ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ವಾಸ್ತವ್ಯದ ನಂತರವೂ ಅಭಿವೃದ್ಧಿ ಕಾಣದ ಗ್ರಾಮ!

ಎಚ್‌ಡಿಕೆ ವಾಸ್ತವ್ಯ ಮಾಡಿದ್ದ ಗ್ರಾಮ;
Last Updated 7 ಜೂನ್ 2019, 12:44 IST
ಅಕ್ಷರ ಗಾತ್ರ

ಅಥಣಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ವಾಸ್ತವ್ಯ ಮಾಡಿದ್ದ ಅಥಣಿ ತಾಲ್ಲೂಕಿನ ಪಿ.ಕೆ. ನಾಗನೂರ ಗ್ರಾಮದ ಸ್ಥಿತಿ ಬಹುತೇಕ ಮೊದಲಿದ್ದಂತೆ ಇದೆ. ಮುಖ್ಯಮಂತ್ರಿ ವಾಸ್ತವ್ಯದ ನಂತರವೂ ಯಾವುದೇ ಮಹತ್ತರ ಬದಲಾವಣೆಗಳಾಗಿಲ್ಲ. ಕೆಲವು ಕಡೆ ರಸ್ತೆಗಳಾಗಿದ್ದು ಬಿಟ್ಟರೆ, ಇನ್ನುಳಿದ ಯಾವ ಭರವಸೆಗಳೂ ಈಡೇರಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2006ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದಿತ್ತು. ನದಿ ಪಾತ್ರದಲ್ಲಿದ್ದ ಅಥಣಿ ತಾಲ್ಲೂಕಿನ 28 ಗ್ರಾಮಗಳು ಹಾನಿಗೊಳಗಾಗಿದ್ದವು. ಸಾವಿರಾರು ಜನರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರು. ಸಂತ್ರಸ್ತರ ಸಮಸ್ಯೆಯನ್ನು ಖುದ್ದು ಆಲಿಸಲು ಕುಮಾರಸ್ವಾಮಿ ಆಗಸ್ಟ್‌ 4ರಂದು ನಾಗನೂರು ಗ್ರಾಮದ ಸಿದ್ಧಾರೂಢ ಮಠದಲ್ಲಿ ವಾಸ್ತವ್ಯ ಮಾಡಿದ್ದರು. ರಾತ್ರಿಯಿಡೀ ಸಂತ್ರಸ್ತರ ಅಳಲಿಗೆ ಕಿವಿಯಾದರು. ಕೆಲವು ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಸೂಚಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಭರವಸೆಗಳ ಸುರಿಮಳೆ:

ಗ್ರಾಮಸ್ಥರ ಜೊತೆ ಸಂವಾದ ನಡೆಸಿದ ನಂತರ ಕುಮಾರಸ್ವಾಮಿ ಅವರು ಗ್ರಾಮದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದರು. ಹಿಪ್ಪರಗಿ ಆಣೆಕಟ್ಟಿನ ಹಿನ್ನೀರಿನಿಂದ ಮುಳುಗಡೆಯಾದ ಎಲ್ಲ ಗ್ರಾಮಗಳನ್ನು ಸ್ಥಳಾಂತರಿಸುವುದು, ನದಿ ದಡದಲ್ಲಿ ಇರುವ ಎಲ್ಲ ಗ್ರಾಮಗಳಿಗೆ ಎತ್ತರದ ರಸ್ತೆಗಳನ್ನು ನಿರ್ಮಾಣ ಮಾಡುವುದು, ಸವಳು– ಜವಳು ಭೂಮಿಯನ್ನು ಅಭಿವೃದ್ಧಿ ಪಡಿಸುವುದು, ಹಿಪ್ಪರಗಿ ಆಣೆಕಟ್ಟಿಗೆ ಹೊಂದಿಕೊಂಡಿರುವ ಭೂ ಕೊರೆತ ನಿಲ್ಲಿಸುವುದಕ್ಕೆ ತಡೆಗೋಡೆ ನಿರ್ಮಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದರು.

‘ಇದಲ್ಲದೇ, ಮುಳಗಡೆಯ ಪ್ರದೇಶದಲ್ಲಿ ಹಾನಿಯಾದ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ ₹ 55,000 ಘೋಷಣೆ ಮಾಡಿದ್ದರು. ಸುವರ್ಣ ಗ್ರಾಮ ಯೋಜನೆಯಡಿ ಅಥಣಿ ತಾಲ್ಲೂಕಿನ ಎಲ್ಲ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದರು. ಇವುಗಳಲ್ಲಿ ಬಹುತೇಕ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ’ ಎಂದು ಬಾಬುರಾವ್‌ ಮಾಂಗ್‌ ಸ್ಮರಿಸಿದರು.

‘ಇದುವರೆಗೆ ಯಾವುದೇ ಗ್ರಾಮಗಳ ಸ್ಥಳಾಂತರವಾಗಿಲ್ಲ. ಸವಳು– ಜವಳು ಸಮಸ್ಯೆ ಈಗ ಇನ್ನಷ್ಟು ತೀವ್ರವಾಗಿದೆ. ಕೃಷಿ ಜಮೀನು ಸಂಪೂರ್ಣ ಹಾಳಾಗಿದ್ದು, ರೈತರು ಕಷ್ಟದಲ್ಲಿ ಬೇಸಾಯ ಮಾಡುವಂತಾಗಿದೆ. ಇಂತಹ ಜಮೀನುಗಳನ್ನು ಅಭಿವೃದ್ಧಿಪಡಿಸಲು ಇದುವರೆಗೆ ಯಾವುದೇ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ವಾಸ್ತವ್ಯ ಮಾಡಿದ ಮರು ವರ್ಷವೇ ಕುಮಾರಸ್ವಾಮಿ ಅವರು ಅಥಣಿ ತಾಲ್ಲೂಕಿನ 10 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದರು. ಆದರೆ, ಕೆಲವೇ ತಿಂಗಳ ಬಳಿಕ ಅವರು ಅಧಿಕಾರ ಕಳೆದುಕೊಂಡರು. ನಂತರ ಈ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ಆಗಲಿಲ್ಲ. ಪ್ರತಿ ಹೆಕ್ಟೇರ್‌ ಬೆಳೆ ಪರಿಹಾರ ಕೇವಲ ₹ 2,000 ಮಾತ್ರ ದೊರೆಯಿತು’ ಎಂದು ಬಸಗೌಡ ಪಾಟೀಲ ಹೇಳಿದರು.

‘ಗ್ರಾಮದಲ್ಲಿ ಕೆಲವು ಕಡೆ ರಸ್ತೆಗಳನ್ನು ನಿರ್ಮಿಸಲಾಗಿದೆ. ಶಾಲೆ– ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ನದಿ ದಂಡೆ ಸಮೀಪದ ರಸ್ತೆಗಳನ್ನು ಎತ್ತರಿಸಿ, ನಿರ್ಮಿಸಲಾಗಿದೆ. ಇವಿಷ್ಟು ಕೆಲಸಗಳು ಮಾತ್ರ ಆಗಿವೆ. ಊರಲ್ಲಿ ಇದುವರೆಗೆ ಸ್ಮಶಾನ ಭೂಮಿ ಇಲ್ಲ. ನದಿ ದಡದಲ್ಲಿ ಇಲ್ಲದಿದ್ದರೆ ಹೊಲಗಳಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿ ವಾಸ್ತವ್ಯದ ನಂತರವೂ ಗ್ರಾಮದ ಚಿತ್ರಣ ಬದಲಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT