ಗುರುವಾರ , ಜನವರಿ 30, 2020
23 °C

ತೇಜೋ– ತುಂಗಭದ್ರಾ ಕಾದಂಬರಿ ‘ರಾಜರ ಕಾಲದ ಶ್ರೀಸಾಮಾನ್ಯನ ಬದುಕಿನ ಚಿತ್ರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ‘ರಾಜ– ರಾಣಿಯರನ್ನು ವೈಭವೀಕರಿಸದೇ ಇತಿಹಾಸದಲ್ಲಿ ಜನಸಾಮಾನ್ಯರ ಬದುಕು ಹೇಗಿತ್ತು ಎನ್ನುವುದನ್ನು ‘ತೇಜೋ– ತುಂಗಭದ್ರಾ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದೇನೆ’ ಎಂದು ಕಾದಂಬರಿಕಾರ ವಸುಧೇಂದ್ರ ಹೇಳಿದರು.

ಇಲ್ಲಿನ ಸಪ್ನ ಬುಕ್‌ ಹೌಸ್‌ ಆಯೋಜಿಸಿದ್ದ ‘ಲೇಖಕನ ಜೊತೆ ಮಾತುಕತೆ’ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರ ಜೊತೆ ಅವರು ಮಾತನಾಡಿದರು.

‘ಇದುವರೆಗೆ ಪ್ರಕಟವಾಗಿರುವ ಇತಿಹಾಸದ ಬಹುತೇಕ ಕಾದಂಬರಿಗಳಲ್ಲಿ ರಾಜ– ರಾಣಿಯರನ್ನು ಹೊಗಳಿರುವುದನ್ನು ನೋಡಿದ್ದೇವೆ. ಯುದ್ಧದ ಭೀಕರತೆಯನ್ನು ಬಣ್ಣಿಸಿದ್ದನ್ನು ಓದಿದ್ದೇವೆ. ಇವುಗಳಿಗಿಂತ ಭಿನ್ನವಾಗಿ ಬರೆಯಬೇಕು ಎಂದು ತೀರ್ಮಾನಿಸಿಕೊಂಡೇ ಕಾದಂಬರಿ ಬರೆಯಲು ಆರಂಭಿಸಿದೆ’ ಎಂದು ಹೇಳಿದರು.

‘ನಾನು ಮೂಲತಃ ಬಳ್ಳಾರಿ ಜಿಲ್ಲೆಯವನು. ಹೀಗಾಗಿ ಹಂಪಿ, ವಿಜಯನಗರ ಸಾಮ್ರಾಜ್ಯ ಸಹಜವಾಗಿ ನನ್ನನ್ನು ಸೆಳೆದಿತ್ತು. ಹಂಪಿಯ ಇತಿಹಾಸ ಓದುತ್ತ ಓದುತ್ತ ಫೋರ್ಚುಗಲ್‌ ಇತಿಹಾಸ ನನ್ನನ್ನು ಆಕರ್ಷಿಸಿತು. ಭಾರತದ ಇತಿಹಾಸದಲ್ಲಿ 15ರಿಂದ ಹಾಗೂ 16ನೇ ಶತಮಾನದ ಕಾಲ ಮಹತ್ವದ ಕಾಲಘಟ್ಟವಾಗಿದೆ. ಇದೇ ಅವಧಿಯನ್ನು ಇಟ್ಟುಕೊಂಡು ಕಾದಂಬರಿ ರಚಿಸಿದ್ದೇನೆ’ ಎಂದರು.

‘ಕಾದಂಬರಿಯ ನಾಯಕ ಪೋರ್ಚುಗಲ್‌ ದೇಶದ ಲಿಸ್ಬನ್‌ ನಗರದ ತೇಜೋ ನದಿಯ ತೀರದವ. ನಾಯಕಿ ಹಂಪಿಯ ತುಂಗಭದ್ರಾ ನದಿಯ ದಂಡೆಯವಳು. ಕರಿ ಮೆಣಸು ವ್ಯಾಪಾರಕ್ಕಾಗಿ ನಾಯಕ ಇಲ್ಲಿಗೆ ಬಂದಾಗ, ನಾಯಕಿಯನ್ನು ಎದುರುಗೊಳ್ಳುತ್ತಾನೆ. ಇದೇ ಎಳೆಯನ್ನು ಇಟ್ಟುಕೊಂಡು ಕಾದಂಬರಿ ಬರೆದಿದ್ದೇನೆ’ ಎಂದು ತಿಳಿಸಿದರು. 

‘ವಿಜಯನಗರ ಸಾಮ್ರಾಜ್ಯ ನಾವು ಅಂದುಕೊಂಡಷ್ಟು ವೈಭವಯುತವಾಗಿರಲಿಲ್ಲ. ಆ ಕಾಲದಲ್ಲಿಯೂ ಕ್ರೌರ್ಯ, ಅನ್ಯಾಯಗಳು ನಡೆಯುತ್ತಿದ್ದವು. ಸತಿ ಸಹಗಮನದಂತಹ ಹೀನಾಯ ಪದ್ಧತಿಯೂ ಜಾರಿಯಲ್ಲಿತ್ತು. ತನ್ನ ನಿಧನಾನಂತರ ಹೆಣ್ಣು ಬೇರೊಬ್ಬರ ಪಾಲಾಗಬಾರದು ಅಥವಾ ಬೇರೆ ಪುರುಷರ ಆಸೆಗಾಗಿ ಪತಿಗೆ ವಿಷಹಾಕಬಾರದು ಎನ್ನುವ ಆತಂಕದಿಂದ ಈ ಪದ್ಧತಿಯನ್ನು ಜಾರಿಗೆ ತಂದಿರುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ನಟಿಸಿದ್ದ ‘ಪದ್ಮಾವತ್‌’ ಚಿತ್ರದಲ್ಲಿ ಸತಿ ಸಹಗಮನ ಪದ್ಧತಿಯನ್ನು ವೈಭವಿಕರಿಸಲಾಗಿತ್ತು. ಯಾವ ಹೆಣ್ಣು ತಾನೇ ಸಂತೋಷದಿಂದ ಬೆಂಕಿಗೆ ಹಾರಲು ಇಚ್ಛಿಸುತ್ತಾಳೆ? ಇಂತಹದ್ದನ್ನು ನಂಬಲು ಸಾಧ್ಯವಿಲ್ಲ’ ಎಂದು ನುಡಿದರು.

ಸಪ್ನಾ ಬುಕ್‌ ಹೌಸ್‌ನ ಬೆಳಗಾವಿ ಶಾಖೆಯ ಮ್ಯಾನೇಜರ್‌ ರಘು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು