ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 26 ಮಂದಿ ನಾಮಪತ್ರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಚುನಾವಣಾ ಕಾವು
Last Updated 24 ಏಪ್ರಿಲ್ 2018, 11:12 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಧಾನಸಭಾ ಚುನಾವಣೆಯ ಕಾವು ಏರಿದ್ದು, ಸಚಿವ ಯು.ಟಿ.ಖಾದರ್‌, ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್‌.ಲೋಬೊ, ಬಿ.ಎ.ಮೊಹಿಯುದ್ದೀನ್ ಬಾವಾ ಸೇರಿದಂತೆ 26 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಮಂದಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಮೂಡುಬಿದಿರೆ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಮೂವರು, ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ಕ್ಷೇತ್ರಗಳಲ್ಲಿ ತಲಾ ಇಬ್ಬರು ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ಸೋಮವಾರ ಉಮೇದುವಾರಿಕೆ ಸಲ್ಲಿಸಿದರು.

ಮಂದಿರ, ಚರ್ಚ್‌, ಮಸೀದಿ ಭೇಟಿ: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಜೆ.ಆರ್‌.ಲೋಬೊ ನಗರದ ವಿವಿಧ ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಕದ್ರಿ ಮಂಜುನಾಥೇಶ್ವರ ದೇವಾ ಲಯ, ಬಲ್ಮಠದ ಸಿಎಸ್‌ಐ ಶಾಂತಿ ಚರ್ಚ್‌, ಮರೋಳಿ ಸೂರ್ಯನಾರಾಯಣ ದೇವಾಲಯ, ಬಿಕರ್ನಕಟ್ಟೆಯ ಇನ್‌ಫೆಂಟ್‌ ಜೀಸಸ್‌ ಚರ್ಚ್, ಮಂಗಳಾದೇವಿ ದೇವಸ್ಥಾನ ಮತ್ತು ಝೀನತ್‌ ಬಕ್ಷ್‌ ಕೇಂದ್ರೀಯ ಜುಮ್ಮಾ ಮಸೀದಿಗೆ ಭೇಟಿ ನೀಡಿದ ಲೋಬೊ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅಲೋಶಿಯಸ್‌ ಪಾಲ್‌ ಡಿಸೋಜ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ನಂತರ ಬೃಹತ್‌ ಸಂಖ್ಯೆಯ ಬೆಂಬಲಿಗರೊಂದಿಗೆ ಕುದ್ರೋಳಿ ಗೋಕರ್ಣನಾಥ ದೇವಾಲಯದಿಂದ ಮಹಾನಗರ ಪಾಲಿಕೆವರೆಗೆ ಮೆರವಣಿಗೆ
ಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಎಸ್‌.ಎಂ.ಮಸೂದ್‌ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಜೊತೆಗಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಲೋಬೊ, ‘ಐದು ವರ್ಷಗಳ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಯಾವುದೇ ಕೋಮುಗಲಭೆ ಆಗಿಲ್ಲ ಎಂಬುದು ಸಂತೋಷದ ಸಂಗತಿ. ಶಾಸಕನಾಗಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೆಲಸ ಮುಂದುವರಿಸಲು ಜನರು ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ರಥಬೀದಿಯ ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ ಕಾಮತ್‌ ಕೂಡ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಿಂದಲೇ ಮೆರವಣಿಗೆ ಆರಂಭಿಸಿದರು. ಬೃಹತ್‌ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಾಜಿ ಶಾಸಕ ಎನ್‌.ಯೋಗೀಶ್‌ ಭಟ್‌ ಅವರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುನಿಲ್‌ ಕುಮಾರ್‌ ಬಜಾಲ್‌ ನಾಮಪತ್ರ ಸಲ್ಲಿಕೆಗೂ ಮುನ್ನ ಪಿವಿಎಸ್‌ ವೃತ್ತದಿಂದ ಪಾಲಿಕೆ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೆಂಪು ವಸ್ತ್ರಧಾರಿಗಳಾಗಿದ್ದ ಸಿಪಿಎಂ ಕಾರ್ಯಕರ್ತರು ಸುನಿಲ್‌ ಕುಮಾರ್‌ ಪರ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಮಾಜಿ ಪೊಲೀಸ್‌ ಅಧಿಕಾರಿ ಎಂ.ಸಿ.ಮದನ್‌ ಕೂಡ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಬೈಸಿಕಲ್‌ ಏರಿದ ಬಾವಾ: ಲೇಡಿಹಿಲ್‌ ವೃತ್ತದಿಂದ ಕರಾವಳಿ ಮೈದಾನದವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ, ಅಲ್ಲಿಂದ ಬೈಸಿಕಲ್‌ ಏರಿ ಮಹಾನಗರ ಪಾಲಿಕೆ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆಯೇ ಸುರತ್ಕಲ್‌ನ ಸೇಕ್ರೇಡ್‌ ಹಾರ್ಟ್‌ ಚರ್ಚ್‌, ಗುರು ಅಂಬಾ ಮಹಾಮ್ಮಾಯ ದೇವಾಲಯ ಮತ್ತು ಹೊಸಬೆಟ್ಟು ಜುಮ್ಮಾ ಮಸೀದಿಗೆ ತೆರಳಿ ಶಾಸಕರು ಪ್ರಾರ್ಥನೆ ಸಲ್ಲಿಸಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಬಾವಾ, ‘ಐದು ವರ್ಷಗಳ ಕಾಲ ನಗರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಇನ್ನೂ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವ ಯೋಚನೆ ನನ್ನಲ್ಲಿ ಇದೆ. ಮತ್ತೊಮ್ಮೆ ನನ್ನನ್ನು ಆರಿಸುವ ಮೂಲಕ ಜನರು ಅಭಿವೃದ್ಧಿಯ ಪರ ನಿಲ್ಲುತ್ತಾರೆ ಎಂಬ ಭರವಸೆ ಇದೆ’ ಎಂದರು.

ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ.ವೈ.ಭರತ್‌ ಶೆಟ್ಟಿ, ಅದಕ್ಕೂ ಮೊದಲು ಕಾವೂರಿನ ಮಹಾಲಿಂಗೇಶ್ವರ ದೇವಸ್ಥಾನದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಆತಂಕವೇನೂ ಇಲ್ಲ: ತೊಕ್ಕೊಟ್ಟಿನ ಗಟ್ಟಿ ಸಮಾಜ ಭವನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಿ ಅಲ್ಲಿಂದ ಮಂಗಳೂರು ಸಹಾಯಕ ಆಯುಕ್ತರ ಕಚೇರಿಗೆ ಬಂದ ಸಚಿವ ಯು.ಟಿ.ಖಾದರ್‌ ಮಂಗಳೂರು ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರು ಉಳ್ಳಾಲ ದರ್ಗಾ, ಅಲ್ಲಿನ ಭಗವತೀ ಕ್ಷೇತ್ರ, ಸೋಮೇಶ್ವರ ದೇವಸ್ಥಾನ, ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಉಮಾಮಹೇಶ್ವರಿ ದೇವಸ್ಥಾನ ಮತ್ತು ಕಾಪಿಕಾಡ್‌ನ ಸೇಂಟ್ ಸೆಬಾಸ್ಟಿಯನ್‌ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

‘ಚುನಾವಣೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ನಾನು ಬಯಸುತ್ತೇನೆ. ಯಾರಿಗೂ ಚುನಾವಣೆಗೆ ಸ್ಪರ್ಧಿಸದಂತೆ ಒತ್ತಡ ಹೇರಿಲ್ಲ. ನನಗೆ ಚುನಾವಣೆ ಕುರಿತು ಆತಂಕವೇ ಇಲ್ಲ. ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು ಖಾದರ್‌ ಹೇಳಿದರು.

ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಂತೋಷ್‌ಕುಮಾರ್ ರೈ ಬೋಳಿಯಾರ್‌, ‘ಕ್ಷೇತ್ರದಲ್ಲಿ ಮತೀಯ ದ್ವೇಷದ ರಾಜಕಾರಣ ನಡೆಯುತ್ತಿದೆ. ಅದನ್ನು ಕೊನೆಗಾಣಿಸಿ, ಅಭಿವೃದ್ಧಿಗೆ ಚಾಲನೆ ಕೊಡುವುದು ನನ್ನ ಗುರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT