ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗಕ್ಕೆ ಹೆಬ್ಬಾಳಕರ ವಿರುದ್ಧ ದೂರು

Last Updated 25 ಜನವರಿ 2023, 16:30 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಮಿಕ್ಸರ್ ಹಾಗೂ ಸ್ಟೀಲ್ ಡಬ್ಬಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ. ಈ ಬಗ್ಗೆ ಜ.26ರಂದು ಬೆಂಗಳೂರಿನಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ ಸೇರಿ ಮೂವರ ವಿರುದ್ಧ ಭ್ರಷ್ಟಾಚಾರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ದೂರು ನೀಡಿದ್ದಾರೆ. ರಮೇಶ ಜಾರಕಿಹೊಳಿ ₹6,000 ಹಂಚಿರುವ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಬಹಿರಂಗವಾಗಿ ಜನರಿಗೆ ಆಮಿಷ ಒಡ್ಡುತ್ತಿರುವುದನ್ನು ನಾವು ತೋರಿಸುತ್ತೇವೆ’ ಎಂದ ಅವರು, ಮಿಕ್ಸರ್ ಹಂಚಿಕೆ ಬಗ್ಗೆ ವಿಡಿಯೊ ಒಂದನ್ನು ತೋರಿಸಿದರು.

‘ಡಿ.ಕೆ. ಶಿವಕುಮಾರ ಪ್ರತಿಭಾ ಪುರಸ್ಕಾರ ಪಡೆಯಲು ಜೈಲಿಗೆ ಹೋಗಿದ್ದರಾ? ಬಿಜೆಪಿಯತ್ತ ಬೆರಳು ತೋರುವ ಬದಲು ತಮ್ಮ ಭ್ರಷ್ಟಾಚಾರ ನೋಡಿಕೊಳ್ಳಲಿ. ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ಡಿ.ಕೆ.ಶಿ ಎಂಥ ಮನುಷ್ಯನೆಂದು ಗೊತ್ತಾದರೆ ದೇವರೇ ನಗಬಹುದು’ ಎಂದರು.

‘ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ₹35 ಸಾವಿರ ಕೋಟಿ ಹಗರಣ ನಡೆಸಲು ಆಶ್ರಯದಾತರು. ಅವರ ಪಕ್ಷದವರು ಮರಳು ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ’ ಎಂದು ಆರೋಪಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ:

ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಜ. 29 ಹಾಗೂ 30ರಂದು ನಗರದ ಪ್ರೆಸಿಡೆನ್ಸಿಯಲ್ ಕ್ಲಬ್‌ನಲ್ಲಿ ನಡೆಯಲಿದೆ ಎಂದು ರವಿಕುಮಾರ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಸಿ. ಪಾಟೀಲ ನೇತೃತ್ವ ವಹಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT