ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜು ಆರಂಭಕ್ಕೆ ತಯಾರು

ಸರ್ಕಾರದ ನಿರ್ಧಾರಕ್ಕೆ ಎಐಡಿಎಸ್‌ಒ ಆಕ್ಷೇಪ
Last Updated 24 ಅಕ್ಟೋಬರ್ 2020, 17:10 IST
ಅಕ್ಷರ ಗಾತ್ರ

ಬೆಳಗಾವಿ: ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ನ. 17ರಿಂದ ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಜಿಲ್ಲೆಯಲ್ಲಿ ಹರ್ಷ ವ್ಯಕ್ತವಾಗಿದೆ. ಆದರೆ, ಕೆಲ ವಿದ್ಯಾರ್ಥಿ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.

ಆನ್‌ಲೈನ್‌ ಹಾಗೂ ಆಫ್‌ಲೈನ್ ಎರಡಕ್ಕೂ ಅವಕಾಶವಿದೆ. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಎಂದೂ ತಿಳಿಸಲಾಗಿದೆ. ಇದರಿಂದಾಗಿ ಆಸಕ್ತ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹಾಜರಾಗಬಹುದು. ಉಳಿದವರಿಗೆ ಆನ್‌ಲೈನ್‌ನಲ್ಲಿ ಕಲಿಯುವುದಕ್ಕೆ ಅವಕಾಶವಿದೆ. ಬಹಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಇರಲಿಲ್ಲ. ನೆಟ್‌ವರ್ಕ್‌ ಮೊದಲಾದ ಸಮಸ್ಯೆಗಳಿದ್ದವು. ಅಂಥವರಿಗೆ ಕಾಲೇಜುಗಳಲ್ಲಿ ಕಲಿಯುವುದಕ್ಕೆ ಅನುಕೂಲ ಮಾಡಿಕೊಡಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ ಎನ್ನುತ್ತಾರೆ ಕಾಲೇಜುಗಳ ಆಡಳಿತ ಮಂಡಳಿಗಳವರು.

ಕೋವಿಡ್–19 ಲಾಕ್‌ಡೌನ್‌ ಕಾರಣದಿಂದ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಮಾರ್ಚ್‌ ಮೂರನೇ ವಾರದಿಂದ ಚಟುವಟಿಕೆ ಇರಲಿಲ್ಲ. ಈಗ ತೆರಯಲು ಸರ್ಕಾರ ಅವಕಾಶ ಮಾಡಿಕೊಟ್ಟಿರುವುದರಿಂದ ಸಿದ್ಧತೆ ಕೈಗೊಳ್ಳಲು ಆಡಳಿತ ಮಂಡಳಿಗಳು ಮುಂದಾಗಿವೆ. ಸ್ಯಾನಿಟೈಸ್, ಅಂತರ ಕಾಯ್ದುಕೊಳ್ಳಲು ಬೇಕಾದ ವ್ಯವವ್ಥೆ ಮಾಡಿಕೊಳ್ಳುವ ಸಿದ್ಧತೆ ಇನ್ನಷ್ಟೆ ಆರಂಭವಾಗಬೇಕಿದೆ.

‘ಕಾಲೇಜುಗಳ ಆರಂಭಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬೋಧಕರು ಆಫ್‌ಲೈನ್ ಹಾಗೂ ಆನ್‌ಲೈನ್‌ ಎರಡರಲ್ಲೂ ಬೋಧಿಸುವುದು ಪ್ರಯೋಗಿಕವಾಗಿ ಕಾರ್ಯಸಾಧುವೆ ಎನ್ನುವುದನ್ನು ನೋಡಬೇಕಾಗುತ್ತದೆ. ಸರ್ಕಾರದಿಂದ ಅಧಿಕೃತ ಮಾರ್ಗಸೂಚಿಗಳು ಬಂದ ನಂತರ ಯೋಜನೆ ರೂಪಿಸಲಾಗುವುದು. ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳೆಲ್ಲರ ಹಿತವನ್ನೂ ನೋಡಿಕೊಳ್ಳಬೇಕಾಗುತ್ತದೆ’ ಎಂದು ಈ ಭಾಗದಲ್ಲಿ ಹಲವು ಕಾಲೇಜುಗಳನ್ನು ಹೊಂದಿರುವ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಾಲೇಜುಗಳ ಆರಂಭದ ವಿಷಯದಲ್ಲಿ ಯಾವುದೇ ಹಂತದಲ್ಲಿ ಅಥವಾ ಸಂಬಂಧಪಟ್ಟ ಯಾರೊಂದಿಗೂ ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಒಂದೆಡೆ ಶಾಲಾ ಮಕ್ಕಳಿಗೆ ಕೈಗೊಂಡಿದ್ದ ‘ವಿದ್ಯಾಗಮ’ ಚಟುವಟಿಕೆ ಕೈಬಿಟ್ಟು ಶಾಲೆಗಳಿಗೆ ರಜೆ ಘೋಷಿಸಿರುವ ಸರ್ಕಾರವು ಇನ್ನೊಂದೆಡೆ ಕಾಲೇಜುಗಳನ್ನು ಪ್ರಾರಂಭಿಸುವ ನಿರ್ಧಾರ ಪ್ರಕಟಿಸಿರುವುದು ವಿರೋಧಾಭಾಸವಾಗಿದೆ. ಕಾಲೇಜುಗಳು ಶುರುವಾರ ನಂತರ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಅದರ ಜವಾಬ್ದಾರಿಯನ್ನು ಸರ್ಕಾರ ಹೊರುವುದೇ?’ ಎಂದು ಎಐಡಿಎಸ್‌ಒ ಜಿಲ್ಲಾ ಸಂಘಟಕ ಮಹಾಂತೇಶ ಬಿಳ್ಳೂರ ಕೇಳಿದ್ದಾರೆ.

‘ಪರಿಸ್ಥಿತಿ ಅಧ್ಯಯನ ಮಾಡದೆ ಕೈಗೊಂಡಿರುವ ಸರ್ಕಾರದ ಈ ನಿರ್ಧಾರವನ್ನು ಸಂಘಟನೆ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ಖಾಸಗಿ ಮ್ಯಾನೇಜ್‌ಮೆಂಟ್‌ಗಳ ಲಾಬಿಗೆ ಬಲಿಯಾಗದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತಾಸಕ್ತಿಗೆ ಬದ್ಧವಾಗಿರಬೇಕು’ ಎಂದು ಆಗ್ರಹಿಸಿದ್ದಾರೆ.

***

ಕಾಲೇಜುಗಳನ್ನು ಪುನರಾರಂಭ ಮಾಡಲು ವಿಶ್ವವಿದ್ಯಾಲಯದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ, ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಕಾಲೇಜುಗಳನ್ನು ನಡೆಸಲಾಗುವುದು
ಪ್ರೊ.ಎಂ. ರಾಮಚಂದ್ರಗೌಡ
ಕುಲಪತಿ, ಆರ್‌ಸಿಯು

***

ಆನ್‌ಲೈನ್‌ನಲ್ಲಿ ಕಲಿಕೆಗೆ ವಿಶೇಷವಾಗಿ ಹಳ್ಳಿಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಈಗ ಸರ್ಕಾರ ಕಾಲೇಜುಗಳನ್ನು ಆರಂಭಿಸಲು ಅವಕಾಶ ಕೊಟ್ಟಿರುವುದರಿಂದ ಅಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾಲೇಜುಗಳನ್ನು ನಡೆಸಲಾಗುವುದು
ಪ್ರಭಾಕರ ಕೋರೆ
ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ

***

ಸರ್ಕಾರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇವೆ.ಪ್ರಸ್ತುತ ವ್ಯವಸ್ಥೆಯಲ್ಲಿ ಆನ್‌ಲೈನ್ ತರಗತಿಯು ಆಫ್‌ಲೈನ್‌ಗೆ ಪರ್ಯಾಯವಾಗುವುದಿಲ್ಲ. ವಿದ್ಯಾರ್ಥಿಗಳು ಕಾಲೇಜು ಆರಂಭವಾಗಲಿ ಎಂದು ಬಯಸುತ್ತಿದ್ದಾರೆ. ಪೋಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ನೋಡಬೇಕಿದೆ
ಡಾ.ಸೂರ್ಯಕುಮಾರ್ ಕನಯ್ಯಾ
ಪ್ರಚಾರ ಸಂಯೋಜಕ, ಕೆಎಲ್‌ಎಸ್‌–ಜಿಐಟಿ, ಬೆಳಗಾವಿ

***

ಕಾಲೇಜುಗಳಲ್ಲಿ ಆನ್‌ಲೈನ್ ಸರಿಯಾಗಿರಲಿಲ್ಲ. ಆಫ್‌ಲೈನ್ ತರಗತಿಗಳು ಅಗತ್ಯವಾಗಿವೆ. ಮಾಸ್ಕ್‌, ಸ್ಯಾನಿಟೈಸರ್ ಮೊದಲಾದವುಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕು. ಕಾಲೇಜುಗಳ ಆರಂಭವನ್ನು ಸ್ವಾಗತಿಸುತ್ತೇವೆ
ರೋಹಿತ ಉಮನಾಬಾದಿಮಠ
ಮುಖಂಡ, ಎಬಿವಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT