ಸೋಮವಾರ, ನವೆಂಬರ್ 18, 2019
27 °C
ಕನ್ನಡಾಭಿಮಾನ ಜಾಗೃತಗೊಳಿಸಿದ ಸಂಘಟನೆಗಳು

ಬೆಳಗಾವಿ:‘ರಂಗು’ ತುಂಬಿದ ರಾಜ್ಯೋತ್ಸವ ಮೆರವಣಿಗೆ

Published:
Updated:
Prajavani

ಬೆಳಗಾವಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ ಮತ್ತು ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮರವಣಿಗೆಯು, ನಾಡು–ನುಡಿಯ ಕಲಾ ಶ್ರೀಮಂತಿಕೆಯನ್ನು ತೆರೆದಿಟ್ಟಿತು. ಕನ್ನಡದ ಅಭಿಮಾನ ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು. ಅದ್ಧೂರಿಯಾಗಿ ನಡೆದ ಅಭೂತಪೂರ್ವ ಉತ್ಸವಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾದರು.

ಕನ್ನಡಪರ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದ ಹಾಗೂ ಹಳದಿ–ಕೆಂಪು ಬಣ್ಣದ ಬಾವುಟಗಳ ರಾರಾಜಿಸುವಿಕೆಯ ನಡುವೆ ಕಳೆಗಟ್ಟಿದ ಮೆರವಣಿಗೆಯಲ್ಲಿ 90ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಕಲಾತಂಡಗಳು ಭಾಗವಹಿಸಿದ್ದವು. ಆಕರ್ಷಕ ಮೆರವಣಿಗೆಯು ನೆರೆ ಹಾಗೂ  ಅತಿವೃಷ್ಟಿಯಿಂದಾದ ಸಂಕಟ ಮರೆಸಿತಲ್ಲದೇ, ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಡೆಯುವ ವಿಜಯದಶಮಿ ಮೆರವಣಿಗೆಯನ್ನು ನೆನಪಿಗೆ ತಂದಿತು.

ಕನ್ನಡದ ಬೇರುಗಳು ಗಟ್ಟಿ: ಗಡಿನಾಡಿನಲ್ಲಿ ಕನ್ನಡದ ಬೇರುಗಳು ಗಟ್ಟಿಯಾಗಿ ಬೇರೂರಿವೆ ಎನ್ನುವ ಸಂದೇಶವನ್ನು ಕನ್ನಡ ಮನಸ್ಸುಗಳು ರವಾನಿಸಿದವು.

ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ವೇಷಧಾರಿಗಳು ಗಮನಸೆಳೆದರು. ವಿವಿಧ ಕಲಾತಂಡಗಳು ತಮ್ಮ ಪ್ರತಿಭೆ  ಪ್ರದರ್ಶಿಸಿ, ನೆರೆದಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾದರು. ವಿವಿಧ ಬಡಾವಣೆಗಳಿಂದ ಬರುತ್ತಿದ್ದ ಯುವಕರ ದಂಡು, ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಳ್ಳುತ್ತಿತ್ತು. ದೊಡ್ಡ ದೊಡ್ಡ ಕನ್ನಡ ಬಾವುಟಗಳನ್ನು ಹಾರಿಸುತ್ತಾ ಕನ್ನಡಪರ ಘೋಷಣೆಗಳನ್ನು ಅವರು ಮೊಳಗಿಸುತ್ತಿದ್ದರು. ಆಗಾಗ ಬೀಳುತ್ತಿದ್ದ ತುಂತುರು ಮಳೆಯ ನಡುವೆಯೂ ಜನರ ಉತ್ಸಾಹ ಕುಂದಲಿಲ್ಲ.

ಮುಖ್ಯ ಮೆರವಣಿಗೆಯು ಸಿಪಿಇಡಿ ಮೈದಾನದಿಂದ ಆರಂಭವಾಗಿ, ಕ್ಲಬ್ ರಸ್ತೆ, ರಾಣಿ ಚನ್ನಮ್ಮ ವೃತ್ತ, ಕಾಕತಿವೇಸ್‌ ರಸ್ತೆ, ಶನಿವಾರ ಖೂಟ್‌, ಗಣಪತಿ ಗಲ್ಲಿ, ಕಂಬಳಿ ಖೂಟ್, ಮಠ ಗಲ್ಲಿ, ರವಿವಾರ ಪೇಟೆ, ಕರ್ನಾಟಕ ಚೌಕ್‌, ಕಲ್ಮಠ ರಸ್ತೆ, ಮಾರುತಿ ಗಲ್ಲಿ, ಹುತಾತ್ಮ ಚೌಕ್‌, ಕಿರ್ಲೋಸ್ಕರ್‌ ರಸ್ತೆ, ಬೋಗಾರ್‌ವೇಸ್‌, ಕಾಲೇಜು ರಸ್ತೆ ಮಾರ್ಗದಲ್ಲಿ ಸಂಚರಿಸಿ ಮುಕ್ತಾಯಗೊಂಡಿತು. ಬೇರೆ ಜಿಲ್ಲೆಗಳಿಂದಲೂ ಕನ್ನಡ ಪ್ರೇಮಿಗಳು ಬಂದಿದ್ದರು.

ಯುವಜನರ ಉತ್ಸವ: ಮಕ್ಕಳು, ಯುವಜನತೆ ಮುಖದ ಮೇಲೆ ಕನ್ನಡ ಬಾವುಟದ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಯವಕರು ಡಾಲ್ಬಿ ಹಾಡಿನ ಸದ್ದಿಗೆ ಕುಣಿದು, ಕುಪ್ಪಳಿಸಿ ಸಡಗರದಲ್ಲಿ ಮಿಂದೆದ್ದರು.

ಮಾದರಿ ಗಿಡದ ರೆಂಬೆ–ಕೊಂಬೆಗಳಲ್ಲಿ ಹಣ್ಣು–ತರಕಾರಿಗಳ ಬುಟ್ಟಿ ತೂಗುವಂತೆ ಸಿದ್ಧಪಡಿಸಿದ್ದ ತೋಟಗಾರಿಕೆ ಇಲಾಖೆಯ ರೂಪಕ ವಾಹನ ಗಮನಸೆಳೆಯಿತು. ಬಹುಗ್ರಾಮ ನೀರಾವರಿ ಯೋಜನೆ ಕುರಿತು ಜಿಲ್ಲಾ ಪಂಚಾಯ್ತಿ, ಕೃಷಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಕೃಷಿ ಇಲಾಖೆಯ ಸ್ತಬ್ಧಚಿತ್ರವು ಮಾಹಿತಿ ನೀಡಿತು. ಕಲಾತಂಡಗಳ ಕಲಾವಿದರು ನಾಡಿನ ಕಲಾ ಸಮೃದ್ಧಿಯನ್ನು ತೆರೆದಿಟ್ಟರು. ಥರ್ಮಾಕೋಲ್‌ನಿಂದ ಸಿದ್ಧಪಡಿಸಿದ್ದ ಸುವರ್ಣವಿಧಾನಸೌಧದ ಮಾದರಿ ಗಮನಸೆಳೆಯಿತು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)