ಸರ್ಕಾರಿ ಸೇವೆ ಪಡೆಯಲು ನಾಗರಿಕರ ಪರದಾಟ

7
ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಅವ್ಯವಸ್ಥೆ

ಸರ್ಕಾರಿ ಸೇವೆ ಪಡೆಯಲು ನಾಗರಿಕರ ಪರದಾಟ

Published:
Updated:
Deccan Herald

ಚಿಕ್ಕೋಡಿ: ತಾಂತ್ರಿಕ ದೋಷ, ಕಾರ್ಟೈಜ್‌, ಪೇಪರ್‌ ಹಾಗೂ ಸರ್ವರ್‌ ಸಮಸ್ಯೆಯಿಂದಾಗಿ ತಾಲ್ಲೂಕಿನ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಜನರಿಗೆ ಸಕಾಲದಲ್ಲಿ ಸೇವೆ ದೊರೆಯುತ್ತಿಲ್ಲ.

ಸಾಮಾಜಿಕ ಭದ್ರತಾ ಯೋಜನೆಗಳಡಿ ವಿವಿಧ ಸೌಕರ್ಯ ಪಡೆಯಲು ಅನುಕೂಲವಾಗುವಂತೆ ತಾಲ್ಲೂಕಿನ ಚಿಕ್ಕೋಡಿ, ಕೇರೂರ, ಅಂಕಲಿ, ಮಾಂಜರಿ, ಸದಲಗಾ, ಬೋರಗಾಂವ, ನಿಪ್ಪಾಣಿ, ಸೌಂದಲಗಾ ಮತ್ತು ನಾಗರಮುನ್ನೋಳಿ ಗ್ರಾಮಗಳಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಇಲ್ಲಿ ಸರ್ಕಾರದ ಸವಲತ್ತು ಪಡೆಯಲು ಸಾರ್ವಜನಿಕರು ಪ್ರಯಾಸ ಪಡಬೇಕಾಗಿದೆ.

‘ಜನಸ್ನೇಹಿ ಕೇಂದ್ರಗಳಲ್ಲಿ ಪ್ರತಿ ದಿನ 100 ರಿಂದ 150 ಜನರು ಸರ್ಕಾರಿ ಸೇವೆ ಪಡೆಯುತ್ತಾರೆ. ಪ್ರತಿ ತಿಂಗಳು 3 ರಿಂದ 4 ಕಾರ್ಟೈಜ್‌ಗಳು ಖಾಲಿಯಾಗುತ್ತವೆ. ಆಗಾಗ ಪ್ರಿಂಟರ್‌ನಲ್ಲಿ ತಾಂತ್ರಿಕ ದೋಷ ಕಂಡು ಬರುತ್ತದೆ. ಪ್ರಿಂಟ್‌ ತೆಗೆಯಲು ಬಳಸುವ ಕಾಗದಗಳು ಮುಗಿದು ಹೋಗುತ್ತವೆ. ಆದರೆ, ಸರ್ಕಾರದಿಂದ ಸಕಾಲದಲ್ಲಿ ಕಾರ್ಟೈಜ್‌, ಕಾಗದ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಜನರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಕೇಂದ್ರದ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಸಾರ್ವಜನಿಕರು ಪಹಣಿ, ಜಾತಿ ಮತ್ತು ಆದಾಯ ಪತ್ರ, ಸಾಮಾಜಿಕ ಭದ್ರತಾ ಯೋಜನೆಯಡಿ ದೊರಕುವ ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಇಲ್ಲಿಗೆ ಬರುತ್ತಾರೆ. ಸರ್ವರ್‌ ಸಮಸ್ಯೆಯಿಂದ ಗಂಟೆಗಟ್ಟಲೆ ಕೇಂದ್ರದ ಮುಂದೆ ಸರದಿಯಲ್ಲಿ ನಿಲ್ಲಬೇಕಾಗಿದೆ. ಒಮ್ಮೊಮ್ಮೊ ಕೇಂದ್ರಗಳನ್ನು ಬಂದ್‌ ಮಾಡುವುದರಿಂದ ನಾಗರಿಕರು ಸಮಸ್ಯೆ ಎದುರಿಸಬೇಕಾಗಿದೆ.

‘ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವೆ ಒದಗಿಸಲು ಅಟಲ್‌ಜೀ ಕೇಂದ್ರ ತೆರೆಯಲಾಗಿದೆ. ವಿವಿಧ ಕಾರಣಗಳಿಂದಾಗಿ ಸಕಾಲದಲ್ಲಿ ಸೇವೆ ಪಡೆಯಲು ಆಗುತ್ತಿಲ್ಲ’ ಎಂದು ಕೇರೂರ ಗ್ರಾಮದ ರೈತ ಶಂಕರ ಪರಗೌಡ ಹೇಳಿದರು.

‘ತಾಲ್ಲೂಕಿನಲ್ಲಿರುವ ಕೇಂದ್ರಗಳಿಂದ ಜನರಿಗೆ ಸಕಾಲದಲ್ಲಿ ಸೇವೆ ದೊರಕುತ್ತಿಲ್ಲ ಎಂಬ ದೂರು ಗಮನಕ್ಕೆ ಬಂದಿಲ್ಲ. ನಿರ್ದಿಷ್ಟ ಗ್ರಾಮಗಳ ಕೇಂದ್ರಗಳಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಂಡು ಜನರಿಗೆ ಸೇವೆ ನೀಡಲಾಗುವುದು’ ಎಂದು ತಹಶೀಲ್ದಾರ್ ಸಿ.ಎಸ್‌.ಕುಲಕರ್ಣಿ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !