೆ ಸ್ಮರಿಸುವುದು
ಪ್ರತಿಯೊಬ್ಬರ ಕರ್ತವ್ಯ. ಪಾಲಿಕೆಯಿಂದ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಎಲ್ಲ ಕಷ್ಟ– ಸುಖಗಳಲ್ಲೂ ನಾವು ನಿಮ್ಮೊಂದಿಗೆ ಇದ್ದೇವೆ’ ಎಂದರು.

ಗಮನ ಸೆಳೆದ ಕ್ರಿಕೆಟ್‌: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಟೆನಿಸ್‌ಬಾಲ್‌ ಕ್ರಿಕೆಟ್ ಟೂರ್ನಿ ಗಮನ ಸೆಳೆಯಿತು. ಪ್ರೆಸ್‌ ಟೀಂ, ಪೊಲೀಸ್ ಟೀಂ, ಪಾಲಿಕೆ ಸಿಬ್ಬಂದಿ ಟೀಂ... ಹೀಗೆ ಮೂರು ತಂಡಗಳ ನಡುವೆ ಸ್ನೇಹ ಪೂರ್ವಕ ಮ್ಯಾಚ್ ನಡೆಯಿತು. ಪಾಲಕೆ ಆಯುಕ್ತ ಡಾ.ರುದ್ರೇಶ್ ಘಾಳಿ ಕೂಡ ಉತ್ತಮ ಬ್ಯಾಟಿಂಗ್‌ ಮಾಡಿ ಗಮನ ಸೆಳೆದರು.

ಉತ್ತಮ ಸೇವೆ ಸಲ್ಲಿಸಿದ ಹಲವು ಪೌರಕಾರ್ಮಿಕರನ್ನು ನಾಗರಿಕರ ಪರವಾಗಿ ಪಾಲಿಕೆ ಸದಸ್ಯರು ಸನ್ಮಾನಿಸಿದರು.

ಪುರಸಭೆಯಿಂದ ಸನ್ಮಾನ

ಮುಗಳಖೋಡ: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮುಗಳಖೋಡ ಪುರಸಭೆಯಲ್ಲಿ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಅವರು ಕಾರ್ಮಿಕರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಗೌರವ ಸಲ್ಲಿಸಿದರು.

ಪ್ರಥಮ ದರ್ಜೆ ಸಹಾಯಕರಾದ ಶಿವಪುತ್ರ ಮೂಡಲಗಿ, ರಾಜು ರೋಡ್ಕರ್, ದ್ವಿತೀಯ ದರ್ಜೆ ಸಹಾಯಕ ಮಹೇಶ ಚೌಗಲಾ, ಲೆಕ್ಕ ಪರಿಶೋಧಕ ಅನಿಲ್‌ ದಳವಾಯಿ, ಕೆಂಚಪ್ಪ ಹಳಿಂಗಳಿ, ಲಕ್ಕಪ್ಪ ಪೂಜಾರಿ, ಪೌರಕಾರ್ಮಿಕರಾದ ಮಾರುತಿ ಕೆಳಗಡೆ, ಅನಿಲ್‌ ನಡುವಿನಕೇರಿ, ಲಲಿತಾ ಕುಂಬಳೆ, ಶೇಖರ ನಡುವಿನಕೇರಿ, ರಾಜಕುಮಾರ ಸಂದ್ರಿಮನಿ, ಮಹಾಂತೇಶ ಕುಂಬಳೆ, ಭಗವಂತ ಕಾರಕೂನ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT