ಮಂಗಳವಾರ, ನವೆಂಬರ್ 24, 2020
19 °C
ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಹಕಾರ ಸಚಿವ ಸೋಮಶೇಖರ್

‘ಆತ್ಮನಿರ್ಭರ’ದಲ್ಲಿ ₹ 630 ಕೋಟಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ₹ 20 ಲಕ್ಷ ಕೋಟಿಯ ‘ಆತ್ಮನಿರ್ಭರ’ ಯೋಜನೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ಇಲಾಖೆಯಿಂದ ₹ 630 ಕೋಟಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನೇತೃತ್ವದಲ್ಲಿ ಇಲ್ಲಿನ ಮಹಾಂತೇಶ ನಗರದ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 40ಸಾವಿರ ವಿವಿಧ ಸಹಕಾರ ಸಂಸ್ಥೆಗಳಿವೆ. ಕೋಟ್ಯಂತರ ಮಂದಿ ಸಾಲ, ಲಕ್ಷಾಂತರ ಮಂದಿ ಉದ್ಯೋಗ ಮತ್ತು 2.30 ಕೋಟಿ ಜನರು ಸದಸ್ಯತ್ವ ಹೊಂದಿದ್ದಾರೆ. ಆರ್ಥಿಕವಾಗಿ ತೊಂದರೆಗೆ ಒಳಗಾದವರಿಗೆ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್‌ಗಳ ಮೂಲಕ ಸಾಲ ಕೊಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಿರಸ್ಕರಿಸುತ್ತಿಲ್ಲ:

‘ನಾನು ಬಹಳ ಕೆಎಂಎಫ್‌ ಅಧ್ಯಕ್ಷರನ್ನು ನೋಡಿದ್ದೇನೆ. ಆದರೆ, ಹಾಲಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಎಲ್ಲ ಜಿಲ್ಲಾ ಒಕ್ಕೂಟಗಳ ಅಧ್ಯಕ್ಷರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. 2.11 ಕೋಟಿ ಲೀಟರ್ ಹಾಲನ್ನು ಕೋವಿಡ್ ಲಾಕ್‌ಡೌನ್ ವೇಳೆ ಹೈನುಗಾರರಿಂದ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ್ದು ದೊಡ್ಡ ಸಾಧನೆಯೇ ಸರಿ. ಪ್ರಸ್ತುತ ಹಾಲು ಉತ್ಪಾದನೆ ಜಾಸ್ತಿಯಾಗಿದೆ. ಆದರೆ, ತಿರಸ್ಕರಿಸದೆ ಎಲ್ಲರಿಂದಲೂ ಖರೀದಿಸಲಾಗುತ್ತಿದೆ. ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ, 70 ಹಾಲಿನ ಉತ್ಪನ್ನಗಳನ್ನು ಕೆಎಂಎಫ್‌ ಹೊಂದಿತ್ತು. ಈಗ ಇದು 140ರ ಗಡಿ ದಾಟಿದೆ. ಕೆಎಂಎಫ್‌ ₹ 130 ಕೋಟಿ ಲಾಭದಲ್ಲಿದೆ’ ಎಂದು ತಿಳಿಸಿದರು.

‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡುವ ವೇಳೆ ನಡೆದ ಹೋಮಕ್ಕೆ ಕೆಎಂಎಫ್ ತುಪ್ಪ ಬಳಸಲಾಯಿತು. ಈಗ ತಿರುಪತಿಗೂ ಇಲ್ಲಿಂದ ತುಪ್ಪ ಕಳುಹಿಸಲಾಗುತ್ತಿದೆ. ಇದು ಹೆಮ್ಮೆಯ ಸಂಗತಿ’ ಎಂದರು.

ಮೆಗಾ ಡೇರಿ:

‘ಬೆಳಗಾವಿಯಲ್ಲಿ 100 ಎಕರೆ ಜಾಗದಲ್ಲಿ ಮೆಗಾ ಡೇರಿ ಸ್ಥಾಪನೆಗೆ ಬಾಲಚಂದ್ರ ಯೋಜಿಸಿದ್ದಾರೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತದೆ. ಹಾಲಿನ ಪುಡಿಯನ್ನು ಇಲ್ಲಿಯೇ ಮಾಡುವುದರಿಂದ, ನಷ್ಟ ತಪ್ಪಿಸಬಹುದಾಗಿದೆ’ ಎಂದು ಹೇಳಿದರು.

ಹಾಲು ಉತ್ಪಾದಕ ಸಂಘಗಳಿಗೆ ಆರ್ಥಿಕ ನೆರವಿನ ಚೆಕ್‌ ವಿತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ‘ಕೆಎಂಎಫ್‌ನ ಕಾರ್ಯವೈಖರಿಯು ಗುಜರಾತ್‌ನ ಅಮೂಲ್ ನೆನಪಿಸುತ್ತಿದೆ. ಸಹಕಾರ ಇಲಾಖೆಯಲ್ಲಿ ಹಲವು ಸಕಾರಾತ್ಮಕ ಬದಲಾವಣೆ ಮಾಡಲಾಗುತ್ತಿದೆ. ನಮ್ಮ ಇಲಾಖೆಯಿಂದಲೂ ಹಲವು ಯೋಜನೆಗಳಿದ್ದು, ಸ್ತ್ರೀಶಕ್ತಿ ಸಂಘಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಸಂಗ್ರಹ ಹೆಚ್ಚಬೇಕು:

ಅಧ್ಯಕ್ಷತೆ ವಹಿಸಿದ್ದ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ‘ಬೆಳಗಾವಿಯಲ್ಲಿ ಮೆಗಾ ಡೇರಿ ಸ್ಥಾಪಿಸಬೇಕಾದರೆ ನಿತ್ಯ 4ರಿಂದ 5 ಲಕ್ಷ ಲೀಟರ್ ಹಾಲು ಸಂಗ್ರಹಕ್ಕೆ ಜಿಲ್ಲಾ ಒಕ್ಕೂಟದವರು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪಶುಸಂಗೋಪನಾ ಸಚಿವ ಪ್ರಭು ಚವಾಣ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅನಿಲ ಬೆನಕೆ, ಕೆ.ವೈ. ನಂಜೇಗೌಡ, ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾವುಲ್ಲಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಬೆಮುಲ್ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್, ರಾಜ್ಯದ 14 ಒಕ್ಕೂಟಗಳ ಅಧ್ಯಕ್ಷರು ಇದ್ದರು.

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಸ್ವಾಗತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು